ಕಾಪು: ತಾಲೂಕಿನಾದ್ಯಂತ ಮಳೆಯ ಪ್ರಮಾಣ ತೀವ್ರಗೊಂಡಿದ್ದು, ಕಾಪು, ಪಡುಬಿದ್ರಿ, ಬೆಳಪು, ಮಲ್ಲಾರು, ಕುಂಜೂರು, ನಂದಿಕೂರು ಪರಿಸರದಲ್ಲಿ ನೆರೆಯ ಭೀತಿ ಉಂಟಾಗಿದೆ.
ತಗ್ಗು ಪ್ರದೇಶಗಳಲ್ಲಿ ನೆರೆಯ ಭೀತಿ ಉಂಟಾಗಿದ್ದು, ಕುಂಜೂರು ದೇವಸ್ಥಾನ ಮುಂಭಾಗದಲ್ಲಿ ಕೃಷಿ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಕೆಲವೆಡೆ ನೀರು ಸರಾಗವಾಗಿ ಹರಿದು ಹೋಗುವ ತೋಡುಗಳಲ್ಲಿ ಹೂಳು ತುಂಬಿದ್ದು ಕೃತಕ ನೆರೆಯ ಭೀತಿ ಎದುರಾಗಿದೆ.
ಪಡುಬಿದ್ರಿ ಪರಿಸರದಲ್ಲೂ ನೆರೆ : ಪಡುಬಿದ್ರಿ ಬೀಚ್ ರಸ್ತೆ, ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ, ಅಡ್ವೆ ಮತ್ತು ಪಲಿಮಾರು, ಹೆಜಮಾಡಿ, ಎರ್ಮಾಳು ಪರಿಸರದಲ್ಲಿ ನೆರೆ ನೀರು ಸಂಗ್ರಹವಾಗಿದ್ದು ಜನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಬೀಚ್ ರಸ್ತೆಯ ಪಕ್ಕದಲ್ಲಿರುವ ದೇವಾಡಿಗರ 6 ಮನೆಗಳ ಮೆಟ್ಟಿಲಿನವರೆಗೆ ನೀರು ಬಂದಿದ್ದು ಸಂಚಾರಕ್ಕೆ ದಿಗ್ಬಂಧನ ಮಾಡಿದಂತಾಗಿದೆ. ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನವೊಂದನ್ನು ಸ್ಥಳೀಯರು ರಕ್ಷಿಸಿದ್ದಾರೆ. ಹೆಜಮಾಡಿ, ಅಡ್ವೆ, ಪಲಿಮಾರು, ಎರ್ಮಾಳು ಪರಿರಸದಲ್ಲಿ ಕೃಷಿ ಗದ್ದೆಗಳು ಜಲಾವೃತಗೊಂಡಿವೆ.
ದೇವಸ್ಥಾನದೊಳಗೆ ನುಗ್ಗಿದ ಮಳೆ ನೀರು : ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧನಕ್ಕೊಳಪಟ್ಟಿರುವ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎರಡೂ ಗರ್ಭಗುಡಿಯ ಮೆಟ್ಟಿಲುಗಳು ಮುಳುಗಡೆಯಾಗಿದ್ದು ಗರ್ಭಗುಡಿಯೊಳಗೆ ನೀರು ಹರಿದು ಹೋಗುವ ಆತಂಕ ಎದುರಾಗಿದೆ. ದೇವಸ್ಥಾನ ಪರಿಸರದಲ್ಲಿ ಪ್ರತೀ ವರ್ಷ ಇದೇ ಸಮಸ್ಯೆಯಾಗಿದ್ದು, ಈ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.