Advertisement

Heavy Rain: ಕಾಸರಗೋಡು ಜಿಲ್ಲಾದ್ಯಂತ ಭಾರೀ ಮಳೆ

01:34 AM Dec 03, 2024 | Team Udayavani |

ಕಾಸರಗೋಡು: ಫೈಂಜಾಲ್‌ ಚಂಡಮಾರುತದ ಪ್ರಭಾವದಿಂದ ಕೇರಳಾ ದ್ಯಂತ ಭಾರೀ ಮಳೆಯಾಗುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲೂ ಗುಡುಗು, ಮಿಂಚು ಸಹಿತ ಮಳೆಯಾಗಿದೆ.

Advertisement

ಕೇಂದ್ರ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಡಿ.3 (ಮಂಗಳವಾರ)ರಂದು ವೃತ್ತಿಪರ ಕಾಲೇಜುಗಳು ಸಹಿತ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಕೆ.ಇಂಬುಶೇಖರ್‌ ರಜೆ ಘೋಷಿಸಿದ್ದಾರೆ.

ಮಾದರಿ ವಸತಿ ಶಾಲೆಗಳಿಗೆ ರಜೆ ಅನ್ವಯಿಸುವುದಿಲ್ಲ. ಪ್ರವಾಸಿ ಕೇಂದ್ರಗಳು ಮುಚ್ಚಿರಲಿವೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಕೋರೆಗಳಲ್ಲಿ ಗಣಿಗಾರಿಕೆಯನ್ನು ಎರಡು ದಿನ ನಿಷೇಧಿಸಲಾಗಿದೆ.

ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಮಂಜೇಶ್ವರದಿಂದ ಚೆರ್ಕಳದವರೆಗೆ ಅಲ್ಲಲ್ಲಿ ನೀರು ನಿಂತು ವಾಹನ ಸಂಚಾರ ದುಸ್ತರವಾಗಿತ್ತು. ಕೆಲವು ಆ್ಯಂಬುಲೆನ್ಸ್‌ ಗಳೂ ರಸ್ತೆಯಲ್ಲಿ ಸಿಲುಕಿ ರೋಗಿಗಳು ಸಂಕಷ್ಟಕ್ಕೀಡಾದರು.

ಕಣ್ಣೂರು, ಕಲ್ಲಿಕೋಟೆ, ವಯನಾಡು, ಮಲಪ್ಪುರಂ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌, ಪಾಲಾಟ್‌, ತ್ರಿಶ್ಶೂರು ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

ರಾತ್ರಿ ವೇಳೆ ವಾಹನ ಸಂಚಾರ ನಡೆಸದಂತೆ ಸೂಚಿಸಲಾಗಿದೆ. ಜನರು 1077 ಅಥವಾ 1070 ಎಂಬ ನಂಬ್ರಕ್ಕೆ ಮಾಹಿತಿ ನೀಡಬಹುದು.

ಹೊಸಂಗಡಿಯಲ್ಲಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ 15 ಕುಂಟುಂಬಗಳನ್ನು ಅಗ್ನಿಶಾಮಕ ದಳದವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಉಪ್ಪಳ ಗೇಟ್‌ ಸಮೀಪ ಎಂ.ಪಿ. ಸಿದ್ದಿಕ್‌, ಫಾರೂಕ್‌, ಅಂದು ಹಾಜಿ, ಅಬೂ ಹಾಜಿ, ಸಕರಿಯಾ, ಮೋನು, ಪಕ್ರುಂಞಿ ಅವರ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ.

ಮಂಜೇಶ್ವರ ಪೊಸೋಟುನಲ್ಲಿ ಮೂರು ಮನೆಗಳಿಗೆ ಮಳೆ ನೀರು ನುಗ್ಗಿದೆ. ಪೊಸೋಟಿನ ಮುಹಮ್ಮದ್‌, ಇಸ್ಮಾಯಿಲ್‌, ಅಬ್ದುಲ್‌ ರಹಿಮಾನ್‌ ಅವರ ಮನೆಯೊಳಗೆ ಮಳೆ ನೀರು ನುಗ್ಗಿರುವುದರಿಂದ ವಿದ್ಯುತ್‌ ಉಪಕರಣಗಳು, ಬಟ್ಟೆಬರೆ ಹಾಗೂ ಇತರ ಗೃಹೋಪಕರಣಗಳು ಹಾನಿಗೀಡಾಗಿವೆ. ಮನೆಯವರು ಮೇಲಂತಸ್ತಿನಲ್ಲಿ ಆಶ್ರಯ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next