ಹಾವೇರಿ: ಜಿಲ್ಲೆಯಲ್ಲಿ ಸೂರ್ಯ ದೇವನ ಶಾಖ ದಿನದಂದ ದಿನಕ್ಕೆ ಪ್ರಖರಗೊಳ್ಳುತ್ತಾ ಸಾಗಿದ್ದು, ಬಿಸಿಲಿನ ಬೇಗೆಗೆ ಜನತೆ ತತ್ತರಿಸುವಂತಾಗಿದೆ. ಎಲ್ಲೆಡೆ ಜನರು ಹಣ್ಣು ಹಾಗೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.
ನಗರದಲ್ಲಿ ಈಗ ತಂಪು ಪಾನೀಯ, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಸಿಗೆಯ ಬೇಗೆ ತಣಿಸಲೆಂದೇ ರಸ್ತೆ ಬದಿಯಲ್ಲಿ ಕಲ್ಲಂಗಡಿ, ಕರಬೂಜ ಹಣ್ಣು, ಕಬ್ಬಿನ ಹಾಲಿನ ಜ್ಯೂಸ್, ಎಳನೀರಿನ ಅಂಗಡಿಗಳು ತಲೆಯತ್ತಿದ್ದು, ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಶಾಖದ ಪ್ರಮಾಣ ಹೆಚ್ಚುತ್ತಿದೆ. ಮಾರ್ಚ್ ಅಂತ್ಯದಿಂದಲೇ ಬಿಸಿಲಿನ ಝಳ ಶುರುವಾಗಿದ್ದು, ಏಪ್ರಿಲ್‌ನಲ್ಲಿ ಇನ್ನೂ ತೀವ್ರಗೊಳ್ಳುವ ಸಾಧ್ಯತೆ ಇದೆ. ನಗರದ ಪಿ.ಬಿ. ರಸ್ತೆ, ಹಾನಗಲ್ಲ ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಕೆಲವರು ಚಿಕ್ಕಪುಟ್ಟ ಹಣ್ಣುಗಳ ಅಂಗಡಿ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದರೆ, ಇನ್ನೂ ಕೆಲವು ವ್ಯಾಪಾರಿಗಳು ದೊಡ್ಡ ದೊಡ್ಡ ಗುಡಾರ ಹಾಕಿಕೊಂಡು ಹೋಲ್ ಸೇಲ್ ವ್ಯಾಪಾರ ಮಾಡುತ್ತಿದ್ದಾರೆ. ದಿನಕ್ಕೆ ಒಂದು ಕಿಂಟಲ್‌ಗೂ ಅದಿಕ ಕಲ್ಲಂಗಡಿ ಹಣ್ಣುಗಳ ಮಾರಾಟವಾಗುತ್ತಿದೆ.
ಹಣ್ಣಿನ ವ್ಯಾಪಾರಸ್ಥರು ತಮಿಳನಾಡು, ಕೇರಳ, ಆಂಧ್ರಪ್ರದೇಶದಿಂದ ಕಲ್ಲಂಗಡಿ, ಕರಬೂಜ ಹಣ್ಣುಗಳ ಆಮದು ಮಾಡಿಕೊಳ್ಳುತ್ತಿದ್ದಾರೆ. ದಾವಣಗೆರೆ, ಹರಿಹರ, ಭದ್ರಾವತಿ ಭಾಗದಿಂದ ಬರುವ ಎಳನೀರು ಕುಂಠಿತಗೊಂಡಿದ್ದರಿಂದ ಮಲೆಬೆನ್ನೂರ ಹಾಗೂ ಕೇರಳದಿಂದ ಎಳನೀರು ತರಿಸಿಕೊಳ್ಳಲಾಗುತ್ತಿದೆ. ಬೆಳಗ್ಗೆ 9 ಗಂಟೆಯಿಂದ ಬಿಸಿಲಿನ ಝಳ ಆರಂಭಗೊಂಡು ಸಂಜೆ 5 ಗಂಟೆವರೆಗೆ ಜೋರಾಗಿರುತ್ತದೆ. ಅದರಲ್ಲೂ ಮಧ್ಯಾಹ್ನ 1 ಗಂಟೆಯಿಂದ 4 ಗಂಟೆವರೆಗೆ ಸೂರ್ಯ ದೇವನ ಶಾಖ ಹೆಚ್ಚಿರುವುದರಿಂದ ನಗರದಲ್ಲಿ ಹಣ್ಣುಗಳು, ಮಜ್ಜಿಗೆ, ವಿವಿಧ ಕಂಪನಿಯ ತಂಪು ಪಾನೀಯ, ಎಳನೀರಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.
ಹಣ್ಣಿನ ದರದಲ್ಲಿ ಏರಿಕೆ: ಸಾಮಾನ್ಯ ದಿನಗಳಲ್ಲಿ ಹಣ್ಣಿನ ಬೆಲೆ ಕಡಿಮೆ ಇದ್ದು, ಬೇಸಿಗೆ ಹೆಚ್ಚಿದಂತೆ ಹಣ್ಣಿನ ದರವೂ ಹೆಚ್ಚಾಗಿದೆ. ವ್ಯಾಪಾರಿಗಳು ಕಲ್ಲಂಗಡಿ ಹಣ್ಣುಗಳನ್ನು ಕೆಜಿಗೆ 20-25 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಪ್ಲೇಟ್ ಕಲ್ಲಂಗಡಿ ಹಣ್ಣಿನ ಬೆಲೆ 15-20ರೂ.ಗೂ ಅಧಿಕವಾಗಿದೆ. ಎಳನೀರು 30 ರೂ., ಒಂದು ಗ್ಲಾಸ್ ಕಬ್ಬಿನ ಹಾಲು 15 ರೂ., ಒಂದು ಪೈನಾಪಲ್‌ಗೆ 40-50 ರೂ., ಕರಬೂಜ ಹಣ್ಣು ಕೆಜಿಗೆ 30 ರಿಂದ 35 ರೂ. ಆಗಿದೆ.
ಪ್ರಸಕ್ತ ವರ್ಷ ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ವ್ಯಾಪಾರ ಚೆನ್ನಾಗಿ ಆಗುತ್ತಿದೆ. ಜಿಲ್ಲೆಯಲ್ಲಿ ರೈತರು ಬೆಳೆದ ಹಣ್ಣುಗಳು ಸಾಕಾಗದೆ ಹೊರರಾಜ್ಯದಿಂದ ಕಲ್ಲಂಗಡಿ, ಕರಬೂಜ ಹಣ್ಣುಗಳನ್ನು ತರಿಸಲಾಗುತ್ತಿದೆ. ವಾಹನ ವೆಚ್ಚ ಭರಿಸುವ ಸಲುವಾಗಿ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ. –
ಮಾಬುಲಿ ದೇವಗಿರಿ, ಹಣ್ಣಿನ ವ್ಯಾಪಾರಿ