ಗಂಗಾವತಿ: ಸತತ ಮಳೆಯ ಪರಿಣಾಮ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಬಾರಿ ಮುಂಗಾರು ಭತ್ತದ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿದೆ. ಪ್ರಸ್ತುತ ವರ್ಷ ಭತ್ತ ಬೆಳೆಯಲು ಎಕರೆಗೆ 25-30 ಸಾವಿರ ರೂ. ಖರ್ಚು ಬರುತ್ತಿದ್ದು, ಇಳುವರಿ ಎಕರೆಗೆ 30-35 ಕ್ವಿಂಟಲ್ ಬರುತ್ತಿದೆ. ಸಾಲ ಮಾಡಿ ಭತ್ತ ಬೆಳೆದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದಾಗಿ ಆಗಸ್ಟ್‌ನಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಸೋನಾಮಸೂರಿ, ಕಾವೇರಿ ಸೋನಾ, ಗಂಗಾವತಿ ಸೋನಾ ಯರ್ರಮಲ್ಲಿಗೆ ಸೇರಿ ವಿವಿಧ ಭತ್ತದ ತಳಿಗಳನ್ನು ನಾಟಿ ಮಾಡಿದ್ದಾರೆ. ಸತತ ಮಳೆ ಹಾಗೂ ಭತ್ತಕ್ಕೆ ಬಂದ ರೋಗದ ಪರಿಣಾಮ ಬಡ್ಡೆ ಸರಿಯಾಗಿ ವಿಸ್ತರಣೆಯಾಗಿಲ್ಲ. ಇದರಿಂದಅತೀಯಾದ ರಸಗೊಬ್ಬರ ಮತ್ತು ಕ್ರಿಮಿನಾಶ ಸಿಂಪರಣೆ ಮಾಡಿ ರೈತರು ಅಧಿಕ ಖರ್ಚು ಮಾಡಿದರೂ ಎಕರೆಗೆ 35 ಕ್ವಿಂಟಲ್ ಭತ್ತದ ಇಳುವರಿ ಬರುತ್ತಿದ್ದು, ರೈತ ಖರ್ಚು ಮಾಡಿದ ಹಣ ವಾಪಸ್ ಬರುತ್ತಿಲ್ಲ.
ಭತ್ತಕ್ಕೆ ಹೊಸಬಗೆಯ ರೋಗ: ವಿಪರೀತ ಮಳೆಯ ಪರಿಣಾಮ ಭತ್ತದ ಬೆಳೆಗೆ ಕಣೆಹುಳು ರೋಗ, ಬಡ್ಡೆ ಕೊಳೆ ರೋಗ ವೈರಸ್ ರೋಗ ಹೀಗೆ ಹಲವುರೋಗಗಳು ಬಂದ ಪರಿಣಾಮ ಭತ್ತಕ್ಕೆ ಟಿಸಿಲುಹೊಡೆದೇ ಇರುವುದು ಇಳುವರಿ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ರೋಗ ತಡೆಯಲು ರೈತರು ದುಬಾರಿಯ ಕ್ರಿಮಿನಾಶಕ ಸಿಂಪರಣೆ ಮಾಡಿ ಅಧಿಕ ಖರ್ಚು ಮಾಡಿದ್ದಾರೆ.
ಕಡಿಮೆ ಇಳುವರಿ: ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಎಕರೆಗೆ 40-45(75ಕೆಜಿ ಭರ್ತಿ) ಕ್ವಿಂಟಲ್ ಭತ್ತದ ಇಳುವರು ಬರುತ್ತಿತ್ತು. ಈ ಭಾರಿ ಕೇವಲ 30-35 ಕ್ವಿಂಟಲ್ ಇಳುವರಿ ಬರುತ್ತಿದ್ದು, ಇದರಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಹೆಚ್ಚಾಗಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಮಾಡುವ ರೈತರಿದ್ದು, ಭೂಮಿಯ ಮಾಲೀಕನಿಗೆ 12-15 ಚೀಲ ಭತ್ತ ಗುತ್ತಿಗೆ ಕೊಡಬೇಕಿದೆ. ಸ್ವಂತ ಭೂಮಿ ಇರುವ ರೈತರು ನಷ್ಟ ಭರಿಸುವ ಶಕ್ತಿ ಹೊಂದಿದ್ದು, ಗುತ್ತಿಗೆ ಮಾಡುವ ರೈತರಿಗೆ ತೊಂದರೆಯಾಗಿದೆ.
ಭತ್ತದ ಖರೀದಿಗೆ ಬಾರದ ವ್ಯಾಪಾರಿಗಳು: ಕೇಂದ್ರ ಸರಕಾರ ಭತ್ತದ ರಫ್ತು ನಿಷೇಧ ಮಾಡಿರುವುದರಿಂದ ಕಳೆದ ಒಂದು ವರ್ಷದಿಂದ ಭತ್ತಕ್ಕೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ವ್ಯಾಪಾರಿಗಳು ಭತ್ತವನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಸದ್ಯಕ್ವಿಂಟಲ್(75ಕೆಜಿ) ಭತ್ತಕ್ಕೆ 900-950 ರೂ. ದರ ಇದ್ದು, ಕೇಂದ್ರ ಸರಕಾರದ ಬೆಂಬಲ(ಎಂಎಸ್‌ಪಿ) ಬೆಲೆಗಿಂತ 300 ರೂ. ಕಡಿಮೆ ಇದ್ದು ರೈತರು ತಾವು ಬೆಳೆದ ಭತ್ತವನ್ನು ಖರೀದಿ ಕೊಡಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ.
ಸತತ ಮಳೆ ಪರಿಣಾಮ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಭಾರಿ ಭತ್ತದ ಬೆಳೆಯ ಇಳುವರಿ ಕಡಿಮೆಯಾಗಿದೆ. ಕಳೆದ ವರ್ಷದ ಭತ್ತಕ್ಕೆ ಸೂಕ್ತ ದರ ಸಿಗದೇ ಹೊಸ ಭತ್ತಕ್ಕೆ ವೈಜ್ಞಾನಿಕ ಬೆಲೆ ಸಿಗುವುದು ಅಸಾಧ್ಯವಾಗಿದೆ.ಕೇಂದ್ರ ಸರಕಾರ ಭತ್ತದ ರಫು¤ ಮಾಡುವುದನ್ನು ನಿಷೇಧ ಮಾಡಿರುವುದು ಭತ್ತದ ಬೆಲೆ ಕುಸಿಯಲು ಪ್ರಮುಖ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ರೈತರು ಬೆಳೆದ ಭತ್ತವನ್ನು ವೈಜ್ಞಾನಿಕ ಬೆಲೆ ನೀಡಿ ಖರೀದಿಸಬೇಕಿದೆ. ಮೋರಿ ದುರುಗಪ್ಪ, ರೈತ ಹೊಸಳ್ಳಿ
-ಕೆ. ನಿಂಗಜ್ಜ