ಮೈಸೂರು: ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಪ್ರಾರಂಭವಾಗಿದ್ದು, ಈಗಾಗಲೇ 18 ಹೃದಯರೋಗಿಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. ಮೈಸೂರಿನ ಕೆಆರ್‌ಎಸ್ ರಸ್ತೆಯ ಸ್ಯಾನಿಟೋರಿಯಂ ಆವರಣದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಜಯದೇವ ಫಾರ್ಮ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
2018ರ ಆಗಸ್ಟ್‌ನಲ್ಲಿ ಪ್ರಾರಂಭವಾದ ಈ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳು ಕೆಲಸ ಮಾಡುತ್ತಿವೆ. ಹೃದಯ ಶಸ್ತ್ರಚಿಕಿತ್ಸೆಗೆ ಏನೇನು ಅತ್ಯಾಧುನಿಕ ಸೌಲಭ್ಯಗಳು ಇರಬೇಕೋ ಅವೆಲ್ಲವು ಮೈಸೂರು ಆಸ್ಪತ್ರೆಯಲ್ಲಿವೆ. ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿರುವ ಸೌಲಭ್ಯಗಳೆಲ್ಲವೂ ಇಲ್ಲಿ ಇವೆ. ರೋಗಿಗಳು ಬೆಂಗಳೂರಿಗೆ ಹೋಗುವ ಬದಲು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯಬಹುದು.
13 ಜನ ಹೃದ್ರೋಗ ತಜ್ಞರು, 5 ಜನ ಸರ್ಜನ್‌ಗಳು, 125 ಜನ ಸ್ಟಾಫ್ ನರ್ಸ್ ಇದ್ದಾರೆ. ಕಡು ಬಡವರು, ಮಧ್ಯಮ ವರ್ಗದವರಿಗೆ ರಿಯಾಯಿತಿ ದರದಲ್ಲಿ ಪಂಚತಾರಾ ಆಸ್ಪತ್ರೆಯ ಸೌಲಭ್ಯ ದೊರೆಯುತ್ತದೆ ಎಂದ ಅವರು, ಬೆಂಗಳೂರು, ಮೈಸೂರು, ಕಲುºರ್ಗಿ ಆಸ್ಪತ್ರೆಗಳಲ್ಲಿ ಒಟ್ಟಾರೆ 50 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇವೆ. ಇದು ವಿಶ್ವದಾಖಲೆಯಾಗಿದೆ. 3 ಲಕ್ಷ ಜನರಿಗೆ ಸರ್ಜರಿ ಮತ್ತು ಕ್ಯಾತ್‌ಲ್ಯಾಬ್ ಪ್ರೊಸಿಜರ್ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ರವೀಂದ್ರನಾಥ್, ಆರ್‌ಎಂಓ ಡಾ.ಪಾಂಡುರಂಗ, ಡಾ.ಸದಾನಂದ್, ಡಾ.ಹರ್ಷಬಸಪ್ಪ, ಡಾ.ಸಂತೋಷ್, ಡಾ ಹೇಮಾ ರವೀಶ್, ಡಾ.ವೀಣಾ ನಂಜಪ್ಪ, ಪಿಆರ್‌ಓಗಳಾದ ವೀಣಾ, ಚಂಪಕ ಮಾಲಾ, ನರ್ಸಿಂಗ್ ಅಧೀಕ್ಷಕ ಹರೀಶ್ ಹಾಜರಿದ್ದರು.
2 ಗಂಟೆಯೊಳಗೆ ಸಂಪೂರ್ಣ ರಿಪೋರ್ಟ್: 2,500 ರೂ. ಗೆ ಮಾಸ್ಟರ್ ಹೆಲ್ತ್ ಚೆಕಪ್ ಮಾಡಲಾಗುತ್ತದೆ. ರೋಗಿಯು ನೋಂದಣಿ ಮಾಡಿದ 2 ಗಂಟೆಯೊಳಗೆ ಸಂಪೂರ್ಣ ರಿಪೋರ್ಟ್ ಕೊಡಲಾಗುವುದು ಎಂದು ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು. ಬೆಂಗಳೂರಿನಲ್ಲಿ 45 ಕೋಟಿ ರೂ. ವೆಚ್ಚದಲ್ಲಿ 120 ಹಾಸಿಗೆ ಸಾಮರ್ಥ್ಯದ ಹೊಸಕಟ್ಟಡ ಕಟ್ಟುತ್ತಿದ್ದೇವೆ.
ಕಲುºರ್ಗಿಯಲ್ಲಿಯೂ 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಮಾಡುವ ಆಲೋಚನೆ ಇದೆ ಎಂದರು. ಮೈಸೂರು ಆಸ್ಪತ್ರೆಯಲ್ಲಿ 5 ಲಕ್ಷ ಜನ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 40 ಸಾವಿರ ಜನ ಒಳರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಪ್ರತಿದಿನ 400 ರಿಂದ 500 ಜನ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಸೌಲಭ್ಯ ಕೂಡ ಇದೆ ಎಂದರು.