Advertisement

ಕೆನಡಾಗೆ ಟ್ರಕ್ಕರ್‌ಗಳ ಬಿಸಿ ; ಪ್ರತಿಭಟನೆ ಮೂಲಭೂತ ಹಕ್ಕಲ್ಲವೇ?

12:51 AM Feb 19, 2022 | Team Udayavani |

2020ರಲ್ಲಿ  ಭಾರತದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದಿಲ್ಲಿ ಗಡಿಯಲ್ಲಿ ಹೆದ್ದಾರಿ ತಡೆ ಮಾಡಿ, ಭಾರೀ ಪ್ರತಿಭಟನೆ ನಡೆಸುತ್ತಿದ್ದರು. ಇಲ್ಲಿ ಹೆಚ್ಚಾಗಿ ಸೇರಿದ್ದು ಪಂಜಾಬ್‌ ಮತ್ತು ಹರಿಯಾಣದ ರೈತರು. ಆಗ ದೂರದೂರಿನಲ್ಲಿ ಕುಳಿತಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೋ, ರೈತರ ಪ್ರತಿಭಟನೆಗೆ ಬೆಂಬಲ ನೀಡಿ, ಪ್ರತಿಭಟನೆ ನಡೆಸುತ್ತಿರುವ ರೈತರ ಕುಟುಂಬಗಳ ಬಗ್ಗೆ ನನಗೆ ಕಳವಳವಿದೆ ಎಂದು ಹೇಳಿದ್ದರು. ಆದರೆ ಈಗ ಟ್ರಾಡೋಗೇ ಕೆನಡಾದಲ್ಲಿ ಪ್ರತಿಭಟನೆಯ ಬಿಸಿ ತಾಕುತ್ತಿದೆ. ಕಡ್ಡಾಯ ಲಸಿಕೆ ವಿರೋಧಿಸಿ ಟ್ರಕ್ಕರ್‌ಗಳು ಕೆನಡಾ-ಅಮೆರಿಕ ಗಡಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತಿದ್ದು, ಇದನ್ನು ತಡೆಯಲು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನೂ ಘೋಷಿಸಲಾಗಿದೆ.

Advertisement

ಲಾರಿ ಚಾಲಕರ ಹೆದ್ದಾರಿ ತಡೆ
ಜ.28ರಿಂದಲೂ ಕೆನಡಾದಲ್ಲಿನ ಟ್ರಕ್‌ ಚಾಲಕರು ಸರಕಾರದ ಕಡ್ಡಾಯ ಲಸಿಕೆ ಮತ್ತು 14 ದಿನಗಳ ಕ್ವಾರಂಟೈನ್‌ ನಿಯಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಫೆಬ್ರವರಿ ಆರಂಭದಲ್ಲಿ ಈ ಪ್ರತಿಭಟನೆಗೆ ಫ್ರೀಡಂ ಕನ್ವೆ ಎಂಬ ಹೆಸರನ್ನು ಇಡಲಾಗಿದೆ. ಈ ಪ್ರತಿಭಟನೆಯಿಂದಾಗಿ ಕೆನಡಾ ಮತ್ತು ಅಮೆರಿಕ ಸಂಪರ್ಕಿಸುವ ಗಡಿಯೇ ಬಂದ್‌ ಆಗಿದೆ. ಎರಡೂ ದೇಶಗಳಿಗೆ ಆಹಾರ, ಆಟೋಮೊಬೈಲ್‌ ಸೇರಿದಂತೆ ಬಹಳಷ್ಟು ವಲಯಗಳಿಗೆ ಪೂರೈಕೆ ಇಲ್ಲದೇ ಹಾನಿಯಾಗಿದೆ.

ಒಟ್ಟಾವೋ ದಿಗ್ಬಂಧನ
ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೋಗೆ ಬಿಸಿ ಮುಟ್ಟಿದ್ದು ರಾಜಧಾನಿ ಒಟ್ಟಾವೋವನ್ನು ಪ್ರತಿಭಟನಕಾರರು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಾಗ. ಹೌದು, ಜ.28ರಂದೇ ರಾಜಧಾನಿಗೆ ತಮ್ಮ ಟ್ರಕ್‌ಗಳ ಮೂಲಕ ನುಗ್ಗಿದ್ದ ಪ್ರತಿಭಟನಕಾರರು ಇಡೀ ನಗರದ ಸಂಚಾರ ವ್ಯವಸ್ಥೆಯನ್ನೇ ಅಸ್ತವ್ಯಸ್ತ ಮಾಡಿದ್ದಾರೆ. ಈ ಪ್ರತಿಭಟನೆಗೆ ಹೆದರಿದ್ದ ಜಸ್ಟಿನ್‌ ಟ್ರಾಡೋ, ಪ್ರಧಾನಿ ನಿವಾಸದಿಂದ ಪರಾರಿಯಾಗಿದ್ದರು ಎಂಬ ಮಾಹಿತಿ ಬಂದಿತ್ತು. ಆದರೆ ತಾವು ಸೇರಿದಂತೆ ಕುಟುಂಬದ ಎಲ್ಲರಿಗೂ ಕೊರೊನಾ ಬಂದಿದ್ದರಿಂದ ಐಸೋಲೇಟ್‌ ಆಗಿದ್ದೆವು ಎಂದು ಟ್ರಾಡೋ ಸ್ಪಷ್ಟನೆ ನೀಡಿದ್ದರು.

