Advertisement
ನಿಮಗೆ ಕಿಡ್ನಿ ಕಲ್ಲುಗಳು ಇದ್ದರೆ ನೀವು ವಿಶೇಷ ಪಥ್ಯಾಹಾರವನ್ನು ಅನುಸರಿಸುವುದು ಅಗತ್ಯವಾಗುತ್ತದೆ. ಪ್ರಾಥಮಿಕವಾಗಿ ನಿಮ್ಮ ವೈದ್ಯರು ನಿಮಗಿರುವ ಕಿಡ್ನಿ ಕಲ್ಲು ಯಾವ ವಿಧವಾದುದು ಎಂಬುದನ್ನು ತಿಳಿಯಲು ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ. ಇದರ ಮೂಲಕ ನಿಮಗೆ ಸರಿಹೊಂದುವ ಪಥ್ಯಾಹಾರ ಯಾವುದು ಎಂಬುದನ್ನು ವೈದ್ಯರು ನಿರ್ಧರಿಸಬಹುದಾಗಿದೆ. ಬಹುಸಾಮಾನ್ಯವಾಗಿ ಕಿಡ್ನಿಯ ಕಲ್ಲುಗಳು ಕ್ಯಾಲ್ಸಿಯಂ ಮತ್ತು ಓಕ್ಸಲೇಟ್‌ನಿಂದ ರೂಪುಗೊಂಡಿ ರುತ್ತವೆ. ವ್ಯಕ್ತಿಗತ ಕಿಡ್ನಿ ಕಲ್ಲು ಚಿಕಿತ್ಸೆಯು ಅದು ಯಾವುದರಿಂದ ರೂಪುಗೊಂಡದ್ದು ಎಂಬುದನ್ನು ಆಧರಿಸಿದೆ.
ಕೆಲವು ಕಿವಿಮಾತುಗಳು ಇಲ್ಲಿವೆ
ನಿಮ್ಮ ಬೆವರನ್ನು ತಪ್ಪು ಅಂದಾಜಿಸಬೇಡಿ: ಯೋಗ ಮತ್ತು ಕಠಿನ ವ್ಯಾಯಾಮ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಅದು ಕಿಡ್ನಿಯ ಕಲ್ಲುಗಳು ರೂಪುಗೊಳ್ಳುವುದಕ್ಕೂ ಕಾರಣವಾಗಬಹುದು. ಹೇಗೆ? ಈ ವ್ಯಾಯಾಮಗಳ ಮೂಲಕ ಅಥವಾ ಕೇವಲ ಬೇಸಿಗೆಯ ಬಿರುಬಿಸಿಲಿನಿಂದಾಗಿ ಬೆವರಿನ ಮೂಲಕ ದೇಹದಿಂದ ದ್ರವಾಂಶ ನಷ್ಟವಾದಾಗ ಮೂತ್ರೋತ್ಪನ್ನ ಕಡಿಮೆಯಾಗುತ್ತದೆ. ನೀವು ಬೆವರುವುದು ಹೆಚ್ಚಾದಷ್ಟು ಮೂತ್ರ ವಿಸರ್ಜನೆ ಕಡಿಮೆಯಾಗುತ್ತದೆ. ಇದರಿಂದ ಕಲ್ಲು ಉಂಟು ಮಾಡುವ ಖನಿಜಾಂಶಗಳು ಮೂತ್ರಪಿಂಡ ಹಾಗೂ ಮೂತ್ರಾಂಗ ವ್ಯೂಹದಲ್ಲಿ ಶೇಖರಗೊಂಡು ಬೆಸೆದುಕೊಳ್ಳುವುದಕ್ಕೆ ಅನುಕೂಲಕರ ಸ್ಥಿತಿ ಉಂಟಾಗುತ್ತದೆ. ಕಿಡ್ನಿ ಕಲ್ಲುಗಳು ಉಂಟಾಗುವುದನ್ನು ತಡೆಯಲು ನೀವು ಅನುಸರಿಸಬಹುದಾದ ಅತ್ಯುತ್ತಮ ಕ್ರಮಗಳಲ್ಲಿ ಒಂದು ಸಾಕಷ್ಟು ನೀರು ಕುಡಿಯುವ ಮೂಲಕ ಅನೇಕ ಬಾರಿ ಮೂತ್ರ ವಿಸರ್ಜನೆ ಆಗುವಂತೆ ಮಾಡುವುದು. ಯಾವಾಗಲೂ, ವಿಶೇಷತಃ ಸಾಕಷ್ಟು ಬೆವರು ಹರಿಸುವ ಕೆಲಸಕಾರ್ಯಗಳು ಅಥವಾ ವ್ಯಾಯಾಮಗಳಲ್ಲಿ ತೊಡಗುವ ಸಂದರ್ಭದಲ್ಲಿ ದೇಹದಲ್ಲಿ ಸಾಕಷ್ಟು ದ್ರವಾಂಶ ಇರುವಂತೆ ನೋಡಿಕೊಳ್ಳಿ. ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರು ಕುಡಿಯಿರಿ, ರಾತ್ರಿ ಮೂತ್ರ ವಿಸರ್ಜನೆಗಾಗಿ ಎಚ್ಚರವಾದರೆ ಆಗ ಇನ್ನೊಂದು ಲೋಟ ನೀರು ಕುಡಿದು ಮಲಗಿ.
Related Articles
Advertisement
ಕ್ಯಾಲ್ಸಿಯಂ ಶತ್ರುವಲ್ಲಕ್ಯಾಲ್ಸಿಯಂ ಓಕ್ಸಲೇಟ್ ಕಿಡ್ನಿ ಕಲ್ಲು ರೂಪುಗೊಳ್ಳುವುದಕ್ಕೆ ಕ್ಯಾಲ್ಸಿಯಂ ಪ್ರಧಾನ ಕಾರಣ ಎಂಬುದಾಗಿ ಅನೇಕರು ಭಾವಿಸುತ್ತಾರೆ. ಪ್ರಾಯಃ ಅದರ ಹೆಸರು ಈ ತಪ್ಪು ಕಲ್ಪನೆಗೆ ಕಾರಣವಿರಬಹುದು. ನಿಜವಾಗಿ ನೋಡಿದರೆ ಕ್ಯಾಲ್ಸಿಯಂ ಕಡಿಮೆ ಪ್ರಮಾಣದಲ್ಲಿರುವ ಆಹಾರಾಭ್ಯಾಸವು ಕಿಡ್ನಿ ಕಲ್ಲುಗಳು ರೂಪುಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಬೇಡಿ. ಇದಕ್ಕೆ ಬದಲಾಗಿ, ನಿಮ್ಮ ಆಹಾರದಲ್ಲಿ ಸೋಡಿಯಂ ಪ್ರಮಾಣವನ್ನು ಕುಗ್ಗಿಸಿ, ಜತೆಗೆ ಕ್ಯಾಲ್ಸಿಯಂ ಸಮೃದ್ಧ ಆಹಾರಗಳು ಹಾಗೂ ಓಕ್ಸಲೇಟ್ ಸಮೃದ್ಧ ಆಹಾರಗಳನ್ನು ಜತೆಯಾಗಿ ಸೇವಿಸಿ. ಈ ವರ್ಗದಲ್ಲಿರುವ ಉತ್ತಮ ಆಹಾರ ಆಯ್ಕೆಗಳೆಂದರೆ ಹಸಿರು ಸೊಪ್ಪು ತರಕಾರಿಗಳು, ಬೀಜಗಳು, ಕಾಳುಗಳು, ಹಾಲು ಮತ್ತು ಬೆಣ್ಣೆ. ಕ್ಯಾಲ್ಸಿಯಂ ಓಕ್ಸಲೇಟ್ ಕಿಡ್ನಿ ಕಲ್ಲು ಹೊಂದಿರುವವರು ತಮ್ಮ ಸೋಡಿಯಂ ಸೇವನೆಯ ಪ್ರಮಾಣವನ್ನು