Advertisement

ಅತಿವೃಷ್ಟಿ: ಜಿಲ್ಲೆಯಲ್ಲಿ 620 ಕೋಟಿ ರೂ. ನಷ್ಟ

03:46 PM Aug 21, 2019 | Suhan S |

ಹಾಸನ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿರುವ ಹಾನಿಯ ಶೇ.80ರಷ್ಟು ಅಂದಾಜು ಪ್ರಕ್ರಿಯೆ ಮುಗಿದಿದ್ದು, ಈ ವರೆಗೆ 620 ಕೋಟಿ ರೂ. ಹಾನಿಯ ಅಂದಾಜು ಮಾಡಲಾಗಿದೆ. ಪರಿಹಾರ ಕಾರ್ಯಗಳಿಗೆ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ 8 ತಾಲೂಕುಗಳ ಪೈಕಿ 6 ತಾಲೂಕುಗಳನ್ನು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಣೆ ಮಾಡಿದ್ದು, ಎನ್‌ಡಿಆರ್‌ಎಫ್ ನಿಯಮಗಳನ್ವಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿರುವ ಹಾನಿಯ ಅಂದಾಜನ್ನು ಇಲಾಖಾವಾರು ಸಿದ್ಧಪಡಿಸಿದ್ದು, ಬೆಳೆ ಹಾನಿಯನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಆಸ್ತಿ, ಪಾಸ್ತಿಯ ಹಾನಿಯ ಅಂದಾಜು ಮಾಡ ಲಾಗಿದ್ದು, ಶೇ.80ರಷ್ಟು ಹಾನಿಯ ಅಂದಾಜು ಮುಗಿದಿದೆ. ಇನ್ನು 8 ರಿಂದ 10 ದಿನಗಳಲ್ಲಿ ಬೆಳೆ ಹಾನಿಯೂ ಸೇರಿದಂತೆ ಸಂಪೂರ್ಣ ಹಾನಿಯ ಅಂದಾಜು ಮಾಡಲಾಗುವುದು ಎಂದು ಹೇಳಿದರು.

ಅತಿವೃಷ್ಟಿಯಿಂದ ನಾಲ್ವರ ಸಾವು: ಜಿಲ್ಲೆಯಲ್ಲಿ ಈ ವರಗೆ ನಾಲ್ಕು ಜೀವಹಾನಿಯಾಗಿದ್ದು, ಗಾಯಗೊಂಡ ಎರಡು ಪ್ರಕರಣಗಳು ಸೇರಿ 16.26 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಅತಿವೃಷ್ಟಿ ಮತ್ತು ಪ್ರವಾಹದಿಂದ ಬಾಧಿತ 1,738 ಕುಟುಂಬಗಳನ್ನು ಗುರ್ತಿಸಿದ್ದು, ಈ ಕುಟುಂಬಗಳಲ್ಲಿ ಒಟ್ಟು 66 ಲಕ್ಷ ರೂ. ಹಾನಿಯ ಅಂದಾಜು ಮಾಡಲಾಗಿದೆ. ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ 734 ಸಂತ್ರಸ್ತರನ್ನು ರಕ್ಷಿಸಲಾಗಿದೆ. 6 ಜಾನುವಾರುಗಳು ಸಾವನ್ನಪ್ಪಿವೆ ಎಂದು ವಿವರ ನೀಡಿದರು.

ಅತಿವೃಷ್ಟಿ ಹಾಗೂ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರಿಗೆ 12 ಪರಿಹಾರ ಕೇಂದ್ರ ಗಳನ್ನು ತೆರೆದು 9 ದಿನಗಳ ಕಾಲ ಅಶ್ರಯ ನೀಡ ಲಾಗಿತ್ತು. ಪರಿಹಾರ ಕೇಂದ್ರಗಳಲ್ಲಿ ಆಹಾರ ಮತ್ತಿತರ ಸೌಲಭ್ಯಗಳಿಗೆ 8.50 ಲಕ್ಷ ರೂ. ವೆಚ್ಚವಾಗಿದೆ ಪ್ರವಾಹ ಸಂತ್ರಸ್ತರಿಗೆ ಆರೋಗ್ಯ ಇಲಾಖೆಯಿಂದ 5 ಸಾವಿರ ಸಿಎಫ್ಟಿಆರ್‌ಐನಿಂದ 3 ಸಾವಿರ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

12,095 ಹೆಕ್ಟೇರ್‌ನಲ್ಲಿ ಬೆಳೆ ಹಾನಿ: ಅತಿವೃಷ್ಟಿಯಿಂದ ಒಟ್ಟು 1,395 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಹೂಳು ತುಂಬಿದ್ದು, 350 ಹೆಕ್ಟೇರ್‌ಗಳಷ್ಟು ಕೃಷಿ ಜಮೀನಿನಲ್ಲಿ ಭೂಕುಸಿತ ಉಂಟಾಗಿದೆ. ಪರಿಹಾರ ಕಾರ್ಯಗಳಿಗೆ ಒಟ್ಟು 3 ಕೋಟಿ ರೂ. ಹಾನಿಯ ಅಂದಾಜು ಮಾಡಿದ್ದು, ಅತಿವೃಷ್ಟಿಯ ಸಂದರ್ಭದಲ್ಲಿ 2 ಹೆಕ್ಟೇರ್‌ಗಿಂತ ಕಡಿಮೆ ಜಮೀನಿಗೆ ಸಂಬಂಧಿಸಿದಂತೆ ಒಟ್ಟು 6,105 ಹೆಕ್ಟೇರ್‌ ಕೃಷಿ ಭೂಮಿ, 2,655 ಹೆಕ್ಟೇರ್‌ ತೋಟಗಾರಿಕಾ ಜಮೀನು, 3,712 ಹೆಕ್ಟೇರ್‌ ಪ್ಲಾಂಟೇಷನ್‌ ಜಮೀನು, 5,922 ಹೆಕ್ಟೇರ್‌ ದೀರ್ಘ‌ಕಾಲಿಕ ಜಮೀನು ಹಾಗೂ 6.60 ಹೆಕ್ಟೇರ್‌ ರೇಷ್ಮೆ ಬೆಳೆಗೆ ಹಾನಿಯುಂಟಾಗಿದ್ದು, ಒಟ್ಟು 184.ಕೋಟಿ ರೂ. ಹಾನಿಯಾಗಿರುವ ಅಂದಾಜು ಮಾಡಲಾಗಿದೆ. ನ್ನು ಅಂದಾಜಿಸಲಾಗಿದೆ.

