Advertisement

ಒಳ ಮನಸ್ಸಿನ ಮಾತು ಕೇಳಿ

04:38 PM Aug 11, 2018 | |

ಕಲಬುರಗಿ: ನಾವು ಯಾವಾಗಲೂ ಹೊರ ಮನಸ್ಸು ಹೇಳುವುದನ್ನು ನಿರ್ಲಕ್ಷಿಸಿ ಒಳಮನಸ್ಸು ಹೇಳಿದ್ದನ್ನು ಕೇಳಲು ಸಿದ್ಧರಾಗಬೇಕು ಎಂದು ವ್ಯಕ್ತಿತ್ವ ವಿಕಸನದ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವಿರೇಂದ್ರನಾಥ ಹೇಳಿದರು. ನಗರದ ಅಪ್ಪಾ ಪಬ್ಲಿಕ್‌ ಶಾಲೆಯ ಆವರಣದಲ್ಲಿರುವ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿವಿಯಿಂದ ಹಮ್ಮಿಕೊಳ್ಳಲಾಗಿದ್ದ ಇಂಡಕ್ಷನ್‌ ಕಾರ್ಯಕ್ರಮ ತರಬೇತಿಯಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಅವರು ಮಾತನಾಡಿದರು.

Advertisement

ಇಂದಿನ ದಿನಗಳಲ್ಲಿ ಹಣ ಗಳಿಕೆಯೊಂದೇ ಜೀವನದ ಮುಖ್ಯ ಗುರಿಯಾಗಿದೆ. ವಿದ್ಯಾರ್ಥಿಗಳು ಸರಳತೆ ಮೈಗೂಡಿಸಿಕೊಂಡು ಪೂರ್ವಜರು ಕೂಡಿಟ್ಟ ಹಣವನ್ನು ಉಳಿಸುವುದು ಇಂದಿನ ಕಾಲದ ತುರ್ತು ಅಗತ್ಯವಾಗಿದೆ ಎಂದು ಸಲಹೆ ನೀಡಿದರು. ಕನಸು ಕಾಣುವುದು ತಪ್ಪಲ್ಲ, ಆದರೆ ಕಂಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು. ಅದಕ್ಕಾಗಿ ಬೇಕಾಗಿರುವುದು ಆತ್ಮಬಲ. ಅದನ್ನು ಅಂಗಡಿಯಿಂದ ಖರೀದಿ ಮಾಡಲು ಸಾಧ್ಯವಿಲ್ಲ, ಈ ದಿಸೆಯಲ್ಲಿ ಆಶಾವಾದಿಗಳಾಗಿರುವುದು ಉತ್ತಮ ಎಂದರು. ನಕಾರಾತ್ಮಕ ಚಿಂತನೆಗಳನ್ನು ಆದಷ್ಟು ದೂರವಿಡಬೇಕು. ಅವು ನಮ್ಮನ್ನು ಇನ್ನಷ್ಟು ಸಮಸ್ಯೆಗಳಿಗೆ ಈಡು ಮಾಡುತ್ತವೆ. ಕೇಳುವ, ಬರೆಯುವ, ಆಲಿಸುವ ಗುಣಗಳನ್ನು ಬೆಳೆಸಿಕೊಂಡರೆ ಏಕಾಗ್ರತೆ ಲಭಿಸುತ್ತದೆ. ಏಕಾಗ್ರತೆಯಿಂದ ಅಂದುಕೊಂಡಿದ್ದನ್ನು ಸರಳವಾಗಿ ಸಾಧಿಸಬಹುದು ಎಂದರು.

ಅಂಜಿಕೆ ಭಯದ ಮೂಲವಾಗಿದ್ದು, ಅದು ಕೀಳರಿಮೆಗೆ ಕಾರಣವಾಗುತ್ತದೆ. ಉತ್ತರ ಕರ್ನಾಟಕದ ಜನರು ಜಾಣರಾಗಿದ್ದರೂ, ಕೀಳರಿಮೆ, ಭಯದಿಂದಾಗಿ ಸಂದರ್ಶನಗಳಲ್ಲಿ ಅನುತ್ತೀರ್ಣರಾಗುತ್ತಾರೆ. ಉತ್ತರ ಭಾರತದವರು ಬುದ್ಧಿಶಕ್ತಿಯಲ್ಲಿ ಹಿಂದಿದ್ದರೂ ಧೈರ್ಯಶಾಲಿಗಳು. ಆದ್ದರಿಂದ ಉದ್ಯೋಗಗಿಟ್ಟಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದರು.

ನಮ್ಮೆಲ್ಲ ಆಗು-ಹೋಗುಗಳಿಗೆ ಮನಸ್ಸೇ ಕಾರಣವಾಗಿದೆ. ಮನಸ್ಸು ಹಾಗೂ ಮೆದುಳು ಹೇಳುವುದನ್ನು ಕೇಳಬೇಕು. ಹೇಳುವ ವಿಷಯಗಳನ್ನು ನೇರವಾಗಿ, ಸ್ಪುಟವಾಗಿ ಹೇಳುವುದನ್ನು ರೂಢಿಸಿಕೊಳ್ಳಬೇಕು. ಯಶಸ್ಸು ಎಂದರೆ ನಗುತ್ತಾ ಎಲ್ಲವನ್ನು ಸ್ವೀಕರಿಸಿ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳುವುದಾಗಿದೆ. ಅವಕಾಶಗಳು ಕೇವಲ ಒಮ್ಮೆ ಮಾತ್ರ ಬಾಗಿಲು ತಟ್ಟುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ಜೀವನದಲ್ಲಿ ಮುಂದೆ ಬರಲು ಯತ್ನಿಸಬೇಕು ಎಂದು ಹೇಳಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕುಲಸಚಿವರಾದ ಡಾ| ಅನೀಲಕುಮಾರ ಭಿಡವೆ, ಡಾ| ಶಿವದತ್ತ ಹೊನ್ನಳ್ಳಿ, ಡೀನ್‌ ಡಾ| ಲಿಂಗರಾಜ ಶಾಸ್ತ್ರೀ, ಡಾ| ಎಸ್‌.ಜಿ. ಡೊಳ್ಳೆಗೌಡರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next