ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎಪ್ರಿಲ್ 4ನೇ ವಾರ ದಲ್ಲೂ ಮಳೆಯಾಗದ ಕಾರಣ ಬರದ ಛಾಯೆ ಮೂಡಿದೆ.
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬಿಸಿಲ ಧಗೆಗೆ ಕೊಡಗಿನ ಬಹುತೇಕ ಕಡೆಗಳಲ್ಲಿ ತೋಟಗಾರಿಕೆ ಬೆಳೆಗಳು ಒಣಗಿ ಹೋಗುತ್ತಿವೆ. ಜಲಮೂಲಗಳು ಬತ್ತಿ ಹೋಗಿವೆ. ಮಕ್ಕಳಂತೆ ಸಾಕಿ ಸಲಹಿದ ಕಾಫಿ ಗಿಡಗಳು, ಕರಿಮೆಣಸು ಬಳ್ಳಿಗಳು ಕಣ್ಣು ಮುಂದೆಯೇ ಒಣಗುತ್ತಿದ್ದು ಬೆಳೆಗಾರರು ಅಸಹಾಯಕರಾಗಿ ಕೈಕಟ್ಟಿ ಕೂರಬೇಕಾದ ಸ್ಥಿತಿ ತಲೆದೋರಿದೆ. ತೋಟಕ್ಕೆ ನೀರು ಹಾಯಿಸಲು ಇರುವ ಕೆರೆಗಳು, ನದಿಗಳಲ್ಲೂ ನೀರು ಬತ್ತಿದ್ದು, ಬೆಳೆಗಾರರು ಆಕಾಶದ ಕಡೆ ಮುಖ ಮಾಡಿ ಮಳೆಯನ್ನು ಎದುರು ನೋಡುತ್ತಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಪೂಕೋಳ, ಪರಕಟಗೇರಿ, ನೆಮ್ಮಲೆ, ಕುರ್ಚಿ, ಬೀರುಗ, ಟಿ. ಶೆಟ್ಟಿಗೇರಿ, ಹರಿಹರ ಬಾಡಗರಗೇರಿ, ತೆರಾಲು, ಬಿರುನಾಣಿ, ಶ್ರೀಮಂಗಲ, ನಾಲ್ಕೇರಿ, ಮಂಚಲ್ಲಿ, ಪೂಜೆಕಲ್, ಕುಟ್ಟ, ಹೈಸೊಡೂÉರು, ಬೆಳ್ಳೂರು, ಕುಮಟೂರು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕಾಫಿ, ಕರಿಮೆಣಸು, ಅಡಿಕೆ ಸೇರಿದಂತೆ ಇತರ ಬೆಳೆಗಳು ಬಿಸಿಲಿನ ಬೇಗೆಗೆ ಬೆಂದು ಕರಕಲಾಗಿದ್ದು, ಬೆಳೆಗಾರರು ಕಂಗಾಲಾಗುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಅಧಿಕ ಮಳೆಯಾಗುವಂತಹ ಪ್ರದೇಶಗಳಲ್ಲೂ ಸಹ ಈ ವರ್ಷ ವಾಡಿಕೆಯ ಮಳೆಯಾಗದೇ ಇರುವುದರಿಂದ ಬಿಸಿಲಿನ ತಾಪದಲ್ಲಿ ಏರಿಕೆಯಾಗಿದ್ದು, ಜಲಮೂಲಗಳು ಒಣಗಿವೆ. ಪೊನ್ನಂಪೇಟೆ ತಾಲೂಕಿನ ಹಾತೂರು, ಕುಂದಾ, ಈಚೂರು, ಬಿ. ಶೆಟ್ಟಿಗೇರಿ, ಹಳ್ಳಿಗಟ್ಟು, ಬಿ. ಬಾಡಗ, ಕುಟ್ಟಂದಿ, ಕೊಂಗಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಬಿಸಿಲಿನ ಝಳಕ್ಕೆ ಕಾಫಿಗಿಡಗಳು ಸುಟ್ಟು ಕರಕ ಲಾಗುತ್ತಿರುವ ಬೆನ್ನಲ್ಲೇ ಇದೀಗ ಅಧಿಕ ಮಳೆ ಸುರಿಯುವ ಶ್ರೀಮಂಗಲ ಹೋಬಳಿಯಲ್ಲೂ ಕಾಫಿಗಿಡಗಳು ಬೆಂದು ಹೋಗುತ್ತಿರು ವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.
ಪ್ರಸ್ತುತ ಕಾಫಿಗೆ ಉತ್ತಮ ಧಾರಣೆ ಯಿದೆ. ಮುರುಟಿ ಹೋಗುತ್ತಿರುವ ಕಾಫಿ ಗಿಡಗಳಿಂದ ಮುಂದಿನ ವರ್ಷದ ಫಸಲನ್ನು ನಿರೀಕ್ಷಿಸುವುದು ಅಸಾಧ್ಯವಾಗಿದೆ. ಹೊಸ ಗಿಡಗಳನ್ನು ನೆಟ್ಟು ಉತ್ತಮ ಫಸಲು ಪಡೆಯಲು 20 ವರ್ಷಗಳು ತಗಲುತ್ತದೆ.