Advertisement

Heart Health: ಹೃದಯ ಆರೋಗ್ಯ ಪೂರಕ ಆಯ್ಕೆಗಳು

01:02 PM Feb 25, 2024 | Team Udayavani |

ನಮ್ಮ ಹೃದಯದ ಆರೋಗ್ಯಕ್ಕೆ ಸಂಬಂಧಿಸಿ ಆರೋಗ್ಯಕರ ಆಹಾರ, ಆರೋಗ್ಯಕರ ಜೀವನ ಶೈಲಿ ಅನುಸರಣೆಯಂತಹ ಅಂಶಗಳನ್ನು ನಾವು ಅನುಸರಿಸಬಹುದು. ಆದರೆ ವಯಸ್ಸು, ಕೌಟುಂಬಿಕ ಹಿನ್ನೆಲೆಯಂತಹ ಅಂಶಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೂ ಹೃದಯದ ಆರೋಗ್ಯಕ್ಕೆ ಪೂರಕವಾದ ಜೀವನಶೈಲಿಯನ್ನು ಅನುಸರಿಸುವುದು, ಆರೋಗ್ಯದ ಮೇಲೆ ನಿಗಾ ಇರಿಸುವುದರಿಂದ ನಮ್ಮ ಹೃದಯವನ್ನು ರಕ್ಷಿಸಿಕೊಳ್ಳಬಹುದು. ಹೃದಯದ ಆರೋಗ್ಯ ಸಮಸ್ಯೆಗಳ ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುವವರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

Advertisement

ವಂಶವಾಹಿ ಪರೀಕ್ಷೆಯ ಸಮಾಲೋಚನೆ

ವಂಶವಾಹಿ ಪರೀಕ್ಷೆಗಳ ಬಗ್ಗೆ ನಿಮ್ಮ ವೈದ್ಯರ ಬಳಿ ಸಮಾಲೋಚನೆ ನಡೆಸಬೇಕು. ಕಾರ್ಡಿಯೊಮಯೋಪಥಿ ಮತ್ತು ಅರಿತ್ಮಿಯಾಸ್‌ – ಇವು ವಂಶಪಾರಂಪರ್ಯವಾಗಿ ಬರುವ ಹೃದ್ರೋಗಗಳಾಗಿದ್ದು, ವಂಶವಾಹಿ ಪರೀಕ್ಷೆಯಿಂದ ತಿಳಿದುಕೊಳ್ಳಬಹುದು. ಜೊಲ್ಲು ಅಥವಾ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಹೃದ್ರೋಗಕ್ಕೆ ಕಾರಣವಾಗಬಲ್ಲ ವಂಶವಾಹಿ ಬದಲಾವಣೆಗಳು ಉಂಟಾಗಿವೆಯೇ ಎಂದು ಪತ್ತೆಹಚ್ಚಲಾಗುತ್ತದೆ. ವಂಶವಾಹಿಯಾಗಿ ಬಂದ ಹೃದ್ರೋಗದ ಲಕ್ಷಣಗಳು ನಿಮಗಿದ್ದರೆ ಅಥವಾ ಹೃದ್ರೋಗಿ ಸಂಬಂಧಿಗಳು ನಿಮ್ಮ ಕುಟುಂಬದಲ್ಲಿದ್ದರೆ ನಿಮ್ಮ ವೈದ್ಯರು ವಂಶವಾಹಿ ಪರೀಕ್ಷೆಗೆ ಸೂಚಿಸಬಹುದು. ನಿಮಗೆ ಚಿಕಿತ್ಸೆ ಅಗತ್ಯವೇ ಎಂಬುದನ್ನು ನಿರ್ಧರಿಸಲು ಈ ಪರೀಕ್ಷೆಯ ಫ‌ಲಿತಾಂಶಗಳು ನೆರವಾಗುತ್ತವೆ.

ಹೃದ್ರೋಗದ ಕೌಟುಂಬಿಕ ಹಿನ್ನೆಲೆ ನಿಮಗಿದೆಯೇ?

