Advertisement

ಇಂದಿಗೂ ಹಳ್ಳಿಗಳಲ್ಲಿ ಹೆಚ್ಚು ಬಳಕೆಯಲ್ಲಿರುವ “ಚೈ”ಬಾಣಂತಿಯರ ಆರೋಗ್ಯಕ್ಕೆ ಸಿದ್ಧೌಷಧ

07:41 PM Feb 15, 2021 | Team Udayavani |

ಚೈ ಎನ್ನುವುದು ಬಹು ಹಿಂದಿನ ಕಾಲದಿಂದಲೂ ಬಾಣಂತಿಯರಿಗೆ ನೀಡಲಾಗುವ ಒಂದು ಅತ್ಯುತ್ತಮ ಔಷಧಿಯಾಗಿದೆ. ಮಕ್ಕಳಾಗಿ ಒಂದು ತಿಂಗಳ ನಂತರ ನೀಡಲಾಗುವ ಈ ಔಷಧಿಯು ಬಾಣಂತಿಯರನ್ನು ಬಾಧಿಸುವ ಶೀತ ಹಾಗೂ ಇನ್ನಿತರ ಕಾಯಿಲೆಗಳಿಗೆ ರಾಮಬಾಣವಾಗಿದೆ. ಅದರಲ್ಲೂ ಚೈರೋಗ ಎಂದು ಕರೆಯಲ್ಪಡುವ ಕಾಯಿಲೆ ಬಾರದಂತೆ ತಡೆಗಟ್ಟಲು ಇದು ಸಿದ್ಧೌಷದಿ. ಯಾವುದೇ ರೀತಿಯಾದ ರಾಸಾಯನಿಕ ವಸ್ತುಗಳನ್ನು ಬಳಸದೆ ನೈಸರ್ಗಿಕವಾಗಿ ಹಾಗೂ ಅತ್ಯಂತ ಸುಲಭವಾಗಿ ಸಿಗಬಹುದಾದ ವಸ್ತುಗಳನ್ನು ಬಳಸಿ ಈ ಔಷಧವನ್ನು ತಯಾರಿಸಲಾಗುತ್ತದೆ. ಈ ಔಷಧವನ್ನು ತಯಾರಿಸುವಾಗ ಶುಂಠಿಯ ರಸವನ್ನು ತೆಗೆದು ಜೊತೆಗೆ ಕಾಳುಮೆಣಸು, ತೆಂಗಿನಕಾಯಿಯರಸ, ಬೆಲ್ಲ, ಮೆಂತ್ಯ, ಅರಸಿನ ಮುಂತಾದ ನೈಸರ್ಗಿಕ ವಸ್ತುಗಳನ್ನು ಸೇರಿಸಿ ಅತ್ಯಂತ ವ್ಯವಸ್ಥಿತ ಕ್ರಮದಲ್ಲಿ ಸತತ ಮೂರರಿಂದ ನಾಲ್ಕು ಗಂಟೆಗಳ ಕಾಲ ಬೇಯಿಸಲಾಗುತ್ತದೆ.

Advertisement

ಸಹಜವಾಗಿ ಹೆರಿಗೆಯಾದ ಸಂದರ್ಭದಲ್ಲಿ ಮಹಿಳೆಯರಿಗೆ ಜೀರ್ಣಶಕ್ತಿ ಕಡಿಮೆ ಇರುವುದರಿಂದ ತೆಂಗಿನಕಾಯಿ ಹಾಗೂ ಶುಂಠಿಯ ರಸವನ್ನು ಮಾತ್ರ ಬಳಸಲಾಗುತ್ತದೆ. ಇಲ್ಲಿ ಬಳಸಲಾಗಿರುವ ಔಷಧೀಯ ಗುಣಗಳುಳ್ಳ ವಸ್ತುಗಳಲ್ಲಿನ ನೀರಿನಾಂಶ ಹೋಗುವವರೆಗೆ ಬೇಯಿಸಲಾಗುತ್ತದೆ. ನಂತರ ಬಾಳೆ ಎಲೆಯ ಮೇಲೆ ತಯಾರಾದ ಔಷಧಿಯನ್ನು ಹಾಕಿ ತಂಪು ಮಾಡಲಾಗುತ್ತದೆ. ಹಸಿಶುಂಠಿಯನ್ನು ಬಳಸುವಾಗ ಆ ಶುಂಠಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಅದನ್ನು ನೀರಿನಲ್ಲಿ ನೆನೆಸಲಾಗುತ್ತದೆ. ಕಾರಣ, ನೀರಿನಲ್ಲಿ ಶುಂಠಿಯನ್ನು ನೆನೆಸಿಟ್ಟಾಗ ಅದರಲ್ಲಿರುವ ಸುಣ್ಣದ ಅಂಶ ಬೇರ್ಪಡಿಸುವ ಉದ್ದೇಶದಿಂದ.

ಚೈ ವಿಧಗಳು

ಚೈ ಔಷಧಿಯಲ್ಲಿ ಎರಡು ವಿಧಗಳನ್ನು ಕಾಣಬಹುದಾಗಿದೆ

ಬೆಳ್ಳುಳ್ಳಿ ಚೈ

Advertisement

ಈರುಳ್ಳಿ ಚೈ

ಬೆಳ್ಳುಳ್ಳಿ ಚೈನಲ್ಲಿ  ಔಷಧೀಯ ವಸ್ತುಗಳ ಜೊತೆ ಬೆಳ್ಳುಳ್ಳಿಯನ್ನು ಸೇರಿಸಲಾಗುತ್ತದೆ.

