ಕಾಪು: ಕಾಪು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಹೊಳೆ ತೀರದ ಪ್ರದೇಶಗಳು ಮತ್ತು ಸಮುದ್ರ ತೀರದ ಪ್ರದೇಶಗಳಲ್ಲಿ ನೆರೆಯ ಭೀತಿ ಎದುರಾಗಿದ್ದು, ನೆರೆ ಭೀತಿಗೆ ಎದುರಾಗಿರುವ ಜನರು ಸಂಬಽಕರ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಕಾಪು ಪುರಸಭಾ ವ್ಯಾಪ್ತಿಯ ಮೂಳೂರು – ಬೆಳಪು ರಸ್ತೆ, ಕಾಪು – ಇನ್ನಂಜೆ ರಸ್ತೆ, ಮಜೂರು-ಪಾದೂರು ರಸ್ತೆ, ಎರ್ಮಾಳು-ಅದಮಾರು ರಸ್ತೆ ನೆರೆ ನೀರಿನಿಂದ ಮುಳುಗಡೆಯಾಗಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಮಜೂರು ಗ್ರಾಮದ ಕರಂದಾಡಿ, ಉಳಿಯಾರು, ಜಲಂಚಾರು ಸಹಿತ ವಿವಿಧೆಡೆಗಳಲ್ಲಿ ನೆರೆಯಬ್ಬರ ಹೆಚ್ಚಾಗಿದ್ದು ಕೆಲವು ಮನೆಯವರನ್ನು ಸ್ಥಳೀಯರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ.
ಬೆಳಪು, ಪಣಿಯೂರು, ಕುಂಜೂರು, ಎರ್ಮಾಳು, ಮಲ್ಲಾರು, ಕೈಪುಂಜಾಲು, ಕುತ್ಯಾರು ಸಹಿತ ವಿವಿಧೆಡೆಗಳಲ್ಲಿನ ತಗ್ಗು ಪ್ರದೇಶಗಳು ಮತ್ತು ಹೊಳೆ ತೀರದ ಪ್ರದೇಶಗಳಲ್ಲಿನ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು ಬೆಳೆ ನಾಶದ ಭೀತಿ ಎದುರಾಗಿದೆ.
ಮಳೆ ಮುಂದುವರಿದರೆ ಮತ್ತಷ್ಟು ಹಾನಿಯುಂಟಾಗುವ ಭೀತಿ ಎದುರಾಗಿದೆ. ಮಜೂರು ಗ್ರಾಮದ ಕರಂದಾಡಿಯಲ್ಲಿ ಏಳು ಮನೆಗಳ15 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದ್ದು, ಉಳಿದೆಡೆ ಅಪಾಯದ ಪ್ರದೇಶಗಳಲ್ಲಿ ಪೊಲೀಸರು ಬ್ಯಾರಿಕೇಡ್ ಇರಿಸಿ ಎಚ್ಚರಿಕೆ ನೀಡಿದ್ದಾರೆ.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ತಹಶೀಲ್ದಾರ್ ಪ್ರತಿಭಾ ಆರ್., ಕಾಪು ಎಸ್ಸೈ ರಾಘವೇಂದ್ರ, ಕಂದಾಯ ನಿರೀಕ್ಷಕ ಸುದೀರ್ ಶೆಟ್ಟಿ ಸಹಿತ ವಿವಿಧ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.