Advertisement
ಕೆರೆ ಕಟ್ಟೆಗಳನ್ನು ರಕ್ಷಿಸಿ ಅಂತರ್ಜಲ ವೃದ್ಧಿಗೊಳಿಸಿ ನೀರು ಶೇಖರಿಸಿ ಎನ್ನುವ ಘೋಷವಾಕ್ಯಗಳು ಎಲ್ಲೆಡೆ ರಾರಾಜಿಸುತ್ತವೆ. ಬಿದ್ದ ಮಳೆ ನೀರು ಹರಿದು ಹೋಗದೇ ಶೇಖರಿಸಿ ಭೂಮಿಗೆ ಇಂಗಿಸುವ ಕೆಲಸ ಮಾಡಿ ಅಂತರ್ಜಲ ಹೆಚ್ಚು ಮಾಡಿ ಎಂದು ಪ್ರಚಾರ ಗಳು ನಡೆಯುತ್ತಲೇ ಇವೆ.
Related Articles
Advertisement
ಎಲ್ಲೆಡೆ ಒತ್ತುವರಿ: ಆದರೆ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆ ಬೆಳೆಯಾಗದಿರಲು ಅಂತರ್ಜಲ ಮಟ್ಟ ಕುಸಿದಿರುವುದೇ ಮೂಲ ಕಾರಣ ವಾಗಿದೆ. ಇದಕ್ಕೆ ಕೆರೆ, ಕಟ್ಟೆಗಳಲ್ಲಿ ನೀರಿಲ್ಲದಿರುವುದು, ಇರುವ ಕೆರೆ, ಕಟ್ಟೆಗಳಿಗೆ ಹರಿದು ಬರುತ್ತಿದ್ದ, ರಾಜ ಕಾಲುವೆಗಳು, ಹಳ್ಳಗಳನ್ನು ಒತ್ತುವರಿ ಮಾಡಿರುವುದು. ಜೊತೆಗೆ ಕೆರೆ ಅಂಗಳವನ್ನು ಭೂಗಳ್ಳರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವುದೇ ಕೆರೆ, ಕಟ್ಟೆಗಳು ತುಂಬದೇ ಇರಲು ಕಾರಣವಾಗಿವೆ.
ಈ ಹಿಂದೆ ಇದ್ದ ಕೆರೆ ಅಂಗಳಗಳ ವಿಸ್ತೀರ್ಣಕ್ಕೂ ಇಂದು ಇರುವ ಕೆರೆ ಅಂಗಳಗಳಿಗೂ ಅಜಗಜಾಂತರ ವ್ಯತ್ಯಾಸಗಳು ಕಂಡು ಬರುತ್ತಿರುವುದಕ್ಕೆ ಕೆರೆ ಅಂಗಳಗಳನ್ನು ಒತ್ತುವರಿ ಮಾಡಿರುವುದೇ ಮೂಲ ಕಾರಣವಾಗಿದೆ.
ಕೈಗೊಂಡಿಲ್ಲ ಎನ್ನುವ ಆರೋಪ: ಸುಪ್ರೀಂಕೋರ್ಟ್ ಆದೇಶದಂತೆ ಯಾವುದೇ ಕೆರೆ ಕಟ್ಟೆ ಒತ್ತುವರಿ ಮಾಡುವಂತಿಲ್ಲ. ಇರುವ ಕೆರೆ, ಕಟ್ಟೆಗಳನ್ನು ಯಥಾಸ್ಥಿತಿ ಕಾಪಾಡಬೇಕು ಎನ್ನುವ ನಿಯಮವಿದೆ. ಅದೇ ರೀತಿ ಯಲ್ಲಿ ಭೂ ಕಂದಾಯ ಕಾಯ್ದೆ 192 (ಎ) ಪ್ರಕಾರ ಒತ್ತುವರಿ ದಾರನ ಮೇಲೆ 192 (ಬಿ) ಪ್ರಕಾರ ಒತ್ತುವರಿಗೆ ತೆರವು ಮಾಡದ ಅಧಿಕಾರಿ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಆದರೆ, ಈ ವರೆಗೂ ಕೆರೆ ಒತ್ತುವರಿದಾರರ ಮೇಲೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಸಾರ್ವ ಜನಿಕರಿಂದ ಕೇಳಿಬರುತ್ತಿದೆ.
