Advertisement

ಸುಬ್ರಹ್ಮಣ್ಯ ಸುತ್ತಮುತ್ತ ಗುಡುಗು ಸಹಿತ ಭಾರೀ ಮಳೆ 

12:24 PM Apr 14, 2018 | |

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಸುಬ್ರಹ್ಮಣ್ಯ ನಗರ ವ್ಯಾಪ್ತಿಯಲ್ಲಿ ಸುಮಾರು ಎರಡು ತಾಸುಗಳ ತನಕ ನಿರಂತರ ಮಳೆಯಾಗಿದ್ದು, ಸಿಡಿಲಿನ ಆರ್ಭಟ ಹೆಚ್ಚಿತ್ತು. ಸುಬ್ರಹ್ಮಣ್ಯ ನಗರದ ಬಿಎಸ್‌ಎನ್‌ಎಲ್‌ ಕಚೇರಿಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಮೊಬೈಲ್‌ ಗೋಪುರಕ್ಕೆ ಸಿಡಿಲು ಬಡಿದು ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ.

Advertisement

ಇದರಿಂದ ಇಲ್ಲಿನ ಮೊಬೈಲ್‌ ನೆಟ್‌ ವರ್ಕ್‌ ಹಾಗೂ ಸ್ಥಿರ ದೂರವಾಣಿ, ವಯರ್‌ ಲೆಸ್‌ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಶುಕ್ರವಾರ ಸಂಜೆ ತನಕ ಸ್ಥಿರ ದೂರವಾಣಿ ಹಾಗೂ ಬ್ರಾಡ್‌ಬ್ಯಾಂಡ್‌ ಸೇವೆಗಳು ಸಾರ್ವಜನಿಕರಿಗೆ ದೊರಕಿರಲಿಲ್ಲ.

ಭಾರೀ ಪ್ರಮಾಣದ ಸಿಡಿಲಿನ ಆಘಾತಕ್ಕೆ ಸುಬ್ರಹ್ಮಣ್ಯ ಸಹಿತ ಸುತ್ತಮುತ್ತಲ ಪ್ರದೇಶಗಳ ನಾಗರಿಕರ ಮನೆಗಳ ಗೃಹೋಪಯೋಗಿ ವಸ್ತುಗಳಿಗೆ ಹಾಗೂ ಅಂಗಡಿ, ಮುಂಗಟ್ಟುಗಳ ಸೊತ್ತುಗಳಿಗೆ ಹಾನಿಯಾಗಿವೆ. ಸುಬ್ರಹ್ಮಣ್ಯ, ಪಂಜ, ಗುತ್ತಿಗಾರು ಇಲ್ಲೆಲ್ಲ ಎರಡು ತಾಸು ಮಳೆ ಸುರಿದಿದ್ದರೆ ಬಾಳುಗೋಡು, ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಐನಕಿದು ಈ ಭಾಗಗಳಲ್ಲಿ ಆರು ತಾಸಿಗೂ ಅಧಿಕ ಗುಡುಗು ಸಹಿತ ಮಳೆ ಆಗಿದೆ.

ರಸ್ತೆಯೇ ಚರಂಡಿಯಾಯಿತು
ಸೂಕ್ತ ಚರಂಡಿ ಇಲ್ಲದ ಕಡೆಗಳಲ್ಲಿ ಗುಡ್ಡದ ಮಳೆ ನೀರು ನೇರ ರಸ್ತೆಗೆ ನುಗ್ಗಿದೆ. ಕುಮಾರ ಧಾರದಿಂದ ಸುಬ್ರಹ್ಮಣ್ಯ ರಥಬೀದಿ ತನಕದ ಮಾರ್ಗದ ಕುಮಾರಧಾರ, ಬಿಲದ್ವಾರ, ಕಾಶಿಕಟ್ಟೆ, ನಗರದ ಬಸ್‌ ನಿಲ್ದಾಣ ಬಳಿ ರಸ್ತೆಗೆ ಚರಂಡಿ ನೀರು ಹರಿದ ಪರಿಣಾಮ ಮುಖ್ಯ ರಸ್ತೆಗಳಲ್ಲಿ ಕೆಸರು ನೀರು ಸಂಗ್ರಹಗೊಂಡಿದೆ. ಇದರಿಂದ ವಾಹನ ಸಂಚಾರರಿಗೆ, ಪಾದಚಾರಿಗಳಿಗೆ ತೊಂದರೆ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗೆ ಗುಡ್ಡದ ಮಳೆ ನೀರು ಹರಿದು, ರಸ್ತೆಯಲ್ಲೆ ಕೆಸರು ತುಂಬಿಕೊಂಡಿರುವುದು ಕಂಡು ಬಂದಿದೆ.

ಮಾಸ್ಟರ್‌ ಪ್ಲ್ಯಾನ್ ಯೋಜನೆಗೆ ಅಡ್ಡಿ
ಸುಬ್ರಹ್ಮಣ್ಯ ನಗರದಲ್ಲಿ ಮಾಸ್ಟರ್‌ ಪ್ಲ್ರಾನ್‌ ಯೋಜನೆ ಅಡಿ ಕಾಮಗಾರಿ ಅರ್ಧದಲ್ಲಿದ್ದು ಕುಮಾರಧಾರ -ರಥಬೀದಿ, ಆದಿಸುಬ್ರಹ್ಮಣ್ಯ ಮೊದಲಾದ ಕಡೆ ಕೆಸರು ಆವರಿಸಿಕೊಂಡಿದೆ. ಆದಿಸುಬ್ರಹ್ಮಣ್ಯದ ತಗ್ಗು ಪ್ರದೇಶಗಳ ಅಂಗಡಿಗೆ ನೀರು ನುಗ್ಗಿದೆ.

Advertisement

ಬ್ಯಾಂಕಿಂಗ್‌ ವ್ಯವಸ್ಥೆ ಸ್ತಬ್ಧ
ಮೊಬೈಲ್‌ ಸೇವೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಸಂಪರ್ಕ ಹಾಗೂ ಇಂಟರ್‌ನೆಟ್‌ ಸಂಪರ್ಕಕ್ಕಾಗಿ ಪರದಾಡಿದರು. ಸಿಡಿಲಿನಿಂದ ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್‌ಗಳ ತಂತ್ರಜ್ಞಾನಗಳಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡು ಬ್ಯಾಂಕ್‌ ವಹಿವಾಟು ಕೂಡ ಅಸ್ತವ್ಯಸ್ತಗೊಂಡಿದೆ. ಆಸುಪಾಸಿನ ಬಿಎಸ್‌ಎನ್‌ಎಲ್‌ ಕೇಂದ್ರಗಳು ಸ್ತಬ್ಧವಾದವು. ಹೀಗಾಗಿ ಹರಿಹರ, ಕಲ್ಮಕಾರು, ಗುತ್ತಿಗಾರು ಮೊದಲಾದ ಪ್ರದೇಶಗಳ ಕಚೇರಿಗಳ ಟವರ್‌ಗಳು ಕೂಡ ಕಾರ್ಯ ನಿರ್ವಹಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next