ಲಕ್ಷ್ಮೇಶ್ವರ: ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಕಂಡುಬರುವ ಮಣ್ಣಿನ ಮಕ್ಕಳ ಸಾಂಪ್ರದಾಯಿಕ ಹಬ್ಬ ಮಣ್ಣೆತ್ತಿನ ಅಮವಾಸ್ಯೆ ಆಚರಣೆಗೆ ಮಣ್ಣಿನ ಎತ್ತುಗಳ ಮೂರ್ತಿಗಳು ಸಿದ್ಧಗೊಂಡಿವೆ. ಪಟ್ಟಣದ ಕುಂಬಾರರ ಮನೆಗಳಲ್ಲಿ ವಿವಿಧ ಬಣ್ಣಗಳಿಂದ ಅಲಂಕೃತಗೊಂಡ ಮಣ್ಣೆತ್ತಿನ ಮೂರ್ತಿಗಳು ದಾವಣಗೆರೆ, ಹರಿಹರ, ರಾಣೆಬೆನ್ನೂರು, ಧಾರವಾಡ, ಶಿವಬೊಗ್ಗ, ಗದಗ, ಹಾವೇರಿ, ಹುಬ್ಬಳ್ಳಿಗೆ ಮಾರಾಟಕ್ಕೆ ಹೋಗುತ್ತವೆ.
ಮಣ್ಣೆತ್ತಿನ ಹಬ್ಬಕ್ಕೆ ಎರಡು ದಿನಗಳು ಬಾಕಿ ಇರುವಂತೆ ಲಕ್ಷ್ಮೇಶ್ವರದ ಎತ್ತಿನ ಮೂರ್ತಿಗಳಿಗೆ ಭಾರೀ ಬೇಡಿಕೆ. ಮಾರಾಟಕ್ಕೆ 25 ಸಾವಿರ ಮೂರ್ತಿಗಳು ಸಿದ್ಧಗೊಂಡಿವೆ.
ಕುಂಬಾರ ಮನೆತನದ ಕಲಾವಿದರು ತಿಂಗಳ ಮೊದಲೇ ವಿಶೇಷ ಮಣ್ಣನ್ನು ಸಂಗ್ರಹಿಸಿ ಸಂಪ್ರದಾಯದಂತೆ ಹದ ಮಾಡಿ ಮೂರ್ತಿಗಳ ತಯಾರಿಕೆ ಮಾಡುತ್ತಾರೆ. ಸಂಪೂರ್ಣ ಒಣಗಿರುವ ಮೂರ್ತಿಗಳು ಕೆಳಗೆ ಬಿದ್ದರೂ ಒಡೆಯುವುದಿಲ್ಲ. ನೋಡಿದ ಕೂಡಲೇ ಕಂಗೊಳಿಸುವಂತೆ ಅಲಂಕಾರ ಮಾಡಿರುತ್ತಾರೆ. ಸುಂದರ ಮೂರ್ತಿಗಳಿಗೆ ಅಷ್ಟೇನು ಹೆಚ್ಚಲ್ಲದ ದರ. ಅಲ್ಲದೇ ವರ್ಷಪೂರ್ತಿ ಮನೆ ದೇವರ ಮನೆ, ಶೋಕೇಸ್‌ಗಳಲ್ಲಿ ಇಟ್ಟು ಪೂಜಿಸಲು ಬರುವಂತಹ ಮೂರ್ತಿಗಳಾಗಿದ್ದರಿಂದ ಎಲ್ಲಿಲ್ಲದ ಬೇಡಿಕೆ. ಇಲ್ಲಿನ ಜೋಡೆತ್ತಿನ ಸಣ್ಣ ಮೂರ್ತಿಗಳು 30, 50, ಮಧ್ಯಮ 80, 100 ರೂ.ಗಳಿಗೆ ಮಾರಿದರೆ ವಿಶೇಷವಾಗಿ ತಯಾರಿಸಿದ ಎತ್ತುಗಳಿಗೆ 500 ರಿಂದ 1000 ರೂ. ವರೆಗೂ ಮಾರಾಟವಾಗುತ್ತವೆ. ಲಕ್ಷ್ಮೇಶ್ವರ ಪಟ್ಟಣವೊಂದರಲ್ಲಿಯೇ 25 ಸಾವಿರಕ್ಕೂ ಹೆಚ್ಚು ಮೂರ್ತಿಗಳು ಸಿದ್ಧಗೊಂಡಿವೆ.
