ಬೆಂಗಳೂರು: ಬೇಸಿಗೆ ಬೇಗೆಯಿಂದ ಕಂಗಾಲಾಗಿದ್ದ ಬೆಂಗಳೂರಿನಲ್ಲಿ ಶನಿವಾರ ವರುಣನ ಆರ್ಭಟ ಜೋರಾಗಿತ್ತು. ರಸ್ತೆಗಳೆಲ್ಲಾ ನೀರು ತುಂಬಿ ಕರೆಯಂತಾಗಿದ್ದವು. ಹಲವು ಕಡೆಗಳಲ್ಲಿ ವಾಹನ ಸವಾರರು ಪರದಾಡಿದರು.
ಶನಿವಾರ ಸಂಜೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಭಾರಿ ಮಳೆಯಾಗಿದ್ದು, ಕೆಲವು ರಸ್ತೆಗಳಲ್ಲಿ ಮರಗಳು ಉರುಳಿದ ಪರಿಣಾಮ ಟ್ರಾಫಿಕ್ ಜಾಮ್‌ನಿಂದ ತಾಸುಗಟ್ಟಲೆ ವಾಹನ ಸವಾರರು ಪರದಾಡಿದರು. ಬೆಂಗಳೂರಿನ ಕಾರ್ಪೋರೆಷನ್, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಚಾಮರಾಜಪೇಟೆ, ಬಸವನಗುಡಿ, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ನಗರದ ಹಲವು ಮಾರ್ಗಗಳಲ್ಲಿ ಭಾರೀ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಮರಗಳು ಧರೆಗೆ ಉರುಳಿವೆ. ಬಿಬಿಎಂಪಿ ಸಿಬ್ಬಂದಿ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಮರ ಬಿದ್ದು ವಾಹನಗಳಿಗೆ ಹಾನಿ: ಕಾರ್ಪೋ ರೆಷನ್ ವೃತ್ತದ ಬಳಿ ಮರದ ರೆಂಬೆ ಕೊಂಬೆ ನೆಲಕ್ಕುರುಳಿದ್ದು, ಬಸ್ ಮೇಲೆ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದ ಪರಿಣಾಮ ಬಸ್ ಜಖಂ ಗೊಂಡಿದೆ. ಕಾರ್ಪೋರೇಷನ್ ವೃತ್ತದ ಬಳಿ ರಸ್ತೆ ಬದಿ ನಿಂತಿದ್ದ ಆಟೋವೊಂದರ ಮೇಲೆ ಮರದ ಕೊಂಬೆ ಉರುಳಿ ಬಿದ್ದು, ಆಟೋ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಆಟೋ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಜೆ.ಪಿ. ನಗರದಲ್ಲಿ ಬೃಹತ್ ಗಾತ್ರದ ಮರ ಉರುಳಿ ನಾಲ್ಕು ಕಾರುಗಳ ಮೇಲೆ ಬಿದ್ದು ಹಾನಿಯಾಗಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಬ್ಬನ್ ಪಾರ್ಕ್‌ನಲ್ಲೂ ಹಲವು ಮರಗಳು ಉರುಳಿಬಿದ್ದಿವೆ. ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿದ್ದವು. ರಸ್ತೆಗಳಲ್ಲೆಲ್ಲಾ ಕೆರೆಯಂತೆ ನೀರು ತುಂಬಿದ್ದ ಹಿನ್ನೆಲೆಯಲ್ಲಿ ವಾಹನಗಳು ಮುಂದಕ್ಕೆ ಚಲಿಸಲಾಗದೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿತು. ತಗ್ಗು ಪ್ರದೇಶಗಲಿಗೆ ನೀರು ನುಗ್ಗಿ ಕೆಲವೆಡೆ ಹಾನಿಯಾಗಿದೆ.
ನಗರದ ದಕ್ಷಿಣ ಹಾಗೂ ಮಧ್ಯ ಭಾಗಗಳಲ್ಲಿ ಭರ್ಜರಿ ಮಳೆಯಾಗಿದೆ. ಬೆಂಗಳೂರಿಗೆ ವಾರಾಂತ್ಯದಲ್ಲಿ ಮಳೆಯಾಗಿ ಬಿಸಲ ಬೇಗೆಯಿಂದ ವಿರಾಮ ಸಿಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಕೊಟ್ಟಿದ್ದ ಮುನ್ಸೂಚನೆಯಂತೆ ಶನಿವಾರ ಮಳೆಯಾಗಿದೆ. ಕೆಲವು ಭಾಗಗಳಲ್ಲಿ ಮಿಂಚು ಮತ್ತು ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಿದೆ.
ಕಾರ್ಯಕ್ರಮಕ್ಕೆ ಬಂದವರು ಊರು ತಲುಪಲು ಹರಸಾಹಸ: ಸಂಜೆ ಮಳೆ ಆರಂಭವಾಗಿ ಸುಮಾರು ತಾಸು ಸುರಿಯಿತು. ಮಳೆ ಆರಂಭವಾಗುವ ಹೊತ್ತಿಗೆ ಪ್ರಮಾಣ ವಚನ ಕಾರ್ಯಕ್ರಮ ಮುಗಿದಿತ್ತಾದರೂ ವಿವಿಧ ಊರುಗಳಿಂದ ಬಂದಿದ್ದವರು ತಮ್ಮ ಊರುಗಳಿಗೆ ತಲುಪಲು ಹರಸಾಹಸಪಟ್ಟರು. ಬಸ್ಸುಗಳನ್ನು ಅರಮನೆ ಮೈದಾನದಲ್ಲಿಯೇ ನಿಲ್ಲಿಸಿ ಬಂದಿದ್ದರಿಂದ ಬಸ್ಸುಗಳನ್ನು ತಲುಪಲು ಪರದಾಡಿದರು.