Advertisement

ಕಲ್ಲಂಗಡಿಗೆ ಭಾರೀ ಡಿಮ್ಯಾಂಡ್‌…

09:13 PM Feb 11, 2020 | Lakshmi GovindaRaj |

ಚಿಕ್ಕನಾಯಕನಹಳ್ಳಿ: ಬೆಳಗ್ಗೆ ಚುಮು ಚುಮು ಚಳಿ…ಮಧ್ಯಾಹ್ನವಾಗುತ್ತಲೇ ಬಿಸಿಲಿನ ಝಳಕ್ಕೆ ಜನರು ದಾಹ ತಣಿಸಿಕೊಳ್ಳಲು ಕಲ್ಲಂಗಡಿ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಪಟ್ಟಣದಲ್ಲಿ ಕಲ್ಲಂಗಡಿಗೆ ಭಾರೀ ಬೇಡಿಕೆ ಬಂದಿದೆ. ಈಗಾಗಲೇ ಪಟ್ಟಣದೆಲ್ಲಡೆ ಸಾಕಷ್ಟು ಕಲ್ಲಂಗಡಿ ಆವಕವಾಗಿದ್ದು, ಅಷ್ಟೇ ಪ್ರಮಾಣದಲ್ಲಿ ಗ್ರಾಹಕರಿರುವುದು ವ್ಯಾಪಾರಿಗಳಲ್ಲಿ ಸಂತಸ ಇಮ್ಮಡಿಗೊಂಡಿದೆ.

Advertisement

ತಾಲೂಕಿನಲ್ಲಿ ಮುಂಜಾನೆ ಚಳಿ ಪ್ರಮಾಣ ಹೆಚ್ಚಿದ್ದರೂ, ಮಧ್ಯಾಹ್ನದ ಹೊತ್ತಿಗೆ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ಗೆ ಏರಿ ಜನರು ಹೈರಾಣಾಗುವಂತಾಗಿದೆ. ಜತೆಗೆ ಹೀಗಾಗಿ ಬೇಸಿಗೆ ಆರಂಭಕ್ಕೂ ಮುನ್ನವೇ ಕಲ್ಲಂಗಡಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಬಿಸಿಲಿನ ತಾಪದ ದಾಹ ತಣಿಸಲು ಜನರು ಕಲ್ಲಂಗಡಿಗೆ ಮೊರೆ ಇಟ್ಟಿದ್ದಾರೆ.

ಕೆ.ಜಿ.ಗೆ 25ರಿಂದ 30 ರೂ.: ಪಟ್ಟಣಕ್ಕೆ ಲಾರಿಗಟ್ಟಲೇ ಕಲ್ಲಂಗಡಿ ಆವಕವಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಕಲ್ಲಂಗಡಿ ಅಂಗಡಿಗಳು ತೆರೆದಿವೆ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಬೆಂಗಳೂರಿನ ಸುತ್ತಲಿನಿಂದ ಕಲ್ಲಂಗಡಿ ಮಾರುಕಟ್ಟೆಗೆ ಬರುತ್ತಿದೆ. ಕಲ್ಲಂಗಡಿ ಹಣ್ಣು ಕೆ.ಜಿ. ಲೆಕ್ಕದಲ್ಲಿ ಮಾರಟವಾಗುತ್ತಿದ್ದು, ಒಂದು ಕೆ.ಜಿ ಗೆ 25-30 ರೂ. ಇದೆ. ಒಂದು ಪ್ಲೇಟ್‌ ಅಥವಾ ಹಣ್ಣಿನ ಪೀಸ್‌ಗೆ 10 ರೂ.ಗೆ ಮಾರಾಟವಾಗುತ್ತಿದೆ. ಒಟ್ಟಾರೆ 1 ತಿಂಗಳಿಗೆ 2 ಲಾರಿ ಲೋಡ್‌ ಕಲ್ಲಂಗಡಿ ಮಾರಟಮಾಡುವುದಾಗಿ ವ್ಯಾಪಾರಿಗಳು ತಿಳಿಸುತ್ತಾರೆ.

