ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾದರೂ ಮನೆಗಳು ಕುಸಿದು ಬೀಳೋದು ನಿಲ್ಲುತ್ತಿಲ್ಲ. ಕಾಫಿನಾಡ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ, ಬಯಲುಸೀಮೆ ಭಾಗದಲ್ಲೂ ಅಲಲ್ಲೇ ಮಳೆ ಸುರಿದಿದೆ.
ದಟ್ಟಕಾನನದ ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಕಳಸ ಭಾಗದಲ್ಲಿ ತುಸು ಹೆಚ್ಚಾಗೇ ಮಳೆ ಇದೆ. ಆದರೆ, ಗಾಳಿಯ ಅಬ್ಬರ ಜೋರಾಗಿದೆ. ಮಳೆ ಗಾಳಿಗೆ ತರೀಕೆರೆ ಹಾಗೂ ಎನ್.ಆರ್.ಪುರ ತಾಲೂಕಿನಲ್ಲಿ ಮನೆ ಕುಸಿದು ಬಿದ್ದಿದೆ. ಎನ್.ಆರ್.ಪುರ ತಾಲೂಕಿನ ಖಾಂಡ್ಯಾ ಹೋಬಳಿಯ ಚಾಕಲುಮನೆ ಮನೆ ಗ್ರಾಮದ ರಮೇಶ್ ಎಂಬುವರ ಮನೆ ಮಳೆಗೆ ಕುಸಿದು ಬಿದ್ದಿದೆ. ಮನೆ ಸಂಪೂರ್ಣ ಬಿದಿರಿನಿಂದ ಕಟ್ಟಿದ್ದ ಮನೆಯಾಗಿದ್ದು ಕಳೆದ 20 ವರ್ಷಗಳಿಂದ ಅದೇ ಮನೆಯಲ್ಲಿ ವಾಸವಿದ್ದರು. ಕಳೆದ ಎರಡು ದಿನಗಳಿಂದ ಮಲೆನಾಡಲ್ಲಿ ಸುರಿಯುತ್ತಿರುವ ಮಳೆ, ಬೀಸುತ್ತಿರುವ ಗಾಳಿಗೆ ಮನೆ ಕುಸಿದು ಬಿದ್ದಿದೆ. ಮನೆ ಸಂಪೂರ್ಣ ಮನೆ ಕುಸಿದು ಬೀಳುವ ಆತಂಕ ಮನೆಯವರಿಗೆ ಎದುರಾಗಿದೆ.
ರಮೇಶ್ ಇಬ್ಬರು ಮಕ್ಕಳೊಡನೆ ಅದೇ ಮನೆಯಲ್ಲಿ ವಾಸವಿದ್ದಾರೆ. ರಮೇಶ್ ಪಂಚಾಯಿತಿ ನೀಡುವ ಮನೆಗೆ ಕಳೆದ 5 ವರ್ಷದಿಂದ 3 ಬಾರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೆ ಮನೆ ಮಂಜೂರಾಗಿಲ್ಲ. ಇನ್ನು ತರೀಕೆರೆ ತಾಲೂಕಿನ ಸೀತಾಪುರ ಕಾವಲ್‍ನಲ್ಲಿ ಮನೆಯ ಗೋಡೆಗೆ ಶೀತ ಹೆಚ್ಚಾಗಿ ಬೀಸಿದ ಗಾಳಿಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಸೀತಾಪುರಕಾವಲ್ ಗ್ರಾಮದ ನಟೇಶ್ ಎಂಬುವರ ಮನೆ ಮಧ್ಯಾಹ್ನ ಅಡುಗೆ ಮಾಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದಿದೆ. ಮನೆ ಭಾಗಶಃ ನಾಶವಾಗಿದೆ.
ಮಳೆ ಗಾಳಿ ಹೀಗೆ ಮುಂದುವರೆದರೆ ಉಳಿದಿರೋ ಅಲ್ಪಸ್ವಲ್ಪ ಕೂಡ ಕುಸಿದು ಬೀಳಲಿದೆ. ಮನೆಯಲ್ಲಿದ್ದ ಪಾತ್ರೆ ದವಸ ಧಾನ್ಯಗಳು ನಾಶವಾಗಿವೆ. ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.