ದೇವನಹಳ್ಳಿ: ನಾಟಿ ಹಸುಗಳ ಮೂತ್ರ ಮತ್ತು ಸಗಣಿಗೆ ಭಾರೀ ಬೇಡಿಕೆ ಇದೆ. ದೇಸಿ ಹಸು ತಳಿ ಉಳಿಸಲು ತಾಲೂಕಿನ ಬೀರಸಂದ್ರ ಗ್ರಾಮದ ರೈತ ಮಂಜುನಾಥ್ ಗೌಡ ಮಂದಾಗಿದ್ದಾರೆ. ಇಂದಿನ ಆಧುನಿಕತೆ ಬೆಳೆಯುತ್ತಿರುವುದರಿಂದ ಕೃಷಿ ಯಂತ್ರೋಪಕರಣ ಬಳೆಕೆ ಹೆಚ್ಚಾದ ಮೇಲೆ ಪಶುಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. ಪಶು ಪಾಲನಾ ಇಲಾಖೆಯ 2012ರ ಗಣತಿ ಪ್ರಕಾರ ಜಿಲ್ಲೆಯಲ್ಲಿ ದನ ಮತ್ತು ನಾಟಿ ಹಸು 36 ಸಾವಿರದ 456 ಇವೆ. ದೇವನಹಳ್ಳಿ 1524, ದೊಡ್ಡಬಳ್ಳಾಪುರ 17110, ನೆಲಮಂಗಲ 15224 ಹಾಗೂ ಹೊಸಕೋಟೆ 2580 ಇವೆ ಎಂದು ತಿಳಿದು ಬಂದಿದೆ.
200 ಹಸು ಸಾಕುವ ಚಿಂತನೆ: 7 ವರ್ಷದಿಂದ ನಾಟಿ ಹಸುಗಳನ್ನು ಖರೀದಿಸಿ, ಸಾಗಾಣಿಕೆ ಮಾಡುತ್ತಿದ್ದೇವೆ. ಹೆಚ್ಚಿನ ಬಂಡವಾಳವನ್ನು ಹೂಡಲಾಗಿದೆ. ಕೆಲವರು ಇಷ್ಟು ಹಣ ಕೊಟ್ಟು ಖರೀದಿಸಿದ್ದೀರಿ ಎಂದು ಅಪ ಹಾಸ್ಯ ಮಾಡುತ್ತಿದ್ದರೂ ಪಾರಂಪರಿಕ ಮೂಲ ತಳಿ ಉಳಿಸುವ ಉದ್ದೇಶದಿಂದ 2 ಎಕರೆಯಲ್ಲಿ ಹಸು ಸಾಕಾಣಿಕೆ ಕೇಂದ್ರ ಪ್ರಾರಂಭಿಸಲು ಸುಮಾರು 200 ಹಸುಗಳನ್ನು ಸಾಕುವ ಚಿಂತನೆ ಮಾಡಲಾಗುತ್ತಿದೆ. ನಾಟಿ ಹಸುವಿನ 1 ಲೀಟರ್ ಹಾಲಿಗೆ 80 ರೂ., 1/2 ಲೀಟರ್ ಮೂತ್ರಕ್ಕೆ 50 ರೂ. ಇದೆ. ಇದಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಬೀರಸಂದ್ರ ಗ್ರಾಮದ ರೈತ ಮಂಜುನಾಥ್ ಗೌಡ ತಿಳಿಸಿದ್ದಾರೆ.
ಪ್ರತಿ ಮನೆಯಲ್ಲೂ ಹಸುಗಳಿದ್ದವು: ಕೆಲವು ದಶಕಗಳ ಹಿಂದೆ ಪ್ರತಿ ಕುಟುಂಬದಲ್ಲಿ ಹತ್ತಾರು ಹಸುಗಳ ಇರುತ್ತಿತ್ತು. ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಹಸುಗಳ ಹೊರತು ಪಡಿಸಿದ ಹಸುಗಳಿಗೆ ಮೂಗುದಾರ ಹಾಕುತ್ತಿರಲಿಲ್ಲ. ಒಂದು ಗ್ರಾಮದಲ್ಲಿ ಮೇಯಿಸಲು ಒಂದಿಬ್ಬರನ್ನು ನೇಮಕ ಮಾಡಿ, ಸುಮಾರು ಮಾಸಿಕ ಇಂತಿಷ್ಟು ಹಣ ಮತ್ತು ಧಾನ್ಯಗಳನ್ನು ನೀಡುತ್ತಿದ್ದರು ಎಂದು ನೆನಪಿಸಿಕೊಳ್ಳಬೇಕು ಎಂದು ಹಿರಿಯರು ಹೇಳುತ್ತಾರೆ.
