Advertisement

Kadaba: ಬಿಸಿಲ ಝಳಕ್ಕೆ ಬಲಿಯಾಯ್ತೇ ಮಕರ?

08:37 AM Apr 13, 2024 | Team Udayavani |

ಕಡಬ/ಸುಬ್ರಹ್ಮಣ್ಯ: ಕುಮಾರಧಾರಾ ನದಿಯ ಪಂಜ – ಕಡಬ ಸಂಪರ್ಕ ರಸ್ತೆಯಲ್ಲಿ ಸಿಗುವ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಮೊಸಳೆಯ ಮೃತದೇಹ ಪತ್ತೆಯಾಗಿದೆ.

Advertisement

ಶುಕ್ರವಾರ ನದಿಯ ಒಂದು ಬದಿಯ ನೀರಿನಲ್ಲಿ ಅಂದಾಜು 1.5 – 2 ವರ್ಷದ ಮೊಸಳೆಯ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅದು ಗುರುವಾರ ಹಗಲು ಆಥವಾ ರಾತ್ರಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ಮೊಸಳೆಯ ಜೀವಿತಾವಧಿ 50ರಿಂದ 60 ವರ್ಷ. ಆದರೆ ಇಲ್ಲಿ ಮೃತಪಟ್ಟಿರುವುದು ಕೇವಲ 2 ವರ್ಷ ಒಳಗಿನದ್ದು. ನದಿಯಲ್ಲಿ ನೀರಿನ ಹರಿವು ಕುಂಠಿತಗೊಂಡಿದ್ದು, ಅಲ್ಲಲ್ಲಿ ಸಂಗ್ರಹವಾಗಿರುವ ನೀರು ಸೂರ್ಯನ ಪ್ರಖರತೆಗೆ ಬಿಸಿಯಾಗಿ ಸಾವನ್ನಪ್ಪಿರಬಹುದೇ ಅಥವಾ ನೀರು ಕಲುಷಿತಗೊಂಡು ಮೃತಪಟ್ಟಿರಬಹುದೇ ಎಂಬ ಶಂಕೆಯನ್ನು ಜನಸಾಮಾನ್ಯ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಪಂಜ ವಲಯ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಅಗಮಿಸಿ ಮೃತದೇಹವನ್ನು ತೆರವು ಮಾಡಿದ್ದಾರೆ.

ದೇವರ ಮೀನುಗಳ ರಕ್ಷಣೆಗೆ ಆಗ್ರಹ

Advertisement

ಕೆಲವರು ಮೀನು ಹಿಡಿಯಲು ರಾಸಾಯನಿಕ ಮಿಶ್ರಿತ ದ್ರಾವಣವನ್ನು ನೀರಿಗೆ ಹಾಕುತ್ತಿರುವ ಆರೋಪವೂ ಇದ್ದು ಅದರಿಂದ ಅಸುನೀಗಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಸಮೀಪದಲ್ಲೇ ನಾಕೂರು ಗಯವಿದ್ದು ಅಲ್ಲಿ ಮಹಷಿರ್‌ ಜಾತಿಯ ದೇವರ ಮೀನುಗಳ ಸಮೂಹವೇ ಇದೆ. ಅವುಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಿಖರ ಕಾರಣ ಇಲ್ಲ

ಮೊಸಳೆಯ ಮೃತದೇಹ ಪತ್ತೆಯಾದಲ್ಲಿ ಮೀನುಗಳು ಕೂಡ ಇದ್ದು ಅವುಗಳಿಗೆ ಏನೂ ಆಗಿಲ್ಲ. ಅಲ್ಲದೆ ಮೃತದೇಹ ಸಿಕ್ಕಿರುವ ಸ್ಥಳದಲ್ಲಿ ನೀರು ಹರಿಯುತ್ತಿದೆ. ಇನ್ನೊಂದು ಮೊಸಳೆಯ ಜತೆಗಿನ ಕಾಳಗದಲ್ಲಿ ಸಾವನ್ನಪ್ಪುವ ಸಾಧ್ಯತೆ ಇದ್ದರೂ ದೇಹದಲ್ಲಿ ಗಾಯ ಕಂಡುಬಂದಿಲ್ಲ. ಮೊಸಳೆಯ ಮರಣೋತ್ತರ ಪರೀಕ್ಷೆಯನ್ನು ವೈದ್ಯರು ನಡೆಸಿ ವರದಿ ನೀಡಲಿದ್ದು, ಬಳಿಕವೇ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next