Advertisement

4ರ ಬಾಲಕಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

12:15 PM Nov 25, 2017 | |

ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ವರ್ಷದ ಬಾಲಕನಿಗೆ ತುಂಬ ವಿರಳವಾದ ಹೃದಯದ Ross-konno ಎಂಬ ಹೆಸರಿನ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಎಸ್‌ ಡಿಎಂ ನಾರಾಯಣ ಹಾರ್ಟ್‌ ಸೆಂಟರ್‌ ಯಶಸ್ವಿಯಾಗಿದೆ. 

Advertisement

ಹಿರಿಯ ಹೃದ್ರೋಗ ಚಿಕಿತ್ಸಾ ತಜ್ಞ ಡಾ| ಶಿವಪ್ರಸಾದ ಮುಕ್ಕಣ್ಣವರ ನೇತೃತ್ವದ ವೈದ್ಯರ ತಂಡವು ಅ.25ರಂದು ಸತತ ಐದು ತಾಸುಗಳ ನಿರಂತರ ಶ್ರಮದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದು, ಧಾರವಾಡ ತಾಲೂಕಿನ ಅಂಬ್ಲಿಕೊಪ್ಪದ ನಾಲ್ಕು ವರ್ಷದ ಬಾಲಕ ವಿನಾಯಕ ಮಾನೆ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾನೆ.

ಕೇಂದ್ರ ಸರಕಾರದ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ ಅಡಿಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿ ಬಾಲಕನಿಗೆ ಹೊಸ ಬದುಕು ನೀಡಲಾಗಿದೆ. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ| ಶಿವಪ್ರಸಾದ ಮುಕ್ಕಣ್ಣವರ, ಕಂಜನೈಟಲ್‌ಅಯೊರ್ಟಿಕ್‌ ವಾಲ್ವ್ ಸ್ಟಿನೊಸಿಸ್‌ ಹೆಸರಿನ ಅಪರೂಪದ ಹೃದಯ ರೋಗ ಸಮಸ್ಯೆಯಿಂದ ಬಾಲಕ ವಿನಾಯಕ ಬಳಲುತ್ತಿದ್ದ. 

ಅಯೊರ್ಟಿಕ್‌ ವಾಲ್ವ್ ಹೃದಯದ ಎಡಭಾಗ ಮತ್ತು ಮುಖ್ಯವಾದ ರಕ್ತನಾಳದ ನಡುವೆ ಇರುವ ಪ್ರಮುಖವಾದ ಹೃದಯದ ಕವಾಟ ಆಗಿದೆ. ಈ ಪ್ರಕರಣದಲ್ಲಿ ಹೃದಯ ಕವಾಟ ಪೂರ್ಣವಾಗಿ ವಿಫಲವಾಗಿ ಹೃದಯದ ಕಾರ್ಯ ವೈಖರಿ ಮೇಲೆ ಪರಿಣಾಮ ಬೀರಿತ್ತು. ಅಲ್ಲದೇ ಹೃದಯದ ಎಡಭಾಗಕ್ಕೆ ರಕ್ತವನ್ನು ಪಂಪ್‌ ಮಾಡುವ ಪ್ರಕ್ರಿಯೆ ಪೂರ್ಣ ನಿಂತು ಹೋಗಿತ್ತು ಎಂದರು. 

ಈ ಸಂದರ್ಭದಲ್ಲಿ ಮಗುವಿನ ಹೃದಯ ಕಾರ್ಯದ ಮೇಲೆ ಪರಿಣಾಮ ಬೀರಿದ ಕಾರಣ ಮಗುವಿನ ಕವಾಟಕ್ಕೆ ಪೆಟ್ಟಾಗಿದ್ದು, ಸೋರಿಕೆ ಉಂಟಾಗುತ್ತಿತ್ತು. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಕವಾಟವನ್ನು ಯಾಂತ್ರಿಕವಾಗಿ ತೆರೆಯುತ್ತೇವೆ. ಈ ಪ್ರಕರಣದಲ್ಲಿ ಕವಾಟ ಬಹುತೇಕ ಪೆಟ್ಟಾಗಿರುವ ಕಾರಣ ವೈದ್ಯಕೀಯ ಚಿಕಿತ್ಸೆಯೇತರ ಯಾವುದೇ ಕ್ರಮಕ್ಕೆ ಸೂಕ್ತವಾಗಿರಲಿಲ್ಲ. 

