ನವದೆಹಲಿ: ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಗರಿಷ್ಠ ಸರಾಸರಿ ಉಷ್ಣಾಂಶ 35.09 ಮತ್ತು 37.78 ಡಿಗ್ರಿ ಸೆಲ್ಸಿಯಸ್ ಗೆ ತಲುಪುವ ಮೂಲಕ ಏಪ್ರಿಲ್ ತಿಂಗಳಲ್ಲಿ ಕಳೆದ 122 ವರ್ಷಗಳಲ್ಲಿಯೇ ಅತೀ ಹೆಚ್ಚಿನ ಬಿಸಿಲಿನ ತಾಪಕ್ಕೆ ಸಾಕ್ಷಿಯಾಗಿರುವುದಾಗಿ ಶನಿವಾರ (ಏಪ್ರಿಲ್ 30) ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಚೆನ್ನೈ: ಮತ್ತೊಂದು ಪ್ರಕರಣ ಸೇರ್ಪಡೆ, ಹೊತ್ತಿ ಉರಿದ ಇಲೆಕ್ಟ್ರಿಕ್ ಸ್ಕೂಟರ್
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಹವಾಮಾನ ಇಲಾಖೆಯ ಡೈರೆಕ್ಟರ್ ಜನರಲ್ ಮೃತ್ಯುಂಜಯ್ ಮೊಹಾಪಾತ್ರ ಅವರು, ವಾಯುವ್ಯ ಮತ್ತು ಮಧ್ಯ ಭಾರತದ ಭಾಗಗಳಾದ ಗುಜರಾತ್, ರಾಜಸ್ಥಾನ್, ಪಂಜಾಬ್, ದೆಹಲಿ ಮತ್ತು ಹರ್ಯಾಣದಲ್ಲಿ ಮೇ ತಿಂಗಳಿನಲ್ಲಿಯೂ ಸಾಮಾನ್ಯಕ್ಕಿಂತ ಗರಿಷ್ಠ ಪ್ರಮಾಣದ ತಾಪಮಾನ ಎದುರಿಸಬೇಕಾಗಲಿದೆ ಎಂದು ವಿವರಿಸಿದ್ದಾರೆ.
ಏಪ್ರಿಲ್ ನಲ್ಲಿ ಭಾರತದಲ್ಲಿನ ಸರಾಸರಿ ಉಷ್ಣಾಂಶವು 35.05 ಡಿಗ್ರಿಯಷ್ಟು ದಾಖಲಾಗಿದ್ದು, ಇದು ಕಳೆದ 122 ವರ್ಷಗಳಲ್ಲಿ ನಾಲ್ಕನೇ ಬಾರಿಗೆ ದಾಖಲಾದ ಅತೀ ಹೆಚ್ಚಿನ ತಾಪಮಾನವಾಗಿದೆ. 2022ರ ಮೇನಲ್ಲಿ ಕೆಲವೆಡೆ ಮಳೆಯೂ ಕೂಡಾ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ್ದಾಗಿರಲಿದೆ ಎಂದು ವರದಿ ಹೇಳಿದೆ.
ಮತ್ತೊಂದೆಡೆ ಮೇ ತಿಂಗಳಿನಲ್ಲಿ ವಾಯುವ್ಯ ಮತ್ತು ಈಶಾನ್ಯ ಭಾರತದ ಹಲವೆಡೆ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದ್ದಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.