Advertisement
ಒಂದು ವಾರದಲ್ಲಿ ರಾಜ್ಯದ ವಿವಿಧೆಡೆ ಮೂವರು ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪಿರುವುದು ವರದಿಯಾಗಿದ್ದು, ಇದು ಹೃದಯ ತಜ್ಞರಿಗೂ ಸವಾಲಾಗಿ ಪರಿಣಮಿಸಿದೆ.
Related Articles
Advertisement
ಪ್ರತೀ ಸಾವಿರ ಮಕ್ಕಳಲ್ಲಿ 5-6 ಮಕ್ಕಳಿಗೆ ಹುಟ್ಟುವಾಗಲೇ ಹೃದಯ ಸಮಸ್ಯೆ ಎದುರಾಗುತ್ತದೆ. ಈ ಪೈಕಿ ಶೇ. 1-2ರಷ್ಟು ಮಕ್ಕಳಲ್ಲಿ ಹೃದಯಾಘಾತ ಸಂಭವಿಸಬಹುದು. ಹದಿಹರೆಯದ ಮಕ್ಕಳ ಹೃದಯದ ರಕ್ತನಾಳಗಳು ಅದಲು ಬದಲಾಗುವುದು, ರಕ್ತ ಸಂಬಂಧಿಗಳಿಂದ ಆನುವಂಶೀಯವಾಗಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಹೃದಯ ಸಮಸ್ಯೆಗಳು ಅಂಟಿಕೊಳ್ಳುತ್ತವೆ. ಹೃದಯದ ರಕ್ತನಾಳಗಳಲ್ಲಿ ಸಮಸ್ಯೆ, ಅಭಿದಮನಿ ನಾಳದಲ್ಲಿ ತೊಂದರೆಯಿದ್ದರೂ 15 ವರ್ಷದೊಳಗಿನವರಲ್ಲಿ ಹೃದಯಾಘಾತ ಸಂಭವಿಸುತ್ತದೆ. 15ರಿಂದ 18 ವರ್ಷದ ಶೇ. 2ರಷ್ಟು, 12-15ರ ಶೇ. 1ರಷ್ಟು ಹಾಗೂ 12ಕ್ಕಿಂತ ಕಡಿಮೆ ವಯಸ್ಸಿನ ಶೇ. 0.5ರಷ್ಟು ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿವೆ ಎಂದು ಅಂದಾಜಿಸಲಾಗಿದೆ ಎಂದು ಜಯದೇವ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ| ಸಿ.ಎನ್. ಮಂಜುನಾಥ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಕಾರಣವೇನು?:
ಸಾಮಾನ್ಯವಾಗಿ ಮಯೋಕಾರ್ಡಿಟಿಸ್ ವೈರಲ್ ಇನ್‌ಫೆಕ್ಷನ್, ರುಮಾಟಿಕ್ ಕಾರ್ಡಿಟಿಸ್, ಹೃದಯ ಕವಾಟದಲ್ಲಿ ರಕ್ತ ಸೋರಿಕೆಯಾಗಿ ಮಕ್ಕಳಲ್ಲಿ ಹೃದಯಾಘಾತ ಉಂಟಾಗುತ್ತದೆ. ಪುಟ್ಟ ಕಂದಮ್ಮಗಳ ದೇಹದಲ್ಲಿ ಬೊಜ್ಜು ಹಾಗೂ ಕ್ಯಾಲ್ಸಿಯಂಗಳು ರಕ್ತನಾಳಗಳಿಗೆ ಸೇರಿಕೊಂಡರೆ ರಕ್ತನಾಳವು ಕುಗ್ಗುತ್ತದೆ. ಇದರಿಂದ ರಕ್ತ ಚಲನೆಗೆ ಸಮಸ್ಯೆ ಆಗಿ ಆ ಜಾಗದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಹೃದಯಕ್ಕೆ ಸಾಗುವ ರಕ್ತ ಸಂಚಾರ ನಿಂತು ಹೃದಯ ಬಡಿತ ನಿಲ್ಲಬಹುದು. ಹದಿಹರೆಯದವರಲ್ಲೂ ಇತ್ತೀಚೆಗೆ ಸಕ್ಕರೆ ಕಾಯಿಲೆ ಕಾಣಿಸಿಕೊಂಡು ಹೃದಯಕ್ಕೆ ಹಾನಿಯಾಗುತ್ತಿವೆ. ಪ್ರೌಢಾವಸ್ಥೆಗೆ ಬಂದ ಬಾಲಕ/ಬಾಲಕಿಯರ ದೇಹದಲ್ಲಿ ರಕ್ತದ ಪೂರೈಕೆಗೆ ಅಡಚಣೆ ಉಂಟಾದಾಗ, ಹೃದಯದ ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ಹೃದಯಾಘಾತ ಸಂಭವಿಸಿದ ಸಾಕಷ್ಟು ಉದಾಹರಣೆಗಳಿವೆ ಎನ್ನುತ್ತಾರೆ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಯು.ಎಂ. ನಾಗಮಲ್ಲೇಶ್.