ಸಮತೋಲಿತ ಆಹಾರ ಕೌಟುಂಬಿಕ ಹಿನ್ನೆಲೆಯಿಂದಾಗಿ ಹೃದ್ರೋಗಕ್ಕೆ ತುತ್ತಾಗುವ ಅಪಾಯ ನಿಮಗಿದ್ದರೂ ಹೃದಯದ ಆರೋಗ್ಯಕ್ಕೆ ಪೂರಕವಾದ ಆಹಾರ ಕ್ರಮವನ್ನು ಅನುಸರಿಸುವ ಮೂಲಕ ಹೃದ್ರೋಗ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಕೆಲವು ಆಹಾರ ಕ್ರಮಗಳು ಹೃದಯದ ಆರೋಗ್ಯಸ್ನೇಹಿಯಾಗಿವೆ. ಸ್ಯಾಚುರೇಟೆಡ್‌ ಕೊಬ್ಬು, ಟ್ರಾನ್ಸ್‌ ಕೊಬ್ಬು, ಕೊಲೆಸ್ಟರಾಲ್‌, ಸಕ್ಕರೆ ಮತ್ತು ಉಪ್ಪುಭರಿತ ಆಹಾರಗಳು ಹೃದ್ರೋಗ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ.

Advertisement

ನಿಯಮಿತ ವ್ಯಾಯಾಮ

ವಂಶಪಾರಂಪರ್ಯವಾಗಿ ಬರಬಲ್ಲ ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ನಿಯಮಿತವಾಗಿ ವ್ಯಾಯಾಮ, ದೈಹಿಕ ಶ್ರಮದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡುವವರಿಗೆ ಹೃದ್ರೋಗಗಳು, ಲಕ್ವಾ ಅಪಾಯ ಕಡಿಮೆ.

ದೇಹತೂಕದ ಬಗ್ಗೆ ಗಮನ ಹರಿಸಿ

ಬೊಜ್ಜು ಅಥವಾ ಹೆಚ್ಚು ಬಿಎಂಐ ಹೊಂದಿರುವುದು ಹೃದಯದ ಒಟ್ಟು ಆರೋಗ್ಯಕ್ಕೆ ಅಪಾಯಕಾರಿ. ಅಪಧಮನಿಯಲ್ಲಿ ರಕ್ತಪ್ರವಾಹಕ್ಕೆ ತಡೆಯಾಗುವ ರಚನೆಗಳು ರೂಪುಗೊಳ್ಳಲು ಕಾರಣವಾಗುವುದು ಬೊಜ್ಜು ಅಥವಾ ಅಧಿಕ ಬಿಎಂಐ ಹೊಂದಿರುವುದರ ಒಂದು ಅಪಾಯ.

ಅಲ್ಲದೆ, ಹೃದಯ ಆರೋಗ್ಯಕ್ಕೆ ಮಾರಕವಾಗಿರುವ ಧೂಮಪಾನ, ಮದ್ಯಪಾನದಂತಹ ಚಟಗಳಿಂದ ದೂರವಿರಬೇಕು. ರಕ್ತದೊತ್ತಡ, ಕೊಲೆಸ್ಟರಾಲ್‌, ಮಧುಮೇಹದ ಮೇಲೆ ನಿಯಮಿತವಾಗಿ ನಿಗಾ-ನಿಯಂತ್ರಣ ಇರಿಸಿಕೊಳ್ಳಬೇಕು. ಅಲ್ಲದೆ ನಿಯಮಿತವಾಗಿ ಹೃದಯ ಆರೋಗ್ಯ ತಪಾಸಣೆಗೆ ಒಳಗಾಗುತ್ತಿರಬೇಕು.

ಡಾ| ಟಾಮ್‌ ದೇವಸ್ಯ ಪ್ರೊಫೆಸರ್‌ ಮತ್ತು ಯುನಿಟ್‌ ಹೆಡ್‌ ಕಾರ್ಡಿಯಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ , ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next