Advertisement
ದ.ಕ. ಜಿಲ್ಲೆಯಲ್ಲಿ ಮಳೆಗೆ 2 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, 11 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ನಗರದಲ್ಲಿ ಬಿರುಸಿನ ಮಳೆಯಾಗಿದ್ದು, ಕೆಲವು ಕಡೆ ಹಾನಿ ಉಂಟಾಗಿದೆ. ಪಡೀಲ್ ಕಣ್ಣೂರು ಸಮೀಪದ ಬಳ್ಳೂರುಗುಡ್ಡೆ ಎಂಬಲ್ಲಿ ಮನೆಯೊಂದರ ಪಕ್ಕದ ಗುಡ್ಡ ಕುಸಿದು ಸುಮಾರು 7ಕ್ಕೂ ಅಧಿಕ ಮನೆಗಳು ಅಪಾಯದ ಅಂಚಿನಲ್ಲಿವೆ. ಮೂರು ಮನೆಗಳು ಯಾವುದೇ ಸಂದರ್ಭದಲ್ಲಿ ಬೀಳುವ ಅಪಾಯದಲ್ಲಿದ್ದು, ಸಮೀಪದ 4ಕ್ಕೂ ಅಧಿಕ ಮನೆಗಳು ಆತಂಕದಲ್ಲಿದೆ. ಈಗಾಗಲೇ ಐದು ಮನೆಯ ಜನರನ್ನು ಸ್ಥಳಾಂತರಿಸಲಾಗಿದೆ. ಅಗತ್ಯವಿರುವವರಿಗೆ ಸಮೀಪದ ಅಂಗನವಾಡಿಯಲ್ಲಿ ಆಶ್ರಯ, ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಅಧಿಕಾರಿಗಳು ಪರಿಶೀಲಿಸಿದರು. ನಗರದ ಪಚ್ಚನಾಡಿಯ ಭಟ್ರಕೋಡಿ ಬಳಿ ತಡೆಗೋಡೆ ಕುಸಿದು ಕಾಂಕ್ರಿಟ್ ರಸ್ತೆಗೆ ಹಾನಿ ಉಂಟಾಗಿದೆ. ಕೆಲವು ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿ, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
Related Articles
Advertisement
ಜಿಲ್ಲಾಡಳಿತದಿಂದ ಮುಂಜಾಗ್ರತೆ :
ಭಾರೀ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ 88 ಕಡೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಸನ್ನದ್ಧವಾಗಿದೆ. ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ. ತೆರೆಯಲಾಗಿದೆ. ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ ಸೂಚಿಸಲಾಗಿದೆ. ವಿವಿಧ ಪ್ರದೇಶಗಳಿಗೆ ನೋಡೆಲ್ ಅಧಿಕಾರಿ ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಸೂಚನೆ ನೀಡಿದ್ದಾರೆ.