ಬೆಂಗಳೂರು: ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ತೆರವಾಗಿರುವ ರಾಜ್ಯದ ಆರು ಮಾಹಿತಿ ಆಯುಕ್ತರ ಹುದ್ದೆಗೆ ಭಾರೀ ಲಾಬಿ ಪ್ರಾರಂಭವಾಗಿದ್ದು, ಬರೋಬ್ಬರಿ 1400 ಅರ್ಜಿಗಳು ಸಲ್ಲಿಕೆಯಾಗಿದೆ.
ಈ ಸಂಬಂಧ ಸರ್ಕಾರ ಸೋಮವಾರ ಸಭೆ ನಡೆಸುವ ಸಾಧ್ಯತೆ ಇದ್ದು ನೀತಿ ಸಂಹಿತೆ ಘೋಷಣೆಗೆ ಮುನ್ನವೇ ನೇಮಕ ಪ್ರಕ್ರಿಯೆ ಮುಕ್ತಾಯವಾಗಲಿದೆ.
ಮಾಹಿತಿ ಆಯುಕ್ತರ ನೇಮಕವನ್ನು ಮುಖ್ಯಮಂತ್ರಿ, ಸ್ಪೀಕರ್, ಪ್ರತಿಪಕ್ಷ ನಾಯಕ ಹಾಗೂ ಕಾನೂನು ಸಚಿವರನ್ನು ಒಳಗೊಂಡ ಸಮಿತಿ ಅಂತಿಮಗೊಳಿಸುತ್ತದೆ.
ಈ ಹಿನ್ನೆಲೆಯಲ್ಲಿ ಸಭೆ ನಡೆಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಯಿಂದ ನೋಟಿಸ್ ಕಳುಹಿಸಲಾಗಿದ್ದು ಸೋಮವಾರ ಸಭೆ ನಡೆಸುವ ಸಾಧ್ಯತೆ ಹೆಚ್ಚಿದೆ.
ಮಾಹಿತಿ ಆಯುಕ್ತರ ಹುದ್ದೆಗೆ ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ವಕೀಲರು ಹಾಗೂ ಪ್ರಭಾವಿ ಪತ್ರಕರ್ತರು ಲಾಬಿ ಪ್ರಾರಂಭಿಸಿದ್ದಾರೆ. ಆಂಗ್ಲ ಪತ್ರಿಕೆ, ಪ್ರಮುಖ ಕನ್ನಡ ಪತ್ರಿಕೆ ಹಾಗೂ ಪ್ರಾದೇಶಿಕ ಪತ್ರಿಕೆಯೊಂದರ ವರದಿಗಾರರು ಸೇರಿ ಮೂವರು ಹಿರಿಯ ಪತ್ರಕರ್ತರು ಆಕಾಂಕ್ಷಿಗಳಾಗಿದ್ದಾರೆ.