Advertisement

ಹೆಲ್ತ್‌ಕಾರ್ಡ್‌ ಇನ್ನೂ ಸಿಕ್ಕಿಲ್ಲ, ಪಡಿತರ ಚೀಟಿ ಪಡೆದು ಚಿಕಿತ್ಸೆ

11:48 AM Dec 14, 2018 | Team Udayavani |

ಮೈಸೂರು: ರಾಜ್ಯಸರ್ಕಾರ ಹೊಸದಾಗಿ ಜಾರಿಗೆ ತಂದ ಆರೋಗ್ಯ ಕರ್ನಾಟಕ ಯೋಜನೆಯ ಹೆಲ್ತ್‌ಕಾರ್ಡ್‌ ನೀಡಿಕೆ ಪ್ರಕ್ರಿಯೆ ಹತ್ತು ತಿಂಗಳಾದರೂ ಪೈಲಟ್‌ ಪ್ರಾಜೆಕ್ಟ್ಗೆ ಆಯ್ಕೆ ಮಾಡಿಕೊಂಡ ತಿ.ನರಸೀಪುರ ತಾಲೂಕು ಬಿಟ್ಟು ಜಿಲ್ಲೆಯ ಇತರೆ ತಾಲೂಕು ಹಾಗೂ ಮೈಸೂರು ನಗರಕ್ಕೆ ವಿಸ್ತರಣೆಯಾಗಿಯೇ ಇಲ್ಲ.

Advertisement

ಈ ಹಿಂದೆ ಇದ್ದ ಯಶಸ್ವಿನಿ ಯೋಜನೆಯನ್ನು ರದ್ದುಪಡಿಸಿದ್ದ ರಾಜ್ಯಸರ್ಕಾರ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್‌ ಆರೋಗ್ಯ ಭಾಗ್ಯ ಯೋಜನೆ, ಆರ್‌ಎಸ್‌ಬಿವೈ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಹರೀಶ್‌ ಸಾಂತ್ವನ ಯೋಜನೆ, ಇಂದಿರಾ ಸುರಕ್ಷಾ ಸೇರಿದಂತೆ ಆರೋಗ್ಯ ಸಂಬಂಧಿ ಎಲ್ಲಾ ಯೋಜನೆಗಳನ್ನೂ ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನಗೊಳಿಸಿ,

2018ರ ಮಾರ್ಚ್‌ 2ರಂದು ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ವಾಸಿಸುತ್ತಿರುವ ಎಲ್ಲಾ ಜನರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವ ಆರೋಗ್ಯ ಕರ್ನಾಟಕ ಎಂಬ ನೂತನ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮೂಲಕ ಅನುಷ್ಠಾನಗೊಳಿಸಿ, ಸರ್ಕಾರದ ಆದೇಶದ ಮೇರೆಗೆ ಜಿಲ್ಲೆಯ ತಿ.ನರಸೀಪುರ ತಾಲೂಕನ್ನು ಪೈಲಟ್‌ ಪ್ರಾಜೆಕ್ಟ್ಗೆ ಆಯ್ಕೆ ಮಾಡಿಕೊಂಡು ಈವರೆಗೆ 17 ಸಾವಿರ ಹೆಲ್ತ್‌ಕಾರ್ಡ್‌ ವಿತರಿಸಲಾಗಿದೆ. 

ಅರ್ಹ ಫ‌ಲಾನುಭವಿಗಳು 10 ರೂ. ಪಾವತಿಸಿ ಈ ಹೆಲ್ತ್‌ಕಾರ್ಡ್‌ ಪಡೆದು ಜೀವಿತಾವಧಿವರೆಗೆ ಬಳಸಬಹುದಾಗಿದ್ದು, ಕಾರ್ಡ್‌ ಕಳೆದುಕೊಂಡರೆ 20 ರೂ. ಪಾವತಿಸಿ ನಕಲು ಕಾರ್ಡ್‌ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಡಿ 1516 ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅವಕಾಶವಿದ್ದು, ಮೂರು ಹಂತಗಳಲ್ಲಿ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತದೆ.

ಪ್ರಥಮ ಮತ್ತು ದ್ವಿತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡಲಿದ್ದು, ಗಂಭೀರ ಕಾಯಿಲೆ ಅಥವಾ ಅಪಘಾತ ಪ್ರಕರಣಗಳನ್ನು ಮೂರನೇ ಹಂತ ಎಂದು ಪರಿಗಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಬಹುದಾಗಿದೆ. ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಚಿಕಿತ್ಸೆ ದೊರೆಯಲಿದ್ದು, ಎಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ.30ರಷ್ಟು ಹಣವನ್ನು ಸರ್ಕಾರ ಭರಿಸಲಿದೆ.