Advertisement

ಪ್ರವಾಹ ಸಂದರ್ಭದಲ್ಲಿ 2 ಹೆಕ್ಟೇರ್‌ಗಿಂತ ಹೆಚ್ಚಿರುವ ಒಟ್ಟು 320 ಹೆಕ್ಟೇರ್‌ ಕೃಷಿ ಭೂಮಿ, 44 ಹೆಕ್ಟೇರ್‌ ತೋಟಗಾರಿಕಾ ಭೂಮಿ, 8045 ಹೆಕ್ಟೇರ್‌ ಪ್ಲಾಂಟೇಷನ್‌ ಜಮೀನು ಹಾಗೂ 8,985 ಹೆಕ್ಟೇರ್‌ ದೀರ್ಘ‌ಕಾಲಿಕ ಬೆಳೆಗಳ ಹಾನಿಯಾಗಿದ್ದು ಒಟ್ಟು 173.94 ಕೋಟಿ ರೂ. ಹಾನಿಯ ಅಂದಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ ವಿವಿಧ ರೀತಿ ತೋಟಗಾರಿಕಾ ಹಾಗೂ ಕೃಷಿ ಬೆಳೆಗಳು ಒಟ್ಟು 12094.8 ಹೆಕ್ಟೇರ್‌ ಪ್ರದೇಶಗಳಲ್ಲಿ ಹಾನಿಯಾಗಿದೆ ಎಂದು ಹೇಳಿದರು.

201 ಮನೆ ಸಂಪೂರ್ಣ ನಾಶ: ಜಿಲ್ಲೆಯ ನದಿ ಪಾತ್ರದಲ್ಲಿ ಪ್ರವಾಹದಿಂದ ಮೀನುಗಾರರ ಒಟ್ಟು 5 ದೋಣಿಗಳು ಹಾಗೂ 7 ಬಲೆಗಳ ಹಾನಿಯಾಗಿದ್ದು, 69 ಸಾವಿರ ರೂ. ಹಾನಿಯನ್ನು ಅಂದಾಜಿಸಲಾಗಿದೆ. ಪ್ರವಾಹಕ್ಕೆ ಒಳಗಾದ 6 ತಾಲೂಕುಗಳಲ್ಲಿ 201 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, 793 ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಹಾಗೂ 744 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಸಂಬಂಧ ಒಟ್ಟು ರೂ. 3.89 ಕೋಟಿ ರೂ. ಹಾನಿಯ ಅಂದಾಜು ಮಾಡಲಾಗಿದೆ ಎಂದರು.

856 ಶಾಲಾ ಕಟ್ಟಡಗಳಿಗೆ ಹಾನಿ: ಪ್ರವಾಹ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟು 856 ಪ್ರಾಥಮಿಕ ಶಾಲೆಗಳು, 133 ಸಮುದಾಯ ಭವನಗಳು, 50 ಆರೋಗ್ಯ ಕೇಂದ್ರಗಳು ಹಾಗೂ 260 ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದ್ದು, ಒಟ್ಟು 33.98 ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ.

500 ಕಿ.ಮೀ. ರಸ್ತೆಗೆ ಹಾನಿ: ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟು 267 ಕಿ.ಮೀ. ಗಳ ರಾಜ್ಯ ಹೆದ್ದಾರಿ, 233 ಕಿ.ಮಿ ೕ.ಗಳ ಮುಖ್ಯ ಜಿಲ್ಲಾ ರಸ್ತೆಗಳು ಮತ್ತು 12 ಸೇತುವೆಗಳು ಹಾನಿಯಾಗಿದ್ದು, ಒಟ್ಟು 224.89 ಕೋಟಿ ರೂ. ಹಾನಿಯ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.

•ಜಿಲ್ಲೆಯ 6 ತಾಲೂಕುಗಳನ್ನು ಅತಿವೃಷ್ಟಿ, ಪ್ರವಾಹ ಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಣೆ

•ಪ್ರವಾಹಕ್ಕೆ ಒಳಗಾದ 6 ತಾಲೂಕುಗಳಲ್ಲಿ 201 ಮನೆಗಳು ಸಂಪೂರ್ಣವಾಗಿ ನಾಶ

•ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿರುವ ಹಾನಿಯ ಶೇ.80ರಷ್ಟು ಅಂದಾಜು ಪ್ರಕ್ರಿಯೆ ಪೂರ್ಣ

•ಎನ್‌ಡಿಆರ್‌ಎಫ್ ನಿಯಮಗಳನ್ವಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ

Advertisement

Udayavani is now on Telegram. Click here to join our channel and stay updated with the latest news.

Next