ಈರುಳ್ಳಿ ಚೈನಲ್ಲಿ ಈರುಳ್ಳಿಯನ್ನು ಬಳಸಲಾಗುತ್ತದೆ. ಆದರೆ ಈರುಳ್ಳಿ ಬಳಸುವುದರಿಂದ ಔಷಧಿ ಬೇಗ ಹಾಳಾಗುವ ಸಾಧ್ಯತೆಗಳಿರುವುದರಿಂದ ಕಡಿಮೆ ಜನರು ಈರುಳ್ಳಿಯನ್ನು ಬಳಸುತ್ತಾರೆ. ಈ ಸಂದರ್ಭದಲ್ಲಿ ಬಾಣಂತಿಯರು ಅತ್ಯಂತ ಸೂಕ್ಷ್ಮ ಕಾಯದವರಾಗಿರುವುದರಿಂದ ತಮ್ಮ ಬಾಣಂತನದ ಕಾಲದಲ್ಲಿ ಶೀತ, ಜ್ವರ ಹಾಗೂ ಇನ್ನಿತರ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಹಿಂದಿನ ಕಾಲದಲ್ಲಿ ಹಿರಿಯರು ಈ ಔಷಧಿಯನ್ನು ಎಲ್ಲ ಬಾಣಂತಿಯರಿಗೂ ನಾಲ್ಕರಿಂದ ಐದು ಚಮಚ ಪ್ರತಿದಿನ ನೀಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಆದರೆ ಆಧುನಿಕ ಕಾಲದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಮಾತ್ರೆ ಔಷಧಿಗಳನ್ನು ನೀಡಲಾಗುತ್ತದೆ. ಆದರೆ ಹಲವಾರು ಜನರು ಮಾತ್ರೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಈ ವಿಧವಾದ ಔಷಧಿಯನ್ನು ಬಳಸುತ್ತಿದ್ದಾರೆ.

ಯಾವುದೇ ವಿಧವಾದ ಅಡ್ಡಪರಿಣಾಮಗಳಿಲ್ಲದೆ  ನೈಸರ್ಗಿಕ ಹಾಗೂ ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಔಷಧಿ ಇದಾದ್ದರಿಂದ ಇದನ್ನು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಮಾಡಲಾಗುತ್ತದೆ. ಕೆಲವು ಬಾಣಂತಿಯರು ಹೆರಿಗೆಯ ಬಳಿಕ ಎದುರಿಸುವ ಕಾಯಿಲೆಗಳಷ್ಟೇ ಅಲ್ಲದೆ ಅವರು ಎದುರಿಸುವ ಎದೆಹಾಲಿನ ಸಮಸ್ಯೆಯ ಪರಿಹಾರಕ್ಕೂ ಕೂಡ ಇದು ಪರಿಹಾರವಾಗಿದೆ. ಇದರ ಸೇವನೆಯಿಂದ ತಾಯಿಯಲ್ಲಿ ಎದೆ ಹಾಲಿನ ಪ್ರಮಾಣ ವೃದ್ಧಿಯಾಗಿ ಆ ಮೂಲಕ ಮಗುವಿನ ಆರೋಗ್ಯದ ಬೆಳವಣಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು ದೊರೆತು ಮಕ್ಕಳು ಅಪೌಷ್ಟಿಕತೆಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವಲ್ಲಿ ಈ ಔಷಧಿಯು ಸಹಾಯವಾಗುತ್ತದೆ. ಇಂದಿಗೂ ಕೂಡ ಹಲವಾರು ಹಳ್ಳಿಗಳಲ್ಲಿ ಈ ವಿಧವಾದ ವಿಭಿನ್ನ ಔಷಧೀಯ ಕ್ರಮವನ್ನು ಅತಿ ಹೆಚ್ಚು ಬಳಸುವುದನ್ನು ಕಾಣಬಹುದಾಗಿದೆ.

ಇದು ಬಾಣಂತಿಯರಿಗೆಂದು ಮಾಡುವ ಔಷಧಿ ಎನಿಸಿಕೊಂಡಿದ್ದರೂ ಅವರಿಗೆ ಮಾತ್ರ ಇದು ಸೀಮಿತವಾದ ಔಷಧಿ ಅಲ್ಲ. ಬದಲಾಗಿ ಯಾರು ಬೇಕಾದರೂ ಯಾವುದೇ ವಯೋಮಿತಿಯವರು ಬೇಕಾದರೂ ಇದನ್ನು ಸೇವಿಸಬಹುದಾಗಿದೆ. ಇದು ಮಳೆಗಾಲದ ಸಂದರ್ಭದಲ್ಲಿ ಎದುರಾಗುವ ಶೀತ, ಕೆಮ್ಮು, ಜ್ವರ ಸೇರಿದಂತೆ ಹಲವಾರು ಕಾಯಿಲೆಗಳ ಪರಿಹಾರಕ್ಕೆ ಸಿದ್ಧ ಔಷಧಿಯಾಗಿದೆ. ನಿಗದಿತ