ಹುಣಸೂರು: ಎಡೆಬಿಡದೆ ಸುರಿದ ಮಳೆಯ ಆರ್ಭಟಕ್ಕೆ ನಗರದ ಮಂಜುನಾಥ, ನ್ಯೂ ಮಾರುತಿ ಹಾಗೂ ಸಾಕೇತ ಬಡಾವಣೆ ಬಹುತೇಕ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿ, ವಿದ್ಯುತ್ ಉಪಕರಣ, ಪದಾರ್ಥಗಳಿಗೆ ಅಪಾರ ಪ್ರಮಾಣದ ಹಾನಿಮಾಡಿದೆ.
ಭಾನುವಾರ ರಾತ್ರಿ 5ಗಂಟೆಗಳ ಕಾಲ ಸುರಿದ ಬಿರುಸಿನ ಮಳೆಯಿಂದ ಮಾರುತಿ ಬಡಾವಣೆ ಮೇಲ್ಬಾಗದ ವಳ್ಳಮ್ಮನಕಟ್ಟೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಕೋಡಿ ಬಿದ್ದ ಪರಿಣಾಮ ಕಟ್ಟೆ ಪಕ್ಕದಲ್ಲಿರುವ ಸಾಕೇತ ಬಡಾವಣೆಯ ಅನೇಕ ಮನೆಗಳಿಗೆ 5-6 ಅಡಿಗಳಷ್ಟು ನೀರು ತುಂಬಿಕೊಂಡಿತ್ತು. ಬಡಾವಣೆಯ ಮದ್ಯದಲ್ಲಿರುವ ರಾಜ ಕಾಲುವೆ ಬಹುತೇಕ ಒತ್ತುವರಿಯಿಂದಾಗಿ ಮಂದಗತಿಯಲ್ಲಿ ಹರಿದ ನೀರು ನ್ಯೂ ಮಾರುತಿ ಬಡಾವಣೆಯ ಕೆಲ ಭಾಗದ 15 ಕ್ಕೂ ಹೆಚ್ಚು ಮನೆಗಳಗೂ ಹಾಗೂ ಮಂಜುನಾಥ ಬಡಾವಣೆಯ ಕೆಳ ಭಾಗದ ೨೦ ಮನೆಗಳಿಗೆ ಮದ್ಯರಾತ್ರಿ ದಿಢೀರ್ ನೀರು ನುಗ್ಗಿತು. ಈ ವೇಳೆ ವಿದ್ಯುತ್ ಸಹ ಕಡಿತಗೊಂಡು ಕಗ್ಗತ್ತಲಿನಲ್ಲಿ ಮುಳುಗಿದ್ದರಿಂದ ಮನೆಯಿಂದ ಹೊರಬರಲು ಎಲ್ಲೆಂದರಲ್ಲಿ ನೀರು ಹರಿಯುತ್ತಿದ್ದರಿಂದಾಗಿ ಗಾಬರಿಗೊಂಡ ನಿವಾಸಿಗಳು ಏನೂ ಮಾಡಲಾಗದ ಸ್ಥಿತಿ ಎದುರಾಗಿತ್ತು.
ಪದಾರ್ಥಗಳಿಗೆ ಹಾನಿ:
ನೀರು ತುಂಬಿಕೊಂಡಿದ್ದರಿಂದ ಮನೆಯಲ್ಲಿದ್ದ ಪದಾರ್ಥಗಳು ಮಳೆ ನೀರಿನಲ್ಲಿ ತೇಲಾಡಿದವು. ದವಸ-ಧಾನ್ಯ ನೀರಿನಲ್ಲಿ ತೋಯ್ದು ಹೋಗಿದೆ. ಟಿ.ವಿ, ಫ್ರಿಜ್ಡ್ ಯುಪಿಎಸ್‌ಗಳು ನೀರು ತುಂಬಿ ಹಾನಿಯಾಗಿದೆ. ಮನೆಗಳಿಗೆ ತುಂಬಿಕೊಂಡಿದ್ದ ಕಲುಷಿತ ನೀರನ್ನು ಹೊರ ಹಾಕಲು ಮನೆಮಂದಿ ಎಲ್ಲಾ ಬೆಳಗಿನ ತನಕವೂ ಪರದಾಡುತ್ತಿದ್ದರು.
ಮನೆಗಳಿಗೆ ತುಂಬಿಕೊಂಡಿದ್ದ ನೀರನ್ನು ಹೊರ ಹಾಕಿದರೂ ಮತ್ತೆ ಮತ್ತೆ ತುಂಬುತ್ತಲೇ ಇತ್ತು. ಕೆಲವರು ನಿದ್ದೆಯನ್ನೇ ಮಾಡಿಲ್ಲ, ಹಲವರು ಅಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆದರೆ, ಗರ್ಭಿಣಿ-ಬಾಣಂತಿಯರು, ಪುಟ್ಟಮಕ್ಕಳು ಮಳೆಯ ನಡುವೆಯೇ ತೋಳಲಾಡಿದರು. ವಿಷಯ ತಿಳಿದ ಕಾಂಗ್ರೆಸ್ ಮುಖಂಡ, ಮಾಜಿ ಅಧ್ಯಕ್ಷೆ ಅನುಷಾರ ಪತಿ ಕಲ್ಕುಣಿಕೆ ರಾಘು ಹಾಗೂ ಬಿಳಿಕೆರೆ ಮಧು ರಾತ್ರಿಯೇ ಬಡಾವಣೆಗೆ ಭೇಟಿ ಇತ್ತು ನಿವಾಸಿಗಳ ಸಂಕಷ್ಟಕ್ಕೆ ನೆರವಾದರು.