ಮಣ್ಣೆತ್ತಿನ ಅಮಾವಾಸ್ಯೆ ವಿಶೇಷತೆ
ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣೆತ್ತಿನ ಮೂರ್ತಿಗಳನ್ನು ಅದರ ಮುಂದೆ ಗ್ವಾದಲಿ ಮಾಡಿ ಜಗುಲಿ ಮೇಲಿಟ್ಟು ಕರಿಗಡುಬು, ಕಿಚಡಿ ಪ್ರಸಾದ ಮಾಡಿ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಹಬ್ಬದ ಮರುದಿನ ಕೆಲವರು ನಾಗರ ಪಂಚಮಿವರೆಗೂ ಪೂಜಿಸಿ ನಂತರ ಮೂರ್ತಿಗಳನ್ನು ತಮ್ಮ ಹೊಲಗಳಲ್ಲಿನ ಬನ್ನಿ ಮರದ ಕೆಳಗಿಟ್ಟು ಉತ್ತಮ ಫಸಲು ಬರಲಿ, ಎತ್ತುಗಳಿಗೆ ಯಾವುದೇ ಕಾಯಿಲೆ ಬಾರದಿರಲಿ ಎಂದು ಪ್ರಾರ್ಥಿಸುತ್ತಾರೆ. ಜೂ.29 ರಂದು ಬುಧವಾರ ನಾಡಿನಾದ್ಯಂತ ಮಣ್ಣೆತ್ತಿನ ಅಮವಾಸ್ಯೆ ಹಬ್ಬ ಆಚರಿಸಲಾಗುತ್ತಿದೆ. ಈಗಾಗಲೇ ಗ್ರಾಮೀಣ ಪ್ರದೇಶಗಳ ಜನರು ಮಣ್ಣಿನ ಜೋಡೆತ್ತಿನ ಎತ್ತಿನ ಮೂರ್ತಿಗಳ ಖರೀದಿಗೆ ಮುಂದಾಗಿದ್ದಾರೆ.
ಮಣ್ಣೆತ್ತಿನ ಮಹತ್ವ
ಬೆಳ್ಳನ್ನ ಎರಡೆತ್ತು ಬೆಳ್ಳಿಯ ಬಾರಕೋಲ ಹೂಡ್ಯಾನೋ ಮೂಡಣ ದಿಕ್ಕಿಗೆ, ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ, ಮಣ್ಣೆನಗೆ ಹೊನ್ನು ಮಣ್ಣೇ ಲೋಕದಲ್ಲಿ ಬೆಲೆಯಾದ್ದು, ಮಣ್ಣಿಂದಲೇ ಕಾಯ-ಮಣ್ಣೆ ಎಲ್ಲದಕ್ಕೂ ಆಧಾರ ಎಂಬ ಜಾನಪದ ಸಾಲುಗಳು ರೈತರು ವಿಶೇಷವಾಗಿ ಆಚರಿಸುವ ಮಣ್ಣೆತ್ತಿನ ಅಮವಾಸ್ಯೆ ಮಹತ್ವವನ್ನು ಸಾರುತ್ತದೆ. ಕೃಷಿಯೇ ಮೂಲಾಧಾರವಾಗಿರುವ ಉತ್ತರ ಕರ್ನಾಟಕದ ರೈತ ಸಮುದಾಯಕ್ಕೆ ಶೀಗಿ ಹುಣ್ಣಿಮೆ, ಕಾರ ಹುಣ್ಣಿಮೆ, ಎಳ್ಳು ಅಮವಾಸ್ಯೆಯಂತೆ ಮಣ್ಣೆತ್ತಿನ ಅಮವಾಸ್ಯೆಯೂ ಮಹತ್ವದ್ದಾಗಿದೆ. ಜೇಷ್ಠಮಾಸದ ಅಮವಾಸ್ಯೆಯಂದು ರೈತರು ತಮ್ಮ ಮನೆಯಲ್ಲಿ ಮಣ್ಣೆತ್ತಿನ ಮೂರ್ತಿಗಳ ಪೂಜೆ ಮಾಡುತ್ತಾರೆ.
