ಗಂಗಾವತಿ: ಸೋಮವಾರ ರಾತ್ರಿಯಿಡೀ ಸುರಿದ ಆಶ್ಲೇಷ ಮಳೆಯ ಪರಿಣಾಮ ಮಳೆನೀರು ನಾಟಿ ಮಾಡಿದ ಭತ್ತದ ಗದ್ದೆ ಮತ್ತು ರೆಸಾರ್ಟ್ ಹೋಟೆಲ್ ಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯಾದ ಘಟನೆ ತಾಲ್ಲೂಕಿನ ಆನೆಗೊಂದಿ, ಸಣಾಪುರ ,ಜಂಗ್ಲಿ ರಂಗಾಪುರ, ಚಿಕ್ಕರಾಮಾಪುರ ಮತ್ತು ಹನುಮನಹಳ್ಳಿ ಪ್ರದೇಶದಲ್ಲಿ ಜರುಗಿದೆ .
ಆನೆಗೊಂದಿ ಭಾಗದಲ್ಲಿ ಸೋಮವಾರ ಮಧ್ಯಾಹ್ನದಿಂದಲೇ ಮಳೆ ಆರಂಭವಾಗಿ ಮಂಗಳವಾರ ಬೆಳಿಗ್ಗೆ 9 ಗಂಟೆವರೆಗೂ ಸತತವಾಗಿ ಸುರಿದಿದೆ. ಇದರ ಪರಿಣಾಮ ಇಲ್ಲಿಯ ಬೆಟ್ಟ ಪ್ರದೇಶದ ನೀರು ಮತ್ತು ಎಡದಂಡೆ ಕಾಲುವೆಯ ಹೆಚ್ಚುವರಿ ನೀರು ಹಳ್ಳ ಕೊಳ್ಳಗಳಿಗೆ ಬಿಟ್ಟಿದ್ದರ ಪರಿಣಾಮವಾಗಿ ಈ ಭಾಗದಲ್ಲಿ ಈಗಾಗಲೇ ನಾಟಿ ಮಾಡಿದ್ದ ಭತ್ತದ ಗದ್ದೆ ,ಬಾಳೆ ತೋಟ , ರಸ್ತೆ ಮತ್ತು ರೆಸಾರ್ಟ್ ಹೋಟೆಲ್ ಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ: ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ಸಾಧ್ಯತೆ
ಎಡದಂಡೆ ಕಾಲುವೆ ಪ್ರದೇಶ ಬೆಟ್ಟ ಗುಡ್ಡಗಳ ಮಧ್ಯೆ ಇರುವುದರಿಂದ ಮಳೆಯ ನೀರು ಕಾಲುವೆಗೆ ಹರಿದು ಕಾಲುವೆಗೆ ಹಾನಿಯಾಗದ ಮುನ್ನೆಚ್ಚರಿಕೆ ಕ್ರಮವಾಗಿ ಜಲಸಂಪನ್ಮೂಲ ಇಲಾಖೆಯ ಸಿಬ್ಬಂದಿಯವರು ಈ ಭಾಗದ ಹಳ್ಳಕೊಳ್ಳಗಳಿಗೆ ಹೆಚ್ಚುವರಿ ನೀರನ್ನು ಬಿಟ್ಟಿದ್ದರಿಂದ ನಾಟಿ ಮಾಡಿದ ಭತ್ತದ ಗದ್ದೆಗೆ ಮಳೆ ಮತ್ತು ಕಾಲುವೆ ನೀರು ನುಗ್ಗಿ ಭತ್ತದ ಗದ್ದೆ ನಾಶವಾಗಿದೆ. ಪಂಪಾ ಸರೋವರ, ಚಿಕ್ಕರಾಂಪುರ, ಹನುಮನಹಳ್ಳಿ ಅಂಜನಾದ್ರಿ ಬೆಟ್ಟದ ಕೆಳಗಿನ ರಸ್ತೆ ಮತ್ತು ಇಲ್ಲಿರುವ ರೆಸಾರ್ಟ್, ಹೋಟೆಲ್ ಗಳಿಗೂ ನೀರು ನುಗ್ಗಿದ ಪರಿಣಾಮ ಪ್ರವಾಸಿಗರು ಪರದಾಡುವಂತಾಗಿದೆ. ರಸ್ತೆಗೆ ಬೆಟ್ಟದ ಮತ್ತು ಕಾಲುವೆಯ ಹೆಚ್ಚುವರಿ ನೀರು ನುಗ್ಗಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಮಲ್ಲಪ್ಪ ಹೋಬಳಿಯ ವ್ಯಾಪ್ತಿಯಲ್ಲಿ ಈಗಾಗಲೇ ಭತ್ತದ ನಾಟಿ ಕಾರ್ಯ ಶೇ.70 ರಷ್ಟು ಮುಕ್ತಾಯವಾಗಿದ್ದು ಭತ್ತದ ಬೆಳೆ 20-30 ದಿನಗಳ ಭತ್ತದ ಗದ್ದೆಗೆ ಕುಂಭದ್ರೋಣ ಮಳೆ ಮತ್ತು ಕಾಲುವೆ ಹೆಚ್ಚುವರಿ ನೀರು ಗದ್ದೆಗೆ ನುಗ್ಗಿ ಗದ್ದೆ ನಾಶವಾಗಿದೆ.
ಎಕರೆ ಭತ್ತದ ಗದ್ದೆಯನ್ನು ನಾಟಿ ಮಾಡಲು 15-22 ಸಾವಿರ₹ಖರ್ಚು ತಗಲುತ್ತದೆ ಇದೀಗ ಭತ್ತದ ಗದ್ದೆ ನಾಟಿ ಮಾಡಿದ ನಂತರ ಮಳೆಯ ನೀರಿನ ಪರಿಣಾಮ ನಾಶವಾಗಿದ್ದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೋಟೆಲ್ ರೆಸಾರ್ಟ್ ಗಳಿಗೆ ನೀರು ನುಗ್ಗಿದ್ದು ಇಲ್ಲಿಯ ಗುಡಿಸಲುಗಳು ಹಾನಿಯಾಗಿದ್ದು ಪುನಃ ಹೋಟೆಲ್ಗಳ ಗುಡಿಸಲು ನಿರ್ಮಾಣ ಮಾಡಲು ಹೋಟೆಲ್ ಮಾಲೀಕರಿಗೆ ಆರ್ಥಿಕ ತೊಂದರೆ ಉಂಟಾಗಿದೆ.
ಜಿಲ್ಲಾಡಳಿತ ಕೂಡಲೇ ಮಳೆಯ ಹಾನಿಯ ಸರ್ವೆ ಮಾಡಿ ರೈತರಿಗೆ ಮತ್ತು ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಲು ವ್ಯವಸ್ಥೆ ಮಾಡುವಂತೆ ಜಿಪಂ ಮಾಜಿ ಸದಸ್ಯ ಸಿದ್ಧರಾಮ ಸ್ವಾಮಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.