ವಾಡಿ: ಕಳೆದ ಎರಡು ವರ್ಷಗಳಿಂದ ನಿರಂತರ ಅತಿವೃಷ್ಟಿಗೆ ತುತ್ತಾಗುತ್ತಿರುವ ಮುಂಗಾರು ಬೆಳೆ, ಈ ವರ್ಷವೂ ಮಹಾ ಮಳೆಗೆ ಮುಗ್ಗರಿಸಿ ಮಣ್ಣು ಮುಕ್ಕಿದೆ. ಹವಮಾನ ವೈಪರಿತ್ಯದಿಂದ ವರ್ಷಧಾರೆ ಆರ್ಭಟಿಸಿದ್ದು, ಜಮೀನುಗಳು ತತ್ತರಿಸಿ ಬೆಳೆ ಸರ್ವನಾಶವಾಗಿದೆ. ಚಿತ್ತಾಪುರ ತಾಲೂಕಿನಾದ್ಯಂತ ಕೊಳೆತ ಹೆಸರು ಬೆಳೆಗಳದ್ದೇ ದರ್ಶನವಾಗುತ್ತಿದೆ. ವಾಡಿ, ನಾಲವಾರ, ಸನ್ನತಿ, ರಾವೂರ ವಲಯದಲ್ಲಿ ಭೂಮಿ ತೇವಾಂಶ ಅತಿಹೆಚ್ಚಳದಿಂದ ಹೆಸರು ಬೆಳೆಯ ಹಸಿರೆಲೆಗಳಿಗೆ ಹಳದಿ ರೋಗ ಬಾ ಧಿಸಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಕೆಸರಿನ ಹೂಳಿನಲ್ಲಿ ಕೊಳೆತು ಹಾಳಾದ ಫಸಲಿನಿಂದಾಗಿ ಇಳುವರಿಗೆ ಕುತ್ತು ಬಂದೆರೆಗಿದೆ. ನೀರು ಹೊತ್ತು ನಿಂತ ಹೊಲಗಳಲ್ಲಿನ ಹೆಸರು ಬೆಳೆಯ ಹಸಿರೆಲೆಗಳು ಹಳದಿ ಬಣ್ಣಕ್ಕೆ ಮರಳಿದ್ದು ಒಂದೆಡೆಯಾದರೆ, ಪ್ರವಾಹಕ್ಕೆ ಸಿಲುಕಿ ನರಳಿದ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹಸಿ ಬರದ ಛಾಯೆ ಮೂಡಿದೆ.
ಹೆಸರು ಬೆಳೆ ಕೃಷಿಗೆ ಕಡಿಮೆ ವೆಚ್ಚವಾದರೂ ಅಲ್ಪಾವಧಿಯಲ್ಲಿಯೇ ಹೆಚ್ಚು ಲಾಭ ತಂದುಕೊಡುವ ಬೆಳೆಯಾಗಿದ್ದರಿಂದ ಒಕ್ಕಲಿಗರು ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದ ಹೆಸರು ಬಿತ್ತನೆ ಮಾಡಿದ್ದಾರೆ. ಕೀಟ ಬಾಧೆ ಒಕ್ಕರಿಸಿ ಎಲೆಗಳು ಪುಡಿಪುಡಿಯಾಗಿವೆ. ಜಿಗಿ ಹುಳು, ಹೇನು, ನಂಜು, ಬೂದಿ ರೋಗ ತಗುಲಿ ಬೆಳೆ ನೆಲಕಚ್ಚಿದೆ. ಬಂಪರ್ ಬೆಳೆ ಹಾಗೂ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಅತಿವೃಷ್ಟಿಯ ಬರಸಿಡಿಲು ಬಡಿದಿದೆ. ಬಿತ್ತನೆಗೆ ಖರ್ಚು ಮಾಡಿದ ಬಂಡವಾಳ ಅಕ್ಷರಶಃ ನೀರುಪಾಲಾಗಿದೆ. ಅಳಿದುಳಿದ ಬೆಳೆ ಉಳಿಸಿಕೊಳ್ಳಲು ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ರೈತರು ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಬೇಸಾಯಗಾರರ ಬೆವರು ಕೂಡ ಮಣ್ಣಿಗೆ ಸೇರಿ ಕಣ್ಣೀರಾಗಿ ಹರಿದಿದೆ.