ಪ್ರತಿಭಟನೆ ನಿಲ್ಲಿಸಲು ಯಾವ ಕ್ರಮ?
ಟ್ರಕ್‌ ಚಾಲಕರ ಬ್ಲ್ಯಾಕೇಡ್‌ನಿಂದಾಗಿ ಅಮೆರಿಕ-ಕೆನಡಾ ಗಡಿ ಮುಚ್ಚಿರುವುದಷ್ಟೇ ಅಲ್ಲ, ಒಟ್ಟಾವೋ ನಗರವೂ ಬಂಧಿಯಾಗಿದೆ. ಹೀಗಾಗಿ, ಏನಾದರೂ ಮಾಡಿ ಈ ಪ್ರತಿಭಟನೆ ನಿಲ್ಲಿಸಲೇಬೇಕಾಗಿದೆ. ಇದಕ್ಕಾಗಿಯೇ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ರೀತಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ತುರ್ತು ಪರಿಸ್ಥಿತಿ ವೇಳೆ, ಯಾರನ್ನು ಬೇಕಾದರೂ ಹೇಳದೇ ಕೇಳದೆ ಬೇರೆಡೆಗೆ ಸ್ಥಳಾಂತರಿಸಬಹುದು, ಗುಂಪು ಸೇರದಂತೆ ತಡೆಯಬಹುದು, ಜತೆಗೆ ಪ್ರಯಾಣಿಸದಂತೆ ನಿರ್ಬಂಧ ಹೇರಬಹುದು. ಹೀಗಾಗಿಯೇ ಜಸ್ಟಿನ್‌ ಟ್ರಾಡೋ ಈ ಹಾದಿ ತುಳಿದಿದ್ದಾರೆ.  ಅಷ್ಟೇ ಅಲ್ಲ, ಪ್ರತಿಭಟನೆ ನಡೆಸುತ್ತಿರುವವರಿಗೆ ಪೆಟ್ರೋಲ್‌, ಡೀಸೆಲ್‌ ಸಿಗದಂತೆ ಮಾಡಲಾಗುತ್ತಿದೆ. ಇವರಿಗೆ ಆಹಾರವೂ ಸಿಗದಂತೆ ಮಾಡಲಾಗಿದೆ. ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಜಗತ್ತಿನ ಬಹುತೇಕ ಕಡೆಗಳಲ್ಲಿ ಕ್ಲೌಡ್ ಫ‌ಂಡಿಂಗ್‌ ಮೂಲಕ ಹಣ ನೀಡುತ್ತಿದ್ದರು. ಒಂದು ಕ್ಲೌಡ್ ಫ‌ಂಡ್‌ ವೇದಿಕೆಯನ್ನು ಕೋರ್ಟ್‌ ಸೂಚನೆ ಮೇರೆಗೆ ಸ್ಥಗಿತ ಗೊಳಿಸಲಾಗಿತ್ತು. ಈಗ ಇನ್ನೊಂದು ಕ್ಲೌಡ್ ಫ‌ಂಡ್‌ ಬೆಂಬಲ ನೀಡಿದೆ. ಇದು ಕೋರ್ಟ್‌ ಆದೇಶದ ಹೊರತಾಗಿಯೂ ಪ್ರತಿಭಟನನಿರತರಿಗೆ ಹಣದ ವ್ಯವಸ್ಥೆ ಮಾಡುತ್ತಿದೆ.