ನೀರು ಹೊರಕಳುಹಿಸಿದರು:
ವಿಷಯ ತಿಳಿದ ಚುನಾವಣಾ ಪ್ರಚಾರದಲ್ಲಿದ್ದ ಶಾಸಕ ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ ಮೇರೆಗೆ ಮುಂಜಾನೆಯೇ ನಗರಸಭೆ ಅಧ್ಯಕ್ಷೆ ಸೌರಭ ಸಿದ್ದರಾಜು, ಸದಸ್ಯರಾದ ರಾಧಾ, ಪೌರಾಯುಕ್ತ ರಮೇಶ್, ಇಂಜಿನಿಯರ್ ದೀಪಕ್, ಆರೋಗ್ಯಾಧಿಕಾರಿ ಸತೀಶ್,ಮೋಹನ್, ದಫೇದಾರ್ ಕೃಷ್ಣೇಗೌಡ ಸೇರಿದಂತೆ ಸಿಬ್ಬಂದಿಗಳೊAದಿಗೆ ಆಗಮಿಸಿ ಸ್ಥಳಪರಿಶೀಲಿಸಿ ಕಟ್ಟಿಕೊಂಡಿದ್ದ ಪೈಪ್-ಮಣ್ಣನ್ನು ಜೆಸಿಬಿಯಂತ್ರದ ಮೂಲಕ ತೆರವುಗೊಳಿಸಿ ನೀರು ಹರಿಯಲು ಅವಕಾಶ ಮಾಡಿಕೊಟ್ಟಿದ್ದರಿಂದ ಬೆಳಗ್ಗೆ ೮ಗಂಟೆ ವೇಳೆಗೆ ನೀರು ಕಡಿಮೆಯಾಯಿತು. ಈ ವೇಳೆ ನಗರಸಭಾ ಸದಸ್ಯ ಅರುಣ್ ಚೌವ್ಹಾಣ್ ಹಾಜರಿದ್ದು ನೆರವಾದರು.
ಮುಚ್ಚಿದ ರಾಜ ಕಾಲುವೆ:
ವಳ್ಳಮ್ಮನಕಟ್ಟೆಯಿಂದ ನೀರು ಹರಿದು ಹೋಗುವ ರಾಜಕಾಲುವೆ ಇತ್ತು. ಆದರೆ ಭೂಗಳ್ಳರ ದುರಾಸೆಯಿಂದ ಒತ್ತುವರಿ ಮಾಡಿ ಅನಧಿಕೃತ ಬಡಾವಣೆ ನಿರ್ಮಿಸಿರುವ ಪರಿಣಾಮ ಕಟ್ಟೆಯ ಕೋಡಿ ನೀರು ಸರಾಗವಾಗಿ ಹರಿದು ಹೋಗಲು ಆಗದೆ ಎಲ್ಲೆಂದರಲ್ಲಿ ನೀರು ನುಗ್ಗುತ್ತಿದೆ.
ರಾಜಕಾಲುವೆ ಒತ್ತುವರಿ ತೆರವಾಗಲಿ:
ಮಳೆ ಬಂದಲ್ಲಿ ಆಗಾಗ್ಗೆ ಮನೆಗಳಿಗೆ ನೀರು ನುಗ್ಗುವುದರಿಂದ ನಿವಾಸಿಗಳು ಹೈರಾಣಾಗಿದ್ದು, ಅನೇಕಬಾರಿ ಇದೇ ರೀತಿ ಮನೆಗಳಿಗೆ ನೀರು ನುಗಿದ್ದು, ಆಕ್ರೋಶಿತರಾದ ನಿವಾಸಿಗಳು ಸೋಮವಾರದಂದು ನಗರಸಭೆಗೆ ಎಡತಾಕಿ ಆಯುಕ್ತರಿಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೀರು ಹರಿದುಹೋಗಲು ಕ್ರಮವಹಿಸಬೇಕೆಂಬ ಒತ್ತಾಯಕ್ಕೆ ಪೌರಾಯುಕ್ತ ರಮೇಶ್ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಇತ್ತರು.
ಮರಬಿದ್ದು ವಾಹನಗಳ ಜಖಂ:
ನಗರದ ಶಬ್ಬೀರ್‌ನಗರದಲ್ಲಿ ಮನೆಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರಬಿದ್ದು ಸಂಪೂರ್ಣ ಜಖಂಗೊಂಡಿದ್ದರೆ, ಚಿಲ್ಕುಂದದಲ್ಲಿ ನಿಲ್ಲಿಸಿದ್ದ ಆಂಬ್ಯಲೆನ್ಸ್ ಮೇಲೂ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ.