ಸಿರುಗುಪ್ಪ: ತಾಲೂಕಿನಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕುಡಿಯಲು ತಂಪು ನೀರು ಬಳಸುವುದು ಹೆಚ್ಚಾಗಿದೆ. ತಣ್ಣೀರಿಗಾಗಿ ಬಳಸುವ ಮಣ್ಣಿನ ಮಡಿಕೆಗಳನ್ನು ನಗರದ ನಗರಸಭೆ ಕಚೇರಿ ಎದುರು ತರಕಾರಿ ಮಾರುಕಟ್ಟೆ, ಅಭಯಾಂಜನೇಯ ದೇವಸ್ಥಾನದ ಹತ್ತಿರ, ತಾಲೂಕು ಕ್ರೀಡಾಂಗಣದ ಹತ್ತಿರ ಮಾರಾಟಕ್ಕಿಡಲಾಗಿದೆ.
ಬೇಸಿಗೆಯಲ್ಲಿ ಫ್ರಿಡ್ಜ್ನಲ್ಲಿಟ್ಟ ನೀರನ್ನು ತಂಪುಮಾಡಿ ಕುಡಿಯುವುದರಿಂದ ನೆಗಡಿ, ಕೆಮ್ಮು ಬರುತ್ತದೆ ಎನ್ನುವ ಕಾರಣಕ್ಕೆ ಬಹುತೇಕ ಜನರು ಬೇಸಿಗೆಯಲ್ಲಿ ಫ್ರಿಡ್ಜ್ನಲ್ಲಿಟ್ಟ ತಣ್ಣನೆಯ ನೀರನ್ನು ಬಳಸುವುದಿಲ್ಲ. ಇದರಿಂದಾಗಿ ಬೇಸಿಗೆಯಲ್ಲಿ ಕುಂಬಾರರು ಮಾಡಿದ ಕುಡಿಯುವ ನೀರಿನ ಮಡಿಕೆಗಳಿಗೆ ಬೇಡಿಕೆ ಬರುತ್ತಿದೆ. ಮಾರ್ಚ್ ನಂತರ ಬಿಸಿಲಿನ ತಾಪ ಮತ್ತಷ್ಟು ಏರಿಕೆಯಾಗಲಿದ್ದು, ಮಡಿಕೆ ಯಲ್ಲಿರುವ ತಣ್ಣೀರನ್ನು ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಸಾರ್ವಜನಿಕರು ಕಳೆದ ಒಂದು ವಾರದಿಂದ ಮಣ್ಣಿನ ಮಡಿಕೆಗಳನ್ನು ಖರೀದಿಸುವುದು ಸಾಮಾನ್ಯವಾಗಿದೆ.
ಮಾರುಕಟ್ಟೆಯಲ್ಲಿ 100 ರೂ.ನಿಂದ ಹಿಡಿದು 500 ರೂ.ವರೆಗಿನ ಮಡಿಕೆಗಳನ್ನು ಮಾರಾಟಕ್ಕಿಡಲಾಗಿದೆ. ನಲ್ಲಿ ಅಳವಡಿಸಿದ ಮಡಿಕೆಗೆ ಹೆಚ್ಚಿನ ಬೇಡಿಕೆ ಇದ್ದು, 400 ರಿಂದ 450 ರೂ. ವರೆಗೆ ನಲ್ಲಿ ಅಳವಡಿಸಿದ ಮಡಿಕೆಯು ಮಾರಾಟವಾಗುತ್ತಿದೆ. ಬಡವರ ಮನೆಯ ಫ್ರಿಡ್ಜ್ ಎಂದೇ ಹೆಸರಾಗಿರುವ ಮಣ್ಣಿನ ಮಡಿಕೆಗಳಿಗೆ ನಗರದಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಮಡಿಕೆ ಮಾಡುವ ಕುಂಬಾರರಿಗೆ ಒಂದಷ್ಟು ಆರ್ಥಿಕ ಲಾಭ ದೊರೆಯುತ್ತಿದೆ.
“ಹೊರಗಿನಿಂದ ಮನೆಗೆ ಬಂದವರು ಮಡಿಕೆಯಲ್ಲಿರುವ ತಣ್ಣೀರನ್ನು ಸೇವನೆ ಮಾಡುವುದರಿಂದ ದೇಹವು ತಂಪಾಗುತ್ತದೆ, ಈ ನೀರನ್ನು ಸೇವಿಸುವುದರಿಂದ ನೆಗಡಿ, ಕೆಮ್ಮು ಸೇರಿದಂತೆ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಹಾಕಲು ಮಣ್ಣಿನ ಮಡಿಕೆಗಳನ್ನು ಬಳಸಿದರೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಮಣ್ಣಿನ ಮಡಿಕೆ ಖರೀದಿಸುತ್ತಿದ್ದೇವೆ’ ಎನ್ನುತ್ತಾರೆ ನಗರ ನಿವಾಸಿ ಫರೀದಾಬಾನು.
“ಬೇಸಿಗೆಯಲ್ಲಿ ಫ್ರಿಡ್ಜ್ನಲ್ಲಿರುವ ತಣ್ಣೀರಿಗಿಂತ ಮಣ್ಣಿನ ಮಡಿಕೆಯಲ್ಲಿರುವ ತಣ್ಣೀರನ್ನು ಸೇವಿಸಿದರೆ ಆರೋಗ್ಯಕ್ಕೆ ಸಹಕಾರಿ. ಮಣ್ಣಿನ ಮಡಿಕೆಯಲ್ಲಿ ನೀರು ಸಹಜವಾಗಿಯೇ ತಣ್ಣಗಾಗುವುದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ’ ಎನ್ನುತ್ತಾರೆ ವೈದ್ಯ ಡಿ.ಬಸವರಾಜ ಅವರು.
“ವರ್ಷದ ಒಂಬತ್ತು ತಿಂಗಳು ನಮ್ಮ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಇರುವುದಿಲ್ಲ, ಬೇಸಿಗೆಯಲ್ಲಿ ಮಾತ್ರ ಮಡಿಕೆಗಳಿಗೆ ಬೇಡಿಕೆ ಬರುತ್ತಿರುವುದು ನಮಗೆ ಆರ್ಥಿಕವಾಗಿ ಒಂದಷ್ಟು ಲಾಭ ದೊರೆಯುತ್ತಿದೆ. ಮಾಡಿದ ಕೆಲಸಕ್ಕೆ ಒಂದಷ್ಟು ನೆಮ್ಮದಿ ದೊರೆಯುತ್ತಿದೆ ಎಂದು ಮಡಿಕೆ ಮಾರಾಟ ಮಾಡುವ ಕುಂಬಾರ ರಾಮಣ್ಣ ತಿಳಿಸುತ್ತಾರೆ.
ಆರ್.ಬಸವರೆಡ್ಡಿ ಕರೂರು