ಬ್ರಹ್ಮಾವರ: ಕೆಂಜೂರು ಮತ್ತು ಕರ್ಜೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಬೀಸಿದ ಸುಂಟರ ಗಾಳಿಗೆ ಭಾರೀ ಹಾನಿಯಾಗಿದೆ.
ಕಕ್ಕುಂಜೆಬೈಲಿನ ಕಮಲ ಕುಲಾಲ್, ನರಸಿಂಹ ಕುಲಾಲ್, ಅಮ್ಮಣ್ಣಿ ಕುಲಾಲ್ ಅವರ ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಮಾಲಿಕೆರೆಯ ಶೇಖರ ಶೆಟ್ಟಿ, ಭಾರತಿ ಆಚಾರ್, ಶಾಲಿ ಮ್ಯಾಥ್ಯೂ ಚಾಲೋ, ಶ್ರೀನಿವಾಸ ರಾವ್ ಅವರ ಮನೆಗಳು ಜಖಂಗೊಂಡಿವೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಕರ್ಜೆ ಕುಪ್ಪಾಳದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.
ಜತೆಗೆ ಸಾವಿರಾರು ಸಂಖ್ಯೆಯಲ್ಲಿ ತೆಂಗಿನ ಮರ, ಅಡಕೆ, ರಬ್ಬರ್ ಮರಗಳು ಧರಾಶಾಯಿಯಾಗಿವೆ. ಬೃಹತ್ ಮರಗಳು ರಸ್ತೆಗೆ ಉರುಳಿ ಸ್ವಲ್ಪ ಸಮಯ ಸಂಚಾರ ಸ್ಥಗಿತಗೊಂಡಿತು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾ.ಪಂ. ಸದಸ್ಯೆ ಡಾ| ಸುನೀತಾ ಡಿ. ಶೆಟ್ಟಿ, ಪಂಚಾಯತ್ ಸದಸ್ಯರಾದ ದಯಾನಂದ ಶೆಟ್ಟಿ ಕೆಂಜೂರು, ಆದರ್ಶ ಶೆಟ್ಟಿ, ಕಂದಾಯ ಅಧಿಕಾರಿ ಲಕ್ಷ್ಮೀನಾರಾಯಣ ಭಟ್, ಗ್ರಾಮ ಲೆಕ್ಕಿಗ ಚಂದ್ರ ನಾಯ್ಕ, ಪಿಡಿಒ ಹರೀಶ್ ಮೊದಲಾದವರು ಭೇಟಿ ನೀಡಿದ್ದಾರೆ.
ಉದ್ಯಮಿಗಳಾದ ಸತೀಶ್ ಪೈ, ಕೊಕ್ಕರ್ಣೆ ಅನಂತಯ್ಯ ಶ್ಯಾನುಭಾಗ್ ಮತ್ತು ಮಕ್ಕಳು ತಾತ್ಕಾಲಿಕವಾಗಿ ಸಿಮೆಂಟ್ ಶೀಟ್‌ಗಳನ್ನು ನೀಡಿ ಸಹಕರಿಸಿದರು.