ಮಳೆ ಹೊಡೆತಕ್ಕೆ ಸಿಲುಕಿ ನರಳುತ್ತಿರುವ ರೈತರಿಗೆ ಧೈರ್ಯ ಹೇಳಿ ಪರ್ಯಾಯ ಮಾರ್ಗ ತೋರಿಸಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ಕಚೇರಿ ಸೇರಿಕೊಂಡಿದ್ದಾರೆ. ಹೆಸರು ಹಾಳಾಗಿ ಗೋಳಾಡುವವರು ಒಂದೆಡೆಯಾದರೆ, ತೊಗರಿ ಬೀಜದ ಮೊಳಕೆ ಕೊಳೆತು ಸಂಪೂರ್ಣ ಹಳ್ಳ ಹಿಡಿದಿದ್ದು ಕಂಡು ಬೆಳೆಗಾರ ಮರುಗುತ್ತಿದ್ದಾನೆ. ತೊಗರಿ ಬೆಳೆ ಹರಗಿ ಫಸಲು ಕಿತ್ತೆಸೆಯುತ್ತಿರುವ ಅನ್ನದಾತರು ಮರು ಬಿತ್ತನೆಗೆ ಚಾಲನೆ ನೀಡಿದ್ದಾರೆ.
ಹಳದಿ ರೋಗದಿಂದ ಶೇ.50ರಷ್ಟು ಇಳುವರಿ ನಷ್ಟ ಉಂಟಾಗಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ಬೆಳೆ ಸಂಪೂರ್ಣ ನಾಶವಾಗಿ ಶೇ.100ರಷ್ಟು ನಷ್ಟದ ಹೊಡೆತ ಬಿದ್ದಿದೆ. ಮಳೆ ನಂತರ ಬೆಳೆ ವೀಕ್ಷಣೆ ಮತ್ತು ಹಾನಿ ಸರ್ವೇಗೆ ಮುಂದಾಗಬೇಕಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಕಷ್ಟಕ್ಕೆ ಬೆನ್ನು ತಿರುಗಿಸಿದ್ದು ಶೋಚನೀಯ.
ವಿಪರೀತ ಮಳೆಯಿಂದಾಗಿ ನಾಲವಾರ ಕೃಷಿ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 5152 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ. ವಿವಿಧ ರೀತಿಯ ರೋಗ ಬಾಧೆಯಿಂದ ಹೆಸರು ಹಾಳಾಗಿದೆ. ತೇವಾಂಶ ಹೆಚ್ಚಾಗಿ ಬೆಳೆ ಚೇತರಿಸಿಕೊಳ್ಳದೆ ತೊಗರಿ ಫಸಲು ಸಂಪೂರ್ಣ ಕೊಳೆತುಹೋಗಿದೆ. ತೊಗರಿ ಮರು ಬಿತ್ತನೆಗಾಗಿ ಸಕಾಲದಲ್ಲಿ ಬೇಡಿಕೆಯಿದ್ದಷ್ಟು ರೈತರಿಗೆ ಬೀಜ ವಿತರಣೆ ಮಾಡಿದ್ದೇವೆ. ಅಂದಾಜು ರೂಪದಲ್ಲಿ ಈಗಾಗಲೇ ಬೆಳೆ ನಷ್ಟದ ಪಟ್ಟಿ ತಯಾರಿಸಿದ್ದೇವೆ. ತೊಗರಿ 3460 ಹೆಕ್ಟೇರ್, ಹೆಸರು 1120 ಹೆಕ್ಟೇರ್, ಉದ್ದು 92 ಹೆಕ್ಟೇರ್, 480 ಹೆಕ್ಟೇರ್ ಹತ್ತಿ ಬೆಳೆ ನಷ್ಟದ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದೇವೆ. ಬೆಳೆ ಪರಿಹಾರ ನಿರೀಕ್ಷೆಯಲ್ಲಿ ರೈತರಿದ್ದು, ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.
ಸತೀಶಕುಮಾರ ಪವಾರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ನಾಲವಾರ
*ಮಡಿವಾಳಪ್ಪ ಹೇರೂರ