ಆರೋಗ್ಯಕ್ಕೂ ಕಲ್ಲಂಗಡಿ ಉತ್ತಮ: ಬೇಸಿಗೆ ದಿನಗಳಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ಮನುಷ್ಯದ ದೇಹ ದೇಹದ ನೀರಿನ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಜತೆಗೆ ಮನಷ್ಯನ ದೇಹದಲ್ಲಿನ ನೀರಿನ ಪ್ರಮಾಣ ಬಿಸಿಲಿನ ಝಳಕ್ಕೆ ಕಡಿಮೆಯಾಗುವುದರಿಂದ ನಿರ್ಜಲೀಕರಣ, ಅಜೀರ್ಣದಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಕಲ್ಲಂಗಡಿ ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಮಿಟಮಿನ್‌ ಸಿ ಇದ್ದು, ಮಾನವ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶ ಸಿಗುತ್ತದೆ. ಬಿಸಿಲಿನಲ್ಲಿ ದಾಹ ನೀಗಿಸುವ ಜೊತೆಗೆ ದೇಹದ ಆರೋಗ್ಯ ಕಾಪಾಡುವಲ್ಲಿ ಕಲ್ಲಂಗಡಿ ಹಣ್ಣು ಮುಖ್ಯವಾಗಿದೆ.

ಎಳೆ ನೀರಿಗೂ ಬೇಡಿಕೆ: ಎಳನೀರಿಗೆ ಕಲ್ಪತರು ನಾಡಿನಲ್ಲಿ ಬರವಿಲ್ಲ. ತೆಂಗಿನ ಕಾಯಿ ದೀಪಾವಳಿ ಸಮಯದಲ್ಲಿ ಕೊನೆಯಾಗುತ್ತದೆ. ಜನವರಿಯಿಂದ ಹೊಸ ಎಳನೀರು ಮರದಲ್ಲಿ ಸಿಗುವುದರಿಂದ ಬೆಸಿಗೆ ಸಮಯಲ್ಲಿ ಎಳನೀರು ಅಧಿಕವಾಗಿ ಸಿಗುತ್ತದೆ. ಕೊಬ್ಬರಿ ಬೆಲೆ ಏರುಪೇರು ಆಗುವುದರಿಂದ ಕೆಲವರು ಎಳನೀರನ್ನು ಮಾರಾಟ ಮಾಡುತ್ತಾರೆ. ರೈತರ ಬಳಿ 10-15 ರೂಗೆ ಎಳನೀರನ್ನು ಖರೀದಿಸಿ, ಪಟ್ಟಣದಲ್ಲಿ ವ್ಯಾಪಾರಿಗಳು 25-30 ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ.

Advertisement

ಪ್ರತಿ ದಿನ ಒಬೊಬ್ಬ ವ್ಯಾಪಾರಿ ಪ್ರತಿ ದಿನ 80-150 ಎಳನೀರನ್ನು ಬೆಸಿಗೆ ಮುನ್ನವೇ ಮಾರಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬೆಸಿಗೆ ಮುನ್ನವೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಮುಂದಿನ ದಿನ ಇನ್ನೂ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ. ರಾಸಾಯನಿಕ ಮಿಶ್ರಿತ ತಂಪು ಪಾನಿಯ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು, ರೈತರ ನೈಸರ್ಗಿಕ ಉತ್ಪನ್ನಗಳನ್ನು ಸೇವಿಸಿ, ರೈತರಿಗೂ ಪ್ರೋತ್ಸಹ ನೀಡಲು ಬೆಸಿಗೆ ಒಳ್ಳೆಯ ಸಮಯವಾಗಿದೆ.