ಪ್ರತಿಭಟನಕಾರರ ಜತೆ ಮಾತುಕತೆ ನಡೆಸಲಾಗಿಲ್ಲ
ಜ.28ರಿಂದ ಈ ಪ್ರತಿಭಟನೆ ನಡೆದಿದ್ದರೂ, ಇದುವರೆಗೆ ಕೆನಡಾ ಸರಕಾರ‌, ಪ್ರತಿಭಟನ ನಿರತರ ಜತೆ ಮಾತುಕತೆ ಯನ್ನೇ ನಡೆಸಲಿಲ್ಲ. ಆರಂಭದಿಂದಲೂ ಈ ಪ್ರತಿಭಟನಕಾರರನ್ನು ಒಂದಿಲ್ಲೊಂದು ವಿಧಾನದ ಮೂಲಕ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ಪ್ರತಿಭಟನಕಾರರ ಗುಂಪು ಸಣ್ಣದು, ಇವರಿಗೆ ರಾಷ್ಟ್ರದ್ರೋಹಿಗಳು ಸಹಕಾರ ನೀಡಿದ್ದಾರೆ. ಅಲ್ಲದೇ ನಾಜಿ ಸಿಂಪಥೈಜರ್‌ಗಳು ಇದ್ದಾರೆ. ಹೀಗಾಗಿಯೇ ನಾವು ಮಾತುಕತೆ ನಡೆಸಲ್ಲ ಎಂದು ಕೆನಡಾ ಸರಕಾರ‌ ಹೇಳುತ್ತಿದೆ.

Advertisement

ಕೆನಡಾ Vs ಭಾರತ
2020ರಲ್ಲಿ ಭಾರತದಲ್ಲಿನ ರೈತರ ಪ್ರತಿಭಟನೆ ವೇಳೆ ಜಸ್ಟಿನ್‌ ಟ್ರಾಡೋ, ಕೆನಡಾ ಎಂದಿಗೂ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡುತ್ತದೆ ಎಂದಿದ್ದರು. ಆದರೆ ಈಗಲೂ ಲಾರಿ ಚಾಲಕರು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಡೇ ಪಕ್ಷ ಅವರ ಅಹವಾಲು ಏನು ಎಂಬುದನ್ನಾದರೂ ಕೇಳಬೇಕಾಗಿತ್ತು. ಈ ವಿಚಾರದಲ್ಲಿ ಕೆನಡಾ, ಭಾರತದ ಮಾರ್ಗ ಅನುಸರಿಸುವುದು ಉತ್ತಮ ಎಂದು ವಿಶ್ಲೇಷಕರು ಹೇಳುತ್ತಾರೆ. ಅಲ್ಲದೆ ಪ್ರತಿಯೊಂದು ಪ್ರತಿಭಟನೆಯೂ ಸಾಂವಿಧಾನಿಕವೇ. ಈ ವಿಚಾರದಲ್ಲಿ ಸರಕಾರಗಳು ಹೇಗೆ ವರ್ತಿಸುತ್ತವೆ ಎಂಬುದು ಮುಖ್ಯ. ಭಾರತದಲ್ಲಿನ ರೈತರ ಪ್ರತಿಭಟನೆ ವೇಳೆಯೂ ಖಲಿಸ್ಥಾನ್‌ ಗುಂಪು ಸಹಕಾರ ನೀಡಿದ ಆರೋಪವೂ ಇತ್ತು. ಜತೆಗೆ ಕೆನಡಾದಲ್ಲಿನ ಖಲಿಸ್ಥಾನ್‌ ಬೆಂಬಲಿಗರೂ ಇದಕ್ಕೆ ಸಹಕಾರ ನೀಡಿದ್ದಾರೆ. ಪ್ರತಿ ಭಟನೆ ವೇಳೆ, ವಿದೇಶಗಳಿಂದ ಅಪಾರ ಪ್ರಮಾಣದ ಹಣವೂ ಹರಿದು ಬಂದಿತ್ತು ಎಂಬ ಆರೋಪಗಳೂ ಇದ್ದವು. ಇದೆಲ್ಲವನ್ನು ಮೀರಿ ಕೇಂದ್ರ ಸರಕಾರ‌, ಪ್ರತಿಭಟನನಿರತರ ಜತೆ ಸಾಲು ಸಾಲು ಸಭೆ ನಡೆಸಿತು. ಕಡೆಗೆ ಅವರು ಕೇಳದೇ ಹೋದಾಗ, ಮೂರು ಕಾಯ್ದೆಗಳನ್ನೇ ವಾಪಸ್‌ ತೆಗೆದುಕೊಂಡಿತು. ಇದು ನಿಜವಾದ ಪ್ರಜಾಪ್ರಭುತ್ವ ಎಂದು ಹೇಳುತ್ತಿದ್ದಾರೆ. ಹೀಗಾಗಿ ಕೆನಡಾ ಸರಕಾರ ಪ್ರತಿಭಟನ ನಿರತರ ಜತೆ ಸಭೆ ನಡೆಸಿ ಒಂದು ತಾರ್ಕಿಕ ಅಂತ್ಯಕ್ಕೆ ಬರಬೇಕು ಎಂದು ಆಗ್ರಹಿಸುತ್ತಿದ್ದಾರೆ. ಜತೆಗೆ ಆಗ ಭಾರತದ ಪ್ರತಿಭಟನೆ ವೇಳೆಯಲ್ಲಿ ಕೇಂದ್ರ ಸರಕಾರವನ್ನು ಟೀಕಿಸಿದ್ದ ಅಮೆರಿಕ ಪತ್ರಿಕೆಗಳ ಬದಲಾದ ವರ್ತನೆ ಬಗ್ಗೆಯೂ ಭಾರತದ ಕೆಲವು ರಾಜಕೀಯ ವಿಶ್ಲೇಷಕರು ಟೀಕಿಸಿದ್ದಾರೆ.