ಕೆರೆ ಕಟ್ಟೆಗಳ ಒತ್ತುವರಿ ತಡೆ ಕಾನೂನುಗಳನ್ನೇ ಗಾಳಿಗೆ ತೂರಿ ತಮ್ಮ ಮನಸ್ಸಿಗೆ ಬಂದಂತೆ ಒತ್ತುವರಿ ಮಾಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತು ಕೆರೆ, ಕಟ್ಟೆಗಳನ್ನು ಸಂರಕ್ಷಿಸಿ ಒತ್ತುವರಿಯನ್ನು ತಡೆಯುವತ್ತ ಹೆಚ್ಚು ಗಮನ ನೀಡುವುದು ಅಗತ್ಯವಾಗಿದೆ.
ಕಣ್ಮರೆ ಆಗುತ್ತಿವೆ ರಾಜಗಾಲುವೆಗಳು: ಕೆರೆಗಳಿಗೆ ನೀರು ಹರಿದು ಬರುವ ರಾಜಗಾಲುವೆಗಳು ಮತ್ತು ಕೆರೆ ತುಂಬಿದ ನಂತರ ಕೋಡಿ ಬಿದ್ದು ನೀರು ಹರಿದು ಹೋಗುವ ಹಳ್ಳ ಕೊಳ್ಳಗಳು ಮತ್ತು ಕೆರೆಯ ನೀರಿನ ತೂಬು ಎತ್ತಿದಾಗ ರೈತರ ಜಮೀನುಗಳಿಗೆ ಕೆರೆ ನೀರು ಹರಿದು ಹೋಗುತ್ತಿದ್ದ ಹಳ್ಳಗಳು ಇಂದು ಭೂಗಳ್ಳರ ಪಾಲಾಗಿವೆ. ಸಿಕ್ಕಷ್ಟೇ ಸಿಗಲಿ ಎಂದು ನೀರು ಹರಿಯುವ ಜಾಗವನ್ನೆಲ್ಲಾ ಒತ್ತುವರಿ ಮಾಡಿಕೊಂಡು ನೀರು ಕೆರೆಗೆ ಹರಿಯದಂತೆ ಕೆರೆಯ ನೀರು ಹೊರ ಹೋಗದಂತೆ ಒತ್ತುವರಿ ಮಾಡಿರುವುದು ಎಲ್ಲೆಡೆ ಕಂಡು ಬಂದಿದೆ.
ತುಮಕೂರು ನಗರದ ಪ್ರಮುಖ ಕೆರೆಯಾಗಿರುವ ಅಮಾನಿಕೆರೆಗೆ ನೀರು ಹರಿದು ಬರುತ್ತಿದ್ದ ಪ್ರಮುಖ ರಾಜಗಾಲುವೆಗಳೇ ಇಂದು ಮಾಯವಾಗಿವೆ. ಇದರಿಂದ ಕೆರೆಗೆ ಹರಿದು ಬರುತ್ತಿದ್ದ ಮಳೆಯ ನೀರು ಬರದಂತಾಗಿದೆ. ಕೆರೆ ತುಂಬುವದೇ ಕಷ್ಟವಾಗಿದೆ. ಇದಲ್ಲದೇ ತುಮಕೂರು ಅಮಾನಿಕೆರೆ ಸುತ್ತಮುತ್ತಾ ಇದ್ದ ರಾಜಗಾಲುವೆಗಳು, ಹಳ್ಳಗಳನ್ನು ಒತ್ತುವರಿ ಮಾಡಿ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ.
ಒಟ್ಟಾರೆಯಾಗಿ ಜಿಲ್ಲಾಡಳಿತ ಸರ್ಕಾರಿ ಜಮೀನು ಗಳನ್ನು ಭೂಗಳ್ಳರಿಂದ ಬಿಡಿಸಿ ಸರ್ಕಾರಕ್ಕೆ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಬೇಕಾಗಿದೆ. ತುಮಕೂರು ಈಗ ಸ್ಮಾರ್ಟ್ ಸಿಟಿಯಾಗಿ ಬೆಳವಣಿಗೆ ಆಗಲು ಎಲ್ಲ ರೀತಿಯ ತಯಾರಿ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ನಗರದ ಜನ ಸಂಖ್ಯೆ ಬೆಳೆವಣಿಗೆಗೆ ಅನುಗುಣವಾಗಿ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಜೊತೆಗೆ ಭೂಮಿಯ ಅಂತರ್ಜಲ ವೃದ್ದಿಸಲು ಕೆರೆ ಕಟ್ಟೆಗಳು, ರಾಜಗಾಲುವೆ ಗಳನ್ನು ಉಳಿಸಿ, ಅಭಿವೃದ್ಧಿ ಪಡಿಸುವುದು ಮಹತ್ತರ ವಾಗಿದೆ. ಈ ಕಾರ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ದಿಟ್ಟ ಹೆಜ್ಜೆ ಇಡುವರೇ?
ಚಿ.ನಿ.ಪುರುಷೋತ್ತಮ್