ರಾಮನಗರ: ಜೆಡಿಎಸ್ ನಾಯಕ,ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಕುರಿತು ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅನುಮಾನ ವ್ಯಕ್ತಪಡಿಸಿ ಹೇಳಿಕೆ ನೀಡಿರುವ ಕುರಿತು ಬಿಜೆಪಿ ಅಭ್ಯರ್ಥಿ, ಪ್ರಖ್ಯಾತ ವೈದ್ಯ ಡಾ.ಸಿ.ಎನ್.ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು,’ಸಾಮಾನ್ಯ ಡಾಕ್ಟರ್ ಗಳಿಗೂ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಅಷ್ಟು ಮಾಹಿತಿ ಇರುವುದಿಲ್ಲ.ಇನ್ನು ಇದರ ಬಗ್ಗೆ ಸಾಮಾನ್ಯ ಜನಕ್ಕೆ ಏನು ಗೊತ್ತಾಗುತ್ತದೆ’ ಎಂದು ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಆಪರೇಷನ್ ಮಾಡುವಾಗ ನಾನೂ ಇದ್ದೆ. ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಲು ಒಟ್ಟು 13 ವರ್ಷ ಓದಬೇಕಾಗುತ್ತದೆ. ಕುಮಾರಸ್ವಾಮಿ ಅವರಿಗೆ ಕಾಲಿನ ರಕ್ತನಾಳದ ಮೂಲಕ ಹೃದಯ ಕವಾಟ ಬದಲಾವಣೆ ಮಾಡಲಾಗಿದೆ.ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ’ ಎಂದು ಹೇಳಿದರು.
‘ಯಾವತ್ತೂ ಯಾವುದೇ ಮಾಹಿತಿ ಇಲ್ಲದೇ ಯಾವುದರ ಬಗ್ಗೆಯೂ ಮಾತನಾಡಬಾರದು.ಜ್ಞಾನಿಗಳು ಜ್ಞಾನಿಗಳಾಗೆಯೇ ಇರಬೇಕು, ಇನ್ನೊಂದು ಆಗಬಾರದು’ ಎಂದು ಟೀಕೆಗೆ ತಿರುಗೇಟು ನೀಡಿದ್ದಾರೆ.
ಹೊಸ ಶಕ್ತಿ
‘ಏ.2ರಂದು ಅಮಿತ್ ಶಾ ಅವರು ಪ್ರಥಮಬಾರಿಗೆ ಚುನಾವಣ ಪ್ರಚಾರಕ್ಕೆ ಬರುತ್ತಿದ್ದಾರೆ. ರೋಡ್ ಶೋ ರೂಪದಲ್ಲಿ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಿದ್ದು ಅದನ್ನ ಮುಗಿಸಿಕೊಂಡು ಬರಲಿದ್ದಾರೆ. ಅವರ ಬರುವಿಕೆ ನಮಗೆ ಹೊಸ ಶಕ್ತಿ ತುಂಬಲಿದೆ’ ಎಂದರು.
ನಾಮಪತ್ರ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ‘ಏ.4 ರಂದು ಗುರುವಾರ ನಾವು ನಾಪಪತ್ರ ಸಲ್ಲಿಸುತ್ತೇವೆ. ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದೇವೆ. ಎರಡೂ ಪಕ್ಷದ ಕಾರ್ಯಕರ್ತರು, ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.ಮೆರವಣಿಗೆ, ಸಮಾವೇಶದ ಕುರಿತು ರೂಪುರೇಷೆ ಮಾಡಲಾಗುತ್ತಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಕೊಡಲಿದ್ದೇವೆ’ ಎಂದರು.
‘ ಕುಮಾರಸ್ವಾಮಿ ಅವರು ಚುನಾವಣೆ ಬಂದಾಗ ಮೂರು ದಿನ ಆಸ್ಪತ್ರೆಲಿ ಇರ್ತಾರೆ, ನಾಲ್ಕನೇ ದಿನ ರಾಜ್ಯ ಸುತ್ತುತ್ತಾರೆ’ ಎಂದು ಹೃದಯ ಶಸ್ತ್ರ ಚಿಕಿತ್ಸೆ ಕುರಿತು ಅನುಮಾನ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು. ಈ ಕುರಿತು ಜೆಡಿಎಸ್ ಮತ್ತು ಬಿಜೆಪಿ ನಾಯಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.