ಹದಿಹರೆಯದವರಲ್ಲಿ ಹೃದಯದ ಸಮಸ್ಯೆ ಲಕ್ಷಣ:
ಮಕ್ಕಳಲ್ಲಿ ಆಗಾಗ ಉಸಿರಾಟದ ಸಮಸ್ಯೆ ಕಾಡುವುದು ಹೃದಯ ಸಂಬಂಧಿ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ. ಯಾವುದೇ ಕಾರ್ಯ ಚಟುವಟಿಕೆಯಲ್ಲಿ ತೊಡಗದಿದ್ದರೂ ಹೆಚ್ಚು ಹೃದಯ ಬಡಿತ, ಆಟವಾಡುವ ವೇಳೆ ಅತೀ ಆಯಾಸ, ಎಲ್ಲ ಮಕ್ಕಳಂತೆ ಓಡಾಟ ಮಾಡಿದರೆ ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು, ಎಡ ಬದಿಯ ಎದೆಯಲ್ಲಿ ನೋವು, ಸ್ನಾಯು ಸೆಳೆತ ಹಾಗೂ ರಾತ್ರಿ ನಿದ್ದೆಗೆ ಜಾರಿದಾಗಲೂ ಹೃದಯ ಬಡಿತ ಹೆಚ್ಚಳ, ಎಡ ಭಾಗದಲ್ಲಿ ಎದೆನೋವು ಹೃದಯ ಸಂಬಂಧಿ ಕಾಯಿಲೆಯ ಮುನ್ಸೂಚನೆಯಾಗಿದೆ. ಕರ್ನಾಟಕದಲ್ಲಿ ಕಳೆದ 10 ವರ್ಷಗಳಲ್ಲಿ ಶೇ. 20ರಷ್ಟು ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಪೈಕಿ ಶೇ. 30ರಷ್ಟು 45 ವರ್ಷದೊಳಗಿನ ಯುವಕರು ಹಾಗೂ ಮಕ್ಕಳು ಸೇರಿದ್ದಾರೆ.
ಮಕ್ಕಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ:
- ಆದಷ್ಟು ಮಕ್ಕಳನ್ನು ಮೊಬೈಲ್, ಕಂಪ್ಯೂಟರ್‌ನಿಂದ ದೂರ ಇರುವಂತೆ ನೋಡಿಕೊಳ್ಳಿ.
- ಮೈದಾನದಲ್ಲಿ ಆಟವಾಡಲು ಕಳುಹಿಸಿ. ದೇಹ, ಮನಸ್ಸಿಗೆ ವ್ಯಾಯಾಮ ಸಿಗಬೇಕು. ಶಾಲಾ ಕೆಲಸಗಳಲ್ಲಿ ಅತಿಯಾದ ಒತ್ತಡ, ನಿದ್ರಾಹೀನತೆ, ರಾತ್ರಿ ಓದು-ಬರಹ ಕೆಲಸ ಒಳ್ಳೆಯದಲ್ಲ.
- ವಾಯು ಮಾಲಿನ್ಯ ಹಾಗೂ ಮಣ್ಣಿನ ಮಾಲಿನ್ಯಗಳಿಂದ ಮಕ್ಕಳನ್ನು ದೂರಿ ಇರಿಸಿ.
- ಹೆಚ್ಚೆಚ್ಚು ಜಂಕ್ ಫುಡ್ ಸೇವನೆಯಿಂದ ಹೃದಯದ ರಕ್ತನಾಳಗಳಲ್ಲಿ ಬೊಜ್ಜು ಶೇಖರಣೆಯಾಗುವ ಸಾಧ್ಯತೆ.
- ಸ್ಥೂಲಕಾಯದ ಸಮಸ್ಯೆಯೂ ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣ.
- ಮಕ್ಕಳಲ್ಲಿ ಹೃದಯಾಘಾತವಾಗಿ ಪ್ರಜ್ಞಾಹೀನರಾದರೆ ಎದೆ ಮೇಲೆ ಕೈ ಇಟ್ಟು ಜೋರಾಗಿ ಒತ್ತಿ. ಎಚ್ಚರವಿದ್ದಾಗ ಒತ್ತಿದರೆ ಉಸಿರಾಡಲು ಮತ್ತಷ್ಟು ಸಮಸ್ಯೆಯಾಗಬಹುದು ಎಚ್ಚರ.
- ಶಿವಮೊಗ್ಗದ ಸೊರಬದಲ್ಲಿ 10ನೇ ತರಗತಿ ವಿದ್ಯಾರ್ಥಿ ಜಯಂತ್ ರಜತಾದ್ರಯ್ಯ ಬೆಳಗ್ಗೆ ಶಾಲೆಗೆ ಹೊರಡುತ್ತಿದ್ದಾಗ ಎದೆನೋವು ಉಂಟಾಗಿ ಏಕಾಏಕಿ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾನೆ.
- ಜ. 9ರಂದು ಸುರತ್ಕಲ್‌ನಲ್ಲಿ ಮೊಹಮ್ಮದ್ ಹಸೀಮ್ (17) ಶಾಲೆಗೆ ಹೊರಡಲು ಸಿದ್ದನಾಗುತ್ತಿದ್ದಾಗ ಏಕಾಏಕಿ ತಲೆಸುತ್ತು ಬಂದು ಬಿದ್ದು ಹೃದಯಾಘಾತದಿಂದ ಅಸುನೀಗಿದ್ದ.
- ಜ. 7ರಂದು ಮಡಿಕೇರಿಯ ಕುಶಾಲನಗರದ ಕೀರ್ತನ್ (12) ಎದೆನೋವಿನಿಂದ ಬಳಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ.
- 2022 ಫೆ. 12ರಂದು ಧಾರವಾಡ ಕಲಘಟಗಿ ಪಟ್ಟಣದ 6ನೇ ತರಗತಿಯ ಬಾಲಕನೊಬ್ಬ ಶಾಲೆಯಲ್ಲಿಯೇ ಕುಸಿದುಬಿದ್ದು ಹೃದಯಾಘಾದಿಂದ ಸಾವನ್ನಪ್ಪಿದ್ದಾನೆ.