Advertisement

ತೆರೆದ ಹೃದಯ ಶಸ್ತ್ರಚಿಕಿತ್ಸೆಯೇ ನಮಗಿದ್ದ ಆಯ್ಕೆ ಆಗಿತ್ತು ಎಂದರು. ಸಾಮಾನ್ಯವಾಗಿ ಹೃದಯದ ಕವಾಟ ಕೆಟ್ಟಾಗ ವಾಲ್ವ್ ಸರಿಪಡಿಸಲಾಗುತ್ತದೆ. ಅಥವಾ ಯಾಂತ್ರಿಕವಾದ ಕೃತಕ ಕವಾಟವನ್ನು ಅಳವಡಿಸಲಾಗುತ್ತದೆ. ಈ ಮಗುವಿನ ಸ್ಥಿತಿಯಲ್ಲಿ ಕೃತಕ ಕವಾಟ ಅಳವಡಿಸುವ ಪ್ರಶ್ನೆಯೇ ಇರಲಿಲ್ಲ. ಕಾರಣ ಇದು ಸಣ್ಣ ಗಾತ್ರದ್ದಾಗಿದ್ದು, ಲಭ್ಯತೆಯೂ ಇರಲಿಲ್ಲ.

ಲಭ್ಯವಿರುವ ಅತಿ ಸಣ್ಣದಾದ ಮೆಕಾನಿಕಲ್‌ ವಾಲ್ವ್ 17 ಎಂಎಂ ಅಳತೆಯದ್ದಾಗಿದ್ದು,  ಇದು ವಯಸ್ಕರಲ್ಲಿನ ದೊಡ್ಡದಾದ ಹೃದಯಕ್ಕೆ ಬಳಕೆ ಮಾಡಲಾಗುತ್ತದೆ. ಹೀಗಾಗಿ ಅಪರೂಪದ Ross-konno ಪ್ರಕ್ರಿಯೆಯನ್ನೇ ಆಯ್ಕೆ ಮಾಡಿಕೊಳ್ಳಬೇಕಾಯಿತು ಎಂದರು. 

ಬಾಲಕನ ಬಲಭಾಗದಲ್ಲಿ ಪಲ್ಮನರಿ ವಾಲ್ವ್ ಇದ್ದು, ಇದನ್ನು ಎಡ ಭಾಗದ ಅಯೊರ್ಟಿಕ್‌ ಸ್ಥಾನಕ್ಕೆ ಬದಲಾಯಿಸಲಾಯಿತು. ಬಲಭಾಗದ ಕವಾಟವನ್ನು ರೋಗಿಯ ಬಯೋಲಾಜಿಕಲ್‌ ಟಿಷೂ ಬಳಕೆ ಮಾಡಿ ಮರುರೂಪಿಸಿ ಅಳವಡಿಸಲಾಯಿತು. Ross-konno ಚಿಕಿತ್ಸೆಯ ಅನುಕೂಲ ಏನೆಂದರೆ ಪಲ್ಮನರಿ ವಾಲ್ವ್ ಸಾಮಾನ್ಯವಾಗಿ ಕೆಲಸ ಮಾಡಲಿದ್ದು, ವಯಸ್ಸಿಗೆ ಅನುಗುಣವಾಗಿ ಬೆಳೆಯಲಿದೆ.

ಹೀಗಾಗಿ ಪುನರಾವರ್ತಿತ ಪ್ರಕ್ರಿಯೆ ಸಾಧ್ಯತೆಗಳು ಕಡಿಮೆ. ಮಕ್ಕಳು ಬೆಳೆದಂತೆ ಅದು ಬೆಳೆಯಲಿದ್ದು, ಮಗುವಿಗೆ ಯಾವುದೇ ತೊಂದರೆ ಆಗದು ಎಂದರು. ಅರವಳಿಕೆ ತಜ್ಞ ಡಾ|ಗಣೇಶ ನಾಯಕ್‌, ಅಜಯ ಹುನಮನಿ, ಮಂಜುನಾಥ ಮಾನೆ, ರೇಣುಕಾ ಮಾನೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next