ಕಡಿತಗೊಳಿಸಬೇಕು. ಹೆಚ್ಚು ಪ್ರಮಾಣದಲ್ಲಿ ಸೋಡಿಯಂ ಸೇವನೆಯು ಮೂತ್ರಕ್ಕೆ ಕ್ಯಾಲ್ಸಿಯಂ ಬಿಡುಗಡೆಗೊಳ್ಳುವುದನ್ನು ಹೆಚ್ಚಿಸುತ್ತದೆ ಮತ್ತು ಕಲ್ಲು ರೂಪುಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ದಿನಕ್ಕೆ ಸೋಡಿಯಂ ಸೇವನೆಯ ಪ್ರಮಾಣವನ್ನು 2500 ಮಿಲಿಗ್ರಾಂಗಳಿಗೆ ಮಿತಗೊಳಿಸುವುದು ವಿಹಿತ. ಕ್ಯಾಲ್ಸಿಯಂ ಓಕ್ಸಲೇಟ್ ಕಿಡ್ನಿ ಕಲ್ಲು ಇರುವವರು ಚಿಕಿತ್ಸೆಯ ಅವಧಿಯಲ್ಲಿ ಸೋಡಿಯಂ ಸೇವನೆಯನ್ನು ಕಡ್ಡಾಯವಾಗಿ ಮಿತಗೊಳಿಸಬೇಕು. ಯಾವುದೇ ಆಹಾರೋತ್ಪನ್ನವನ್ನು ಖರೀದಿಸುವುದಕ್ಕೆ ಮುನ್ನ ಅವುಗಳ ಲೇಬಲ್‌ಗಳನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಫುಡ್ ಲೇಬಲ್ ಒಂದು ಶಕ್ತಿಯುತ ಮಾಧ್ಯಮವಾಗಿದ್ದು, ಅದರಲ್ಲಿ ಅಡಕವಾಗಿರುವ ಅಂಶಗಳು ಮತ್ತು ಪ್ರಮಾಣವನ್ನು ತಿಳಿಸುತ್ತವೆ. ಕ್ಯಾಲ್ಸಿಯಂ ಓಕ್ಸಲೇಟ್ ಕಿಡ್ನಿ ಕಲ್ಲು ಹೊಂದಿರುವವರಿಗೆ ಫುಡ್ ಲೇಬಲ್ ಓದುವುದು ತುಂಬಾ ಸಹಾಯಕಾರಿ, ಆಹಾರ ವಸ್ತುವಿನಲ್ಲಿ ಇರುವ ಸೋಡಿಯಂ ಪ್ರಮಾಣ ಎಷ್ಟೆಂಬುದನ್ನು ತಿಳಿದುಕೊಂಡು ಖರೀದಿಸಲು ಇದು ನೆರವಾಗುತ್ತದೆ. ಫುಡ್ ಲೇಬಲ್‌ನಲ್ಲಿ “ಸಾಲ್ಟ್’ ಅಥವಾ “ಉಪ್ಪು’ ಎಂಬ ಪದ ಇರಲೇ ಬೇಕಾಗಿಲ್ಲ. “ಸೋಡಿಯಂ’ ಎಂಬ ಪೂರ್ವಪದ ಇರುವ ಅಂಶಗಳನ್ನು ಗಮನಿಸಿ:
– ಸೋಡಿಯಂ ಕ್ಲೋರೈಡ್
– ಸೋಡಿಯಂ ಬೆಂಜೊಯೇಟ್
– ಸೋಡಿಯಂ ಹೈಡ್ರಾಕ್ಸೆ„ಡ್
– ಸೋಡಿಯಂ ಬೈಕಾಬೊìನೇಟ್ ಇತ್ಯಾದಿ (ಮುಂದುವರಿಯುವುದು) – ದಕ್ಷಾ ಕುಮಾರಿ,
ಡಯಟೀಶನ್,
ನ್ಯೂಟ್ರಿಶನ್ ಮತ್ತು ಡಯಟಿಕ್ಸ್ ವಿಭಾಗ
ಕೆ.ಎಂ.ಸಿ., ಮಣಿಪಾಲ.