ವಿದೇಶಿ ಪಾನಿಯಗಳಿಗಿಂತ ಕಲ್ಲಂಗಡಿಯೇ ಬೆಸ್ಟ್‌…: ಪೆಪ್ಸಿ, ಕೋಕಾ-ಕೋಲಾ, ಥಮ್ಸಪ್‌, ಸೆವೆನಪ್‌ನಂತಹ ವಿದೇಶಿ ಪಾನಿಯಗಳಿಗಿಂತ ಬೇಸಿಗೆಗೆ ಕಲ್ಲಂಗಡಿಯೇ ಬೆಸ್ಟ್‌. ಕಲ್ಲಂಗಡಿ ಶೀಘ್ರ ಜೀರ್ಣ ಹಾಗೂ ದೇಹಕ್ಕೆ ನೀರಿನಾಂಶ ಸೇರಿದಂತೆ ಹಲವು ಪೋಷಕಾಂಶಗಳನ್ನು ಒದಗಿಸುವುದರಿಂದ ದೇಹ ತಂಪಾಗಿ ಹಾಗೂ ಆರೋಗ್ಯಕರವಗಿಯೂ ಇರುತ್ತದೆ. ಆದರೆ ವಿದೇಶಿ ಪಾನಿಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಿತಕರವಲ್ಲ, ಜತೆಗೆ ಭವಿಷ್ಯದಲ್ಲಿ ಹಲವು ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ.

ಪಾನಿಯಗಳಿಗೂ ಹೆಚ್ಚಿದ ಬೇಡಿಕೆ: ಬೇಸಿಗೆ ದಾಹ ತಣಿಸಲು ಕಲ್ಲಂಗಡಿಯಷ್ಟೇ ಅಲ್ಲದೆ, ಏಳನೀರ, ಕಬ್ಬಿನ ಹಾಲಿನ ಮಪರೆ, ಹಣ್ಣಿನ ರಸ, ಲಿಂಬು ಶರಬತ್ತಿಗೂ ಬೇಡಿಕೆ ಹೆಚ್ಚಾಗಿದೆ. ಒಂದು ಎಳೆನೀರಿಗೆ 30 ರೂ., ಒಂದು ಲೋಟ ಕಬ್ಬಿನ ಹಾಲಿಗೆ 15ರಿಂದ 20 ರೂ., ಲಿಂಬು ಶರಬತ್ತು, ಸೋಡಾಗಳಿಗೆ ಲೋಟಕ್ಕೆ 5ರಿಂದ 10 ರೂ. ಬೆಲೆಯಿದೆ.

ಬಿಸಿಲು ಹೆಚ್ಚಿದಂತೆ ಕಲ್ಲಂಗಡಿಗೆ ಬೇಡಿಕೆ ಹೆಚ್ಚು. ಮಾರ್ಚ್‌, ಏಪ್ರಿಲ್‌ನಲ್ಲಿ ಮಾರಾಟ ಜೋರಾಗಿರುತ್ತದೆ. ಈಗ ಇನ್ನೂ ಪೂರ್ಣ ಪ್ರಮಾಣದ ಬೇಸಿಗೆ ಆರಂಭವಾಗಿಲ್ಲ. ಆದರೂ ಕಲ್ಲಂಗಡಿ ವ್ಯಾಪಾರ ಜೋರಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಲಿದೆ.
-ಆಕ್ರಂ ಪಾಷಾ. ವ್ಯಾಪಾರಿ

ಬೇಸಿಗೆ ಅರಂಭಕ್ಕೂ ಮುನ್ನ ಬಿಸಿಲು ಹೆಚ್ಚಾಗಿದೆ. ಜನರು ದಾಹ ನೀಗಿಸಿಕೊಳ್ಳಲು ರಾಸಾಯನಿಕ ತಂಪು ಪಾನಿಯ ಸೇವಿಸುವ ಬದಲು ನೈಸರ್ಗಿಕವಾಗಿ ಇರುವ ಕಲ್ಲಂಗಡಿ ಹಣ್ಣು ಸೇವಿಸಿದರೆ ಆರೋಗ್ಯ ಚನ್ನಾಗಿರುತ್ತದೆ. ರೈತರಿಗೂ ವ್ಯಾಪಾರವಾಗುತ್ತದೆ.
-ವಿನಯ್‌, ಶೆಟ್ಟಿಕೆರೆ

* ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next