ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ 46 ವರ್ಷಗಳಲ್ಲೇ ದಾಖಲೆ ಎಂಬಂತೆ ಧಾರಾಕಾರ ಮಳೆ ಸುರಿದಿದ್ದು, ದಿಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಶನಿವಾರ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಶನಿವಾರ ಮುಂಜಾನೆ 5.30ರಿಂದ ಮಧ್ಯಾಹ್ನ 2.30ರ ಅವಧಿಯಲ್ಲಿ 117.9 ಮಿ.ಮೀ. ಮಳೆ ಸುರಿದಿದೆ. ಏರ್‌ಪೋರ್ಟ್‌ಗೆ ನೀರು ನುಗ್ಗಿದ ಪರಿಣಾಮ, 3 ವಿಮಾನಗಳ ಹಾರಾಟ ರದ್ದಾಗಿದ್ದು, 5 ವಿಮಾನಗಳ ಮಾರ್ಗಗಳನ್ನು ತುರ್ತಾಗಿ ಬದಲಿಸಲಾಯಿತು. ಏರ್‌ಪೋರ್ಟ್ ಸಿಬಂದಿ ಕೇವಲ 30 ನಿಮಿಷಗಳಲ್ಲಿ ನೀರನ್ನು ಹೊರಹಾಕಿದರು.
ಬಂಗಾಲ ಕೊಲ್ಲಿ ಭಾಗದಲ್ಲಿ ವಾಯುಭಾರ ಕುಸಿತ ಪರಿಣಾಮ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದ್ದು, ಒಡಿಶಾಕ್ಕೆ ಹೆಚ್ಚು ಬಾಧಿಸುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ. ವಾಯುವ್ಯ ದಿಕ್ಕಿಗೆ 45- 55 ಕಿ.ಮೀ. ವೇಗದಲ್ಲಿ ಚಂಡಮಾರುತಗಳು ಬೀಸಲಿದ್ದು, ಒಡಿಶಾ ಸುತ್ತಮುತ್ತಲಿನ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಸೂಚಿಸಿದೆ. ಪುರಿ, ಖೊರ್ಧಾ, ಕಟಕ್, ಭಾರ್ದಾಕ್ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದ್ದು, ಬಂಗಾಲ ಕೊಲ್ಲಿಗೆ ಅಂಟಿಕೊಂಡ ದಕ್ಷಿಣ ಭಾರತದ ಕೆಲವೆಡೆ ಪರಿಣಾಮ ಬೀರುವ ಮುನ್ಸೂಚನೆ ನೀಡಿದೆ.
ಮಳೆ ರಾಜಕೀಯ: ಮಳೆಯಿಂದ ಪ್ರಮುಖ ರಸ್ತೆಗಳ ಮುಳುಗಡೆ, ಜನಜೀವನಕ್ಕೆ ತೊಂದರೆ ಆಗಿರುವ ಸಂಗತಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಯಿತು. ದಿಲ್ಲಿಯ ಬಿಜೆಪಿ ಮುಖಂಡ ತಜೀಂದರ್ ಬಾಗ್ಗಾ ಅವರು ಜಲಾವೃತ ರಸ್ತೆಗಳಲ್ಲಿ ತಾವು ರ್ಯಾಫ್ಟಿಂಗ್ ಮಾಡಿದ ವೀಡಿಯೋಗಳನ್ನು ಟ್ವಿಟರ್‌ಗೆ ಹಾಕಿಕೊಂಡಿದ್ದಾರೆ. “ರ್ಯಾಫ್ಟಿಂಗ್ ಮೂಲಕ ಮೂಲೆ ಮೂಲೆ ತೆರಳಲು ಸಾಧ್ಯವಾಗಿಸಿದ್ದಕ್ಕೆ ಸಿಎಂ ಕೇಜ್ರಿವಾಲ್‌ಗೆ ವಿಶೇಷ ಧನ್ಯವಾದಗಳು. ಇದು ದಿಲ್ಲಿ ಸರಕಾರದ ಸಾಧನೆ’ ಎಂದು ಬಿಜೆಪಿ ಯುವ ಮೋರ್ಚಾ, ಆಡಳಿತರೂಢ ಆಪ್ ಸರಕಾರಕ್ಕೆ ಕುಟುಕಿದೆ.