ಏನಿದು ಎಮರ್ಜೆನ್ಸಿ ಆ್ಯಕ್ಟ್?
ಕೆನಡಾ-ಅಮೆರಿಕ  ಗಡಿಯನ್ನು ಬಂದ್‌ ಮಾಡಿರುವ ಪ್ರತಿಭಟನಕಾರರನ್ನು ಅಲ್ಲಿಂದ ಎಬ್ಬಿಸುವ ಸಲುವಾಗಿ ಪೊಲೀಸರಿಗೆ ಅಧಿಕಾರ ನೀಡಲು ದೇಶಾದ್ಯಂತ ತುರ್ತು ಪರಿಸ್ಥಿತಿ ಜಾರಿ ಮಾಡಲಾಗಿದೆ. ಇದನ್ನು ಘೋಷಿಸಿದ ಏಳು ದಿನಗಳಲ್ಲಿ ಪಾರ್ಲಿಮೆಂಟ್‌ನ ಒಪ್ಪಿಗೆ ಪಡೆಯಬೇಕು. ಅಲ್ಲದೆ 30 ದಿನಗಳ ಕಾಲ ಈ ಎಮರ್ಜೆನ್ಸಿ ಜಾರಿಯಲ್ಲಿ ಇರುತ್ತದೆ. ಜತೆಗೆ ಸರಕಾರಕ್ಕೆ ಎಲ್ಲ ರೀತಿಯ ಅಧಿಕಾರಿಗಳೂ ಇರುತ್ತವೆ. ವಿಶೇಷವೆಂದರೆ, ಕೆನಡಾದಲ್ಲಿ ಈ ಹಿಂದೆ ಅಂದರೆ 1988ರಲ್ಲಿ ಜಸ್ಟಿನ್‌ ಟ್ರಾಡೋ ಅವರ ತಂದೆ ಪಿಯರಿ ಎಲಿಯಟ್‌ ಟ್ರಾಡೋ ಅವರು ಪ್ರಧಾನಿಯಾಗಿದ್ದ ವೇಳೆ ಎಮರ್ಜೆನ್ಸಿ ಆ್ಯಕ್ಟ್ ಜಾರಿಗೆ ತರಲಾಗಿತ್ತು.

ಟ್ರಕ್‌ ಚಾಲಕರ ಬೇಡಿಕೆ ಏನು?
ಈಗಾಗಲೇ ಕೆನಡಾದಲ್ಲಿನ ಶೇ.90ರಷ್ಟು ಟ್ರಕ್‌ ಚಾಲಕರು ಎರಡು ಡೋಸ್‌ ಲಸಿಕೆ ಪಡೆದಿದ್ದಾರೆ. ಹಾಗೆಯೇ ಶೇ.40 ಮಂದಿ ಬೂಸ್ಟರ್‌ ಡೋಸ್‌ ಅನ್ನೂ ತೆಗೆದು ಕೊಂಡಿದ್ದಾರೆ. ಇನ್ನು ಶೇ.10 ಮಂದಿ ಮಾತ್ರ ಲಸಿಕೆ ಪಡೆದಿಲ್ಲ. ಆದರೆ ಅಮೆರಿಕದಿಂದ ಕೆನಡಾಗೆ ಬರುವ ಟ್ರಕ್‌ ಚಾಲಕರು ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆದಿರಬೇಕು, ಇಲ್ಲದಿದ್ದರೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್‌ಗೆ ಹೋಗಬೇಕು ಎಂಬ ನಿಯಮ ಮಾಡಲಾಗಿದೆ. ಅಮೆರಿಕವೂ ಇದೇ ರೀತಿಯ ನಿಯಮ ರೂಪಿಸಿದೆ. ಹೀಗಾಗಿ ಕೊರೊನಾ ಸಂಬಂಧಿತ ಎಲ್ಲ ನಿಯಮಗಳನ್ನು ವಾಪಸ್‌ ತೆಗೆದುಕೊಳ್ಳಬೇಕು. ಜತೆಗೆ ಪ್ರಧಾನಿ ಜಸ್ಟಿನ್‌ ಟ್ರಾಡೋ ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next