ಮಣ್ಣೆತ್ತಿನ ಮೂರ್ತಿಗಳ ತಯಾರಿಕೆ ನಮ್ಮ ಹಿರಿಯರ ಬಳುವಳಿ ಮತ್ತು ಸಂಪ್ರದಾಯವಾಗಿದೆ ಅಲ್ಲದೇ ಮಣ್ಣಿನ ಮೂರ್ತಿಗಳು, ಗಣಪತಿ ಮೂರ್ತಿಗಳ ತಯಾರಿಕೆಯೇ ಬದುಕಿಗೆ ಆಸರೆಯಾಗಿದೆ. ಕಳೆದೆರಡು ವರ್ಷಕ್ಕಿಂತ ಈ ವರ್ಷ ಹೆಚ್ಚು ಬೇಡಿಕೆ ಬಂದಿದ್ದರಿಂದ ಈ ವರ್ಷ ಮನೆಯವರೆಲ್ಲ ಸೇರಿ 5000ಕ್ಕೂ ಹೆಚ್ಚು ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ. ಈಗಾಗಲೇ ಸಿದ್ಧಪಡಿಸಿದ ಮೂರ್ತಿಗಳಲ್ಲಿ ಅರ್ಧದಷ್ಟು ದಾವಣಗೆರೆ, ಹರಿಹರ, ಹುಬ್ಬಳ್ಳಿ, ಬದಾಮಿವರೆಗೂ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡಲಾಗಿದೆ. ಪಟ್ಟಣದ ದೂದಪೀರಾ ದರ್ಗಾ, ಸೋಮೇಶ್ವರ ದೇವಸ್ಥಾನಕ್ಕೆ ಬರುವ ದೂರದೂರಿನ ಭಕ್ತರು ಮೂರ್ತಿ ಅಂದಕ್ಕೆ ಮರುಳಾಗಿ ಕೇಳಿದ್ದಕ್ಕಿಂತ ಹತ್ತಿಪ್ಪತ್ತು ರೂ. ಹೆಚ್ಚು ಕೊಟ್ಟು ಖುಷಿಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ. –
ಸಹನರಾಜ್, ಫಕ್ಕಿರೇಶ, ಕುಮಾರ, ನಂದೀಶ, ಶಿವಲಿಂಗ, ಪ್ರಕಾಶ ಕುಂಬಾರ ಮನೆತನದವರು
ಎತ್ತುಗಳು ರೈತನ ಬದುಕಿನ ಆಧಾರ. ರೈತರಿಗೆ ತಮ್ಮ ಜೀವನಾಡಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಇತ್ತೀಚಿಗೆ ಯಂತ್ರೋಪಕರಣಗಳು ಕೃಷಿ ಕೆಲಸಕ್ಕೆ ಸಹಾಯಕವಾಗಿದ್ದರೂ ಎತ್ತುಗಳು ಅವಶ್ಯಕವಾಗಿವೆ. ಎತ್ತುಗಳಿಗೆ ಹಿಂದಿನಿಂದಲೂ ಪೂಜ್ಯನೀಯ ಸ್ಥಾನಮಾನವಿದ್ದು ಎತ್ತುಗಳು ರೈತರ ಮನೆಗೆ ಶೋಭೆ ಮತ್ತು ಮಂಗಳಕರವಾಗಿವೆ. ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ಫಲವತ್ತಾಗಿ ಬರಲಿ ಮತ್ತು ತಮ್ಮ ಎತ್ತು(ಮಿತ್ರ)ಗಳಿಗೆ ಯಾವ ತೊಂದರೆ ಬಾರದಿರಲಿ ಎನ್ನುವ ಭಾವನೆಯಿಂದ ಈ ಮಣ್ಣೆತ್ತಿನ ಅಮವಾಸ್ಯೆ ಆಚರಿಸಲಾಗುತ್ತದೆ.
-ಶಂಕರಪ್ಪ ಗೋಡಿ, ಮುದಕಪ್ಪ ಅಣ್ಣಿಗೇರಿ, ಪ್ರಗತಿಪರ ರೈತರು-ಲಕ್ಷ್ಮೇಶ್ವರ