ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶವನ್ನು ತಾಲಿಬಾನ್ ನಿಷೇಧಿಸಿದ ಬೆನ್ನಲ್ಲೇ ವಿದ್ಯಾರ್ಥಿನಿಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಅಫ್ಘಾನಿಸ್ತಾನದ ವಿಶ್ವವಿದ್ಯಾಲಯ ಒಂದರಲ್ಲಿ ನಿಷೇಧದ ಬಗ್ಗೆ ಮಾಹಿತಿ ತಿಳಿದ ವಿದ್ಯಾರ್ಥಿನಿಯರು ತರಗತಿಯಲ್ಲೇ ಅಳುತ್ತಾ ತಾಲಿಬಾನ್ ದುರಾಡಳಿತದ ಬಗ್ಗೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ವೈರಲ್ ಆಗಿದೆ.
ಇನ್ನೊಂದೆಡೆ, ಕಾಬೂಲ್‌ನಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಗುಂಪೊಂದು, ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶ ನಿಷೇಧಿಸಿದ ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸಿದೆ.
ತಾಲಿಬಾನ್‌ನ ಈ ಕ್ರಮವನ್ನು ಭಾರತ, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ , ಜರ್ಮನಿ, ಜಪಾನ್, ಬ್ರಿಟನ್, ಟರ್ಕಿ, ಸೌದಿ ಅರೇಬಿಯಾ ಸೇರಿದಂತೆ ಅನೇಕ ದೇಶಗಳು ಖಂಡಿಸಿವೆ.
ಇದೇ ವೇಳೆ ಅಫ್ಘಾನಿಸ್ತಾನದ ಹಲವು ಕ್ರಿಕೆಟಿಗರು ಹಾಗೂ ಕ್ರೀಡಾಪಟುಗಳು ತಾಲಿಬಾನ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. “ಉನ್ನತ ಶಿಕ್ಷಣಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸಿದ ತಾಲಿಬಾನ್ ಕ್ರಮ ದೊಡ್ಡ ದುರಂತವಾಗಿದೆ. ಅಫಘಾನಿಸ್ತಾನದಲ್ಲಿ ಮಹಿಳೆಯರು ಸಮಾಜದ ಭಾಗವಾಗಿಲ್ಲ,’ ಎಂದು ಆಘ್ಘನ್ ನ ವ್ಹೀಲ್‌ಚೇರ್ ಬಾಸ್ಕೆಟ್‌ಬಾಲ್ ಮಹಿಳೆಯರ ತಂಡದ ಮಾಜಿ ನಾಯಕಿ ನಿಲೋಫರ್ ಬಯಾತ್ ಟೀಕಿಸಿದ್ದಾರೆ.
“ವಿಶ್ವವಿದ್ಯಾಲಯ ಪ್ರವೇಶಕ್ಕೆ ಮಹಿಳೆಯರಿಗೆ ನಿಷೇಧಿಸಿದ ತಾಲಿಬಾನ್‌ನ ಕ್ರಮವನ್ನು ಭಾರತ ಖಂಡಿಸುತ್ತದೆ. ಆಘ್ಘನ್ ನಲ್ಲಿ ಮಹಿಳೆಯರ ಶಿಕ್ಷಣಕ್ಕೆ ಭಾರತ ಸದಾ ಬೆಂಬಲ ನೀಡುತ್ತಾ ಬಂದಿದೆ,’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಬಾಲಕಿಯರು ಮಾಧ್ಯಮಿಕ ಶಾಲೆಗಳಿಗೆ ಹೋಗುವುದನ್ನು ಮಾರ್ಚ್‌ನಲ್ಲಿ ತಾಲಿಬಾನ್ ನಿಷೇಧಿಸಿತ್ತು.