ಮಂಗಳೂರು: ದೇಶವೊಂದರ ಆರ್ಥಿಕ ಸ್ಥಿತಿಗತಿ ಆ ದೇಶದ ಜನರ ಆರೋಗ್ಯದ ಸ್ಥಿತಿಗತಿಯನ್ನು ಅವಲಂಬಿಸಿರುವ ಕಾರಣ ಪ್ರತಿಯೊಂದು ದೇಶವೂ ಜನರ ಆರೋಗ್ಯ ವೃದ್ಧಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಅನಿವಾರ್ಯತೆ ಇದೆ ಎಂದು ವರ್ಲ್ಡ್ ಫೆಡರೇಶನ್ ಅಫ್ ಮೆಡಿಕಲ್ ಎಜುಕೇಶನ್ ಅಧ್ಯಕ್ಷ ಪ್ರೊ| ಡೇವಿಡ್ ಗೋರ್ಡಾನ್ ಹೇಳಿದರು.
ಅವರು ನಗರದ ಕೊಡಿಯಾಲಬೈಲಿನಲ್ಲಿರುವ ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ನಡೆದ ಮಣಿಪಾಲ್ ಅಕಾಡಮಿ ಆಫ್ ಹೈಯರ್ ಎಜು ಕೇಶನ್‌ನ 25ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು. ಎರಡು ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ
ಹಾಗೂ ಅಂತಾರಾಷ್ಟ್ರೀಯ ಕಾರ್ಮಿಕ ಸಂಘ ಜಂಟಿಯಾಗಿ ವರದಿ ನೀಡಿ, ಸರಕಾರಗಳು ಜನರ ಆರೋಗ್ಯಕ್ಕಾಗಿ ಹೆಚ್ಚು ಹಣ ಮೀಸಲು ಇಡಬೇಕೆಂದು ಹೇಳಿವೆಯಲ್ಲದೆ, ಇದು ಆಯಾ ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿಗೊಳಿಸುತ್ತದೆ ಎಂದಿದೆ. ಆರ್ಥಿಕವಾಗಿ ಸಬಲರಾಗಿರುವ ದೇಶಗಳ ಅಭಿವೃದ್ಧಿಯ ಗುಟ್ಟು ಇದೇ ಆಗಿದ್ದು, ಅಮೆರಿಕ ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರು.
ಪದವಿ ಪಡೆದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಡೇವಿಡ್, ವೈದ್ಯಕೀಯ ಕ್ಷೇತ್ರ ಅತ್ಯುತ್ತಮ ಕ್ಷೇತ್ರಗಳಲ್ಲಿ ಒಂದಾಗಿದ್ದು, ಪದವಿ ಪಡೆದ ಬಳಿಕ ವೃತ್ತಿ ಧರ್ಮ ಮರೆಯಬಾರದು. ರೋಗಿಗಳ ಆರೈಕೆಯ ಸಂದರ್ಭ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕಲ್ಲದೆ ವೃತ್ತಿ ಧರ್ಮಕ್ಕೆ ಎಂದೂ ಅಪಚಾರ ಎಸಗುವ ಕೆಲಸ ಮಾಡಬಾರದು ಎಂದರು. ಈ ವೇಳೆ 610 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕುಲಸಚಿವ ಡಾ| ನಾರಾಯಣ ಸಭಾಹಿತ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕೆಎಂಸಿ, ಮಣಿಪಾಲದ ವಿದ್ಯಾರ್ಥಿನಿ ಡಾ| ಚಂದನಾ ಆಚಾರ್ಯ ಹಾಗೂ ಕೆಎಂಸಿ ಮಂಗಳೂರಿನ ವಿದ್ಯಾರ್ಥಿನಿ ಅಶ್ವಿನಿ ಎಂ.ಬಿ. ಇವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹ ಕುಲಪತಿ ಡಾ| ವಿ. ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಕುಲಪತಿ ಡಾ| ಎಚ್. ವಿನೋದ್ ಭಟ್ ಸಂಸ್ಥೆ ಬೆಳೆದು ಬಂದ ರೀತಿ ಹಾಗೂ ಸಾಧನೆಯ ಬಗ್ಗೆ ವಿವರಿಸಿದರು. ಡಾ| ಕಾರ್ತಿಕ್ ಶೆಟ್ಟಿ ಹಾಗೂ ಡಾ| ಅಶ್ವಿನ್ ಆರ್. ರೈ ಕಾರ್ಯಕ್ರಮ ನಿರೂಪಿಸಿದರು. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಪರೀಕ್ಷಾಂಗ ಕುಲಸಚಿವ ಡಾ| ವಿನೋದ್ ವಿ. ಥೋಮಸ್, ಸಹ ಕುಲಪತಿ ಡಾ| ಪಿ.ಎಲ್.ಎನ್.ಜಿ. ರಾವ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ| ಗೀತಾ ಮಯ್ಯ, ಸಹ ಕುಲಸಚಿವ (ಶೈಕ್ಷಣಿಕ) ಡಾ| ಪ್ರೀತಮ್ ಕುಮಾರ್, ಸಹ ಕುಲಪತಿಗಳಾದ ಡಾ| ಪೂರ್ಣಿಮಾ ಬಾಳಿಗಾ, ಡಾ| ಸಿ.ಎಸ್. ತಮ್ಮಯ್ಯ, ಡೀನ್ ಡಾ| ದಿಲೀಪ್ ಜಿ. ನಾಯಕ್ ಉಪಸ್ಥಿತರಿದ್ದರು.