1947 ಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲೀಗ ಆರೋಗ್ಯವಂತರು ಹೆಚ್ಚು, ಹಾಗೆಯೇ ಆರೋಗ್ಯಕ್ಕೆ ಸಂಬಂಧಿಸಿದ ಸೌಕರ್ಯಗಳೂ ಹೆಚ್ಚಾಗಿವೆ. ಆಗ ಆರೋಗ್ಯ ವ್ಯವಸ್ಥೆಯೂ ಸರಿಯಾಗಿರಲಿಲ್ಲ. ಜತೆಗೆ ಕಡಿಮೆ ಆದಾಯ, ಹೆಚ್ಚಿನ ಜನಸಂಖ್ಯೆ ಮತ್ತು ಕಡಿಮೆ ಜೀವಿತಾವಧಿಯ ಸಮಸ್ಯೆಯೂ ಇತ್ತು.
ಶಿಶು ಮರಣ ದರ :
1950ರಲ್ಲಿ ಪ್ರತೀ ಸಾವಿರ ಜನನಗಳಾದರೆ ಅದರಲ್ಲಿ 181 ಕೂಸುಗಳು ಮರಣಹೊಂದುತ್ತಿದ್ದವು. ಈ ದರ ಈಗ 32ಕ್ಕೆ ಇಳಿದಿದೆ. ಅದೇ ಪಾಕಿಸ್ಥಾನದಲ್ಲಿ ಆಗ ಪ್ರತೀ ಸಾವಿರ ಜನನಕ್ಕೆ 250 ಶಿಶುಗಳು ಸಾವನ್ನಪ್ಪುತ್ತಿದ್ದರೆ, ಈಗ 61 ಶಿಶುಗಳು ಮರಣಹೊಂದುತ್ತಿವೆ. ಈ ವಿಚಾರದಲ್ಲೂ ಭಾರತ ಹೆಚ್ಚಿನ ಪ್ರಗತಿ ಕಂಡಿದೆ.
ಜನನ ಪ್ರಮಾಣ ಕಡಿಮೆ,ಜನಸಂಖ್ಯೆಯೂ ಇಳಿಕೆ :
1950ರಲ್ಲಿ ಭಾರತದ ಜನನ ಪ್ರಮಾಣ, ಪ್ರತೀ ಮಹಿಳೆಗೆ 5.9 ಇದ್ದರೆ, ಈಗ 2.2 ಇದೆ. ಆಗಲೇ ಇಂಗ್ಲೆಂಡ್‌ನಲ್ಲಿ 2.2 ಮತ್ತು ಅಮೆರಿಕದಲ್ಲಿ 3.3 ಇತ್ತು. ಸದ್ಯ ಭಾರತದ ಜನನ ಪ್ರಮಾಣ ಏಷ್ಯಾದ ದೇಶಗಳಲ್ಲೇ ಅತೀ ಕಡಿಮೆ ಇದೆ.
ಜೀವಿತಾವಧಿ ದುಪ್ಪಟ್ಟು :
1950ಕ್ಕೆ ಹೋಲಿಕೆ ಮಾಡಿದರೆ ಭಾರತದ ಜೀವಿತಾವಧಿ ಪ್ರಮಾಣ ದುಪ್ಪಟ್ಟಾಗಿದೆ. ಅಂದರೆ ಆಗ ಭಾರತದ ಜೀವಿತಾವಧಿ 37 ವರ್ಷ ಮಾತ್ರ ಇತ್ತು. ಈಗ ಅದು 69ಕ್ಕೆ ಏರಿಕೆಯಾಗಿದೆ. ಚೀನದಲ್ಲಿ ಆಗ 44 ವರ್ಷಗಳಿದ್ದರೆ, ಈಗ 77ಕ್ಕೆ ಏರಿಕೆಯಾಗಿದೆ.