ಆಯುರ್ವೇದ ಔಷಧಿಗೆ ಬಳಕೆ: ನಾಟಿ ಹಸುಗಳ ಮೂತ್ರ ಮತ್ತು ಸಗಣಿಗೆ ಹಲವು ರೋಗಗಳಿಗೆ ರಾಮ ಬಾಣವಾಗಿದೆ. ಆಯುರ್ವೇದ ಔಷಧಗಳಲ್ಲಿ 48 ರೋಗಗಳಿಗೆ ಬಳಕೆ ಮಾಡುವ ಮಾತ್ರೆ, ಕಷಾಯ ಹಾಗೂ ಔಷಧಗಳಿಗೆ ಹೆಚ್ಚಾಗಿ ಗೋ ಮೂತ್ರ ಬಳಸುತ್ತಾರೆ. ಕೃಷಿ ಆಧುನಿಕತೆ ಬೆಳೆದಂತೆ ದೇಸಿ ಹಸುಗಳ ತಳಿ ಉಳಿಸಲು ಮುಂದಾಗ ಬೇಕಾಗಿದೆ. ಸರ್ಕಾರ ಈಗಾಗಲೇ ಸುಭಾಷ್ ಪಾಲೇಕಾರ್ ಅವರ ಶೂನ್ಯ ಬಂಡವಾಳ ಯೋಜನೆಯಲ್ಲಿ ನಾಟಿ ಹಸುಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಯೋಜನೆ ರೂಪಿಸಿದ್ದಾರೆ. ಇದರಲ್ಲಿ ಪಂಚ ದ್ರವ್ಯ ತಯಾರಿಸಿ, 5ರಿಂದ 10 ಗುಂಟೆ ಪ್ರದೇಶದಲ್ಲಿ ಬೆಳೆಯುವ ಬೆಳೆಗಳಿಗೆ ಪ್ರಯೋಗಿಕವಾಗಿ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.
ಮಲೆನಾಡು ಗಿಡ್ಡ ಮತ್ತು ಬಯಲು ಸೀಮೆ ಹಳ್ಳಿಕಾರ್ ತಳಿಗಳು ಉತ್ತಮ ಹಾಲು, ಮೊಸರು ನೀಡುವ ತಳಿಗಳು ಎಂದು ಪಶು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈಗ ಪರಿಸ್ಥಿತಿಯು ಬದಲಾಗಿದೆ. ನಾಟಿ ಹಸುಗಳ ಪಾಲನೆಯ ಜೊತೆಗೆ ಕೃಷಿ ಚಟುವಟಿಕೆಗಳು ಅವನತಿ ಅತ್ತ ಸಾಗುತ್ತಿದೆ. ಇಂತಹ ನಾಟಿ ಹಸುಗಳಿಗೆ ಪ್ರೋತ್ಸಾಹ ನೀಡಿದರೆ ಮತ್ತಷ್ಟು ಕೃಷಿ ಚಟುವಟಿಕೆಗಳು ಹೆಚ್ಚು ಹೆಚ್ಚು ರೈತರ ಆರ್ಥಿಕ ಮಟ್ಟ ಹೆಚ್ಚಿಸಲು ಸಹಕಾರಿ ಎಂದು ರೈತರು ಹೇಳುತ್ತಾರೆ.
ನಾಟಿ ಹಸುಗಳ ಪ್ರೋತ್ಸಾಹಕ್ಕಾಗಿ ಪಶು ಪಾಲನಾ ಇಲಾಖೆಯಿಂದ 3 ತರಹದ ಪೌಷ್ಠಿಕಾಂಶ ಪಶು ಆಹಾರ ನೀಡಲಾಗುತ್ತಿದೆ. ರೈತರು ಪಾರಂಪರಿಕ ತಳಿ ಉಳಿಸಲು ಉಚಿತ ಆಹಾರ ನೀಡಲಾಗುತ್ತಿದೆ. ರೈತರು ಹೆಚ್ಚು ಸಾಕಾಣಿಕೆ ಮಾಡಬೇಕು.
-ಅನಿಲ್ ಕುಮಾರ್, ಜಿಲ್ಲಾ ಪಶು ಪಾಲನಾ ಇಲಾಖೆಯ ಮುಖ್ಯ ಅಧಿಕಾರಿ
ನಾಟಿ ಹಸುಗಳ ಮೂತ್ರ ಮತ್ತು ಸಗಣಿಯಿಂದ ಬೆಳೆಗಳಿಗೆ ನೀಡುವುದರಿಂದ ಯಾವುದೇ ರೋಗ ಬರದಂತೆ ನಿಯಂತ್ರಣ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿದೆ. ರಾಸಾಯಿನಿಕ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಡಿಮೆಯಾಗುತ್ತದೆ. ಆದರೆ, ಸಗಣಿಯಿಂದ ಭೂಮಿಯ ಫಲವತ್ತತೆ ಹೆಚ್ಚುವುದು. ಗುಣ ಮಟ್ಟದ ಬೆಳೆಯನ್ನು ಬೆಳೆಯಬಹುದು.
-ಎಂ.ಎನ್. ಮಂಜುಳಾ, ತಾಲೂಕು ಕೃಷಿ ಸಹಾಯಕ ನಿರ್ದೇಶಕಿ
* ಎಸ್. ಮಹೇಶ್