Advertisement
ಆಗ ನಾನು 6ನೇ ತರಗತಿಯಲ್ಲಿದ್ದೆ. ತಮ್ಮ 1ನೇ ತರಗತಿಯಲ್ಲಿದ್ದ. ಆಗಿಂದಲೂ ನನಗೆ ಕೃಷ್ಣನ ವೇಷ ತೊಡುವ ಸ್ಪರ್ಧೆ ಎಂದರೆ ಭಾರೀ ಇಷ್ಟ. ಸ್ಪರ್ಧೆ ನೋಡಲು ಹೋಗುವುದಲ್ಲದೆ, ಅಲ್ಲಿ ಬಂದಿರುವ ಕೃಷ್ಣ ವೇಷಧಾರಿ ಮಕ್ಕಳನ್ನು ಮುದ್ದಿಸಿ ಬರುತ್ತಿದ್ದೆ. ನೋಡಲು ಬೆಣ್ಣೆ ಕೃಷ್ಣನಂತೆಯೇ ಇದ್ದ ತಮ್ಮನಿಗೂ ಕೃಷ್ಣನ ವೇಷ ಹಾಕೋಣ ಎಂದು ಅಮ್ಮನಿಗೆ ಅದೆಷ್ಟು ಬಾರಿ ದುಂಬಾಲು ಬಿದ್ದಿದ್ದೇನೋ. ಆದರೆ, ಅಮ್ಮ ಒಮ್ಮೆಯೂ ಆ ಕುರಿತು ಮನಸ್ಸೇ ಮಾಡಿರಲಿಲ್ಲ. ಕೊನೆಗೊಂದಿನ, ನಾನೇ ಅವನಿಗೆ ಕೃಷ್ಣನ ವೇಷ ಹಾಕುತ್ತೇನೆ ಅಂತ ತೀರ್ಮಾನಿಸಿದೆ.
Related Articles
Advertisement
ನನ್ನಮ್ಮ ಮಹಾನ್ ಲಿಪ್‌ಸ್ಟಿಕ್ ದ್ವೇಷಿ! ಲಿಪ್‌ಸ್ಟಿಕ್ ಹಚ್ಚುವ ಮಕ್ಕಳು ಜೀವನದಲ್ಲಿ ಮುಂದೆ ಬರುವುದಿಲ್ಲ ಅಂತ ಆಕೆ ಸ್ಟ್ರಾಂಗ್ ಆಗಿ ನಂಬಿದ್ದಳು. ಡ್ಯಾನ್ಸು, ಹಾಡು, ನಾಟಕ ಅಂತ ಚೂಟಿಯಾಗಿದ್ದ ನನಗೆ ಒಮ್ಮೆಯೂ ಲಿಪ್‌ಸ್ಟಿಕ್ ಹಚ್ಚುತ್ತಿರಲಿಲ್ಲ. ಆದರೂ ನನ್ನ ಬಳಿ ಲಿಪ್‌ಸ್ಟಿಕ್ ಹೇಗೆ ಬಂತು ಅಂತಾನ? ಇಂಥದ್ದೇ ಪರಿಸ್ಥಿತಿ ನನ್ನ ಕಸಿನ್ ಮನೆಯಲ್ಲಿಯೂ ಇದ್ದಿದ್ದರಿಂದ ಆಕೆ ಅವಳ ಲಿಪ್‌ಸ್ಟಿಕ್ ಅನ್ನು ನನಗೆ ಕೊಟ್ಟಿದ್ದಳು. ಅದನ್ನು ಅಮ್ಮನ ಕಣ್ಣಿಗೆ ಕಾಣದಂತೆ ಕಾಪಾಡಿದ್ದೆ.
ಹಾಂ, ತಮ್ಮ ಲಿಪ್‌ಸ್ಟಿಕ್ ಬಳಿದುಕೊಂಡು ನಿಂತಿರಲು, ನಾನು ಒಳಬರಲು, ಅಮ್ಮ ಬಾಗಿಲು ತಟ್ಟಲೂ ಸರಿ ಹೋಯ್ತು. ತಮ್ಮನನ್ನು ಗಮನಿಸದ ನಾನು ಸಡನ್ನಾಗಿ ಬಾಗಿಲು ತೆರೆದೆ. ಅಮ್ಮ, ತಮ್ಮನನ್ನು ನೋಡಿದವಳೇ ಬೆಚ್ಚಿಬಿದ್ದು, ಅವನತ್ತ ಧಾವಿಸಿ ಆತನನ್ನು ಮುಟ್ಟಿ ನೋಡಿ, ಏನು ಮಾಡಿಕೊಂಡಿ? ಏನಿದು? ಅಂತ ಕಿರುಚಿದಳು. ನೆಲದ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕತ್ತರಿ, ರಟ್ಟು ನೋಡಿ ನಾನೇ ಏನೋ ಮಾಡಿದ್ದೀನಿ ಎಂದು ನನ್ನತ್ತ ತಿರುಗಿ, ಪ್ರಶ್ನೆಗಳ ಸುರಿಮಳೆಗೈದಳು. ಅಮ್ಮನ ಗಾಬರಿ ನೋಡಿ, ತಾನೇನೋ ತಪ್ಪು ಮಾಡಿದ್ದೀನಿ ಅಂತ ತಮ್ಮನೂ ಅಳಲು ಶುರುಮಾಡಿದ. ಅಯ್ಯೋ… ಲಿಪ್‌ಸ್ಟಿಕ್ ತಿಪ್ಪೆ ಸೇರುತ್ತಲ್ಲಾ ಅಂತ ನಾನೂ ಅಳಲು ಶುರುಮಾಡಿದೆ. ಅಮ್ಮ ಕುಸಿದು ಹೋದಳು. ಕಡೆಗೂ ನಾನು ಅಳುತ್ತಲೇ “ಲಿಪ್‌ಸ್ಟಿಕ್ ಬಿಸಾಡಬೇಡಮ್ಮಾ’ ಅಂತ ಅಂಗಲಾಚಿದೆ. ಒಂದೇ ಕ್ಷಣಕ್ಕೆ ಇಲ್ಲಿ ನಡೆದಿರುವ ಎಲ್ಲಾ ಸೀನ್‌ಗಳೂ ತಿಳಿದವಳಂತೆ ಅಮ್ಮ “ಏನು ಗಾಬರಿಪಡಿಸಿದಿರೋ ನೀವು’ ಅಂತ ಗದರುತ್ತಾ, ಇಬ್ಬರಿಗೂ ಲಘುವಾಗಿ ಏಟು ಕೊಟ್ಟಳು. ಲಿಪ್‌ಸ್ಟಿಕ್ ಎಲ್ಲಿಂದ ಸಿಕ್ತು ಅಂತ ಪೂರ್ವಾಪರ ವಿಚಾರಿಸಿ, “ಕೊಡಿಲ್ಲಿ ನಾನೇ ಎತ್ತಿಡ್ತೀನಿ ‘ ಅಂತ ಅದನ್ನು ತೆಗೆದುಕೊಂಡಳು. ಕೊನೆಗೂ ಅದು ಯಾವ ತಿಪ್ಪೆಗೆ ಸೇರಿತು ಅನ್ನೋ ಸುಳಿವೂ ನನಗೆ ಸಿಗಲಿಲ್ಲ.
-ಚೇತನ ಜೆ.ಕೆ.