Advertisement

ಐವರು ಸದಸ್ಯರ ಒಂದು ಕುಟುಂಬಕ್ಕೆ ನಿಗದಿತ ದ್ವಿತೀಯ ಹಂತದ ಚಿಕಿತ್ಸೆಗಾಗಿ ವಾರ್ಷಿಕ 30 ಸಾವಿರ ರೂ.ಗಳನ್ನು ಚಿಕಿತ್ಸಾ ವೆಚ್ಚವಾಗಿ ಭರಿಸಲಾಗುತ್ತದೆ. ನಿಗದಿತ ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲು ವಾರ್ಷಿಕ 1.5 ಲಕ್ಷ ರೂ.ಗಳವರೆಗೆ ವೆಚ್ಚವನ್ನು ಸರ್ಕಾರ ಭರಿಸಲಿದೆ. ತುರ್ತು ಚಿಕಿತ್ಸಾ ಸಂದರ್ಭದಲ್ಲಿ ಈ ಮಿತಿ ಪೂರ್ಣಗೊಂಡು ಇನ್ನೂ ಹೆಚ್ಚಿನ ಪಡೆಯಬೇಕಾದಲ್ಲಿ 50 ಸಾವಿರ ರೂ. ನೆರವು ದೊರೆಯಲಿದೆ. 

ಜೂನ್‌ ತಿಂಗಳಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ ಕೇವಲ 1985 ರೋಗಿಗಳು ಮಾತ್ರ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಯುಷ್ಮಾನ್‌ ಭಾರತ ಯೋಜನೆ ಜಾರಿಗೆ ಬಂದಿರುವುದರಿಂದ ರೋಗಿಗಳಿಗೆ ಹೆಚ್ಚಿನ ಪ್ರಯೋಜನವೇ ಸಿಗಲಿದ್ದು, ಈ ಯೋಜನೆಯಡಿ 5 ಲಕ್ಷ ರೂ.ಗಳವರೆಗೆ ಚಿಕಿತ್ಸಾ ವೆಚ್ಚ ಭರಿಸಲು ಅವಕಾಶವಿದೆ.

ಸದ್ಯ ಮಂಡ್ಯದ ವೈದ್ಯಕೀಯ ಕಾಲೇಜು ಆಸ್ಪತ್ರೆ, ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆ ಸೇರಿದಂತೆ ರಾಜ್ಯದಲ್ಲಿ 11 ಆಸ್ಪತ್ರೆಗಳನ್ನಷ್ಟೇ ಈ ಯೋಜನೆಗೆ ಗುರುತಿಸಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳ ಮೂಲಕ ಹೆಲ್ತ್‌ಕಾರ್ಡ್‌ ನೀಡುವ ಕೆಲಸವನ್ನು ಮುಂದಿನ ಒಂದು ತಿಂಗಳಲ್ಲಿ ಆರಂಭಿಸುವುದಾಗಿ ಸುವರ್ಣ ಆರೋಗ್ಯ ಕರ್ನಾಟಕ ಟ್ರಸ್ಟ್‌ನ ಪ್ರಾದೇಶಿಕ ಸಂಯೋಜಕ ಡಾ.ಪ್ರಸಾದ್‌, ಉದಯವಾಣಿಗೆ ತಿಳಿಸಿದರು.

ಹೆಲ್ತ್‌ಕಾರ್ಡ್‌ ವಿತರಣೆ ವಿಳಂಬವಾಗುತ್ತಿರುವುದರಿಂದ ಆಧಾರ್‌ ನೊಂದಿಗೆ ಪಡಿತರ ಚೀಟಿಯ ಫೋಟೋ ಕಾಪಿ ನೀಡಿದರೆ ಸರ್ಕಾರಿ ಅಥವಾ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ತಿಳಿಸಿದ್ದಾರೆ.

ಆಯುಷ್ಮಾನ್‌ ಭಾರತ ಯೋಜನೆಯಡಿ ಆರೋಗ್ಯ ಕರ್ನಾಟಕವನ್ನು ವಿಲೀನಗೊಳಿಸುವ ಸಂಬಂಧ ಸಚಿವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ.
-ಡಾ.ಬಸವರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಆಯುಷ್ಮಾನ್‌ ಭಾರತ ಯೋಜನೆಯಡಿ ಆರೋಗ್ಯ ಕರ್ನಾಟಕವನ್ನು ಈಗಾಗಲೇ ವಿಲೀನಗೊಳಿಸಲಾಗಿದೆ. ವಿಲೀನ ಆಗಿರುವುದರಿಂದ ಫ‌ಲಾನುಭವಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಬದಲಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಲ್ತ್‌ ಕಾರ್ಡ್‌ ವಿತರಣೆ ಮಾಡಬೇಕಿದ್ದು, ಮುಂದಿನ ಒಂದು ತಿಂಗಳಲ್ಲಿ ಎಲ್ಲಾ ಕಡೆಗಳಲ್ಲಿ ಕಾರ್ಡ್‌ ನೀಡಲಾಗುವುದು.
-ಡಾ.ಪ್ರಸಾದ್‌, ಪ್ರಾದೇಶಿಕ ಸಂಯೋಜಕರು, ಸುವರ್ಣ ಆರೋಗ್ಯ ಕರ್ನಾಟಕ ಟ್ರಸ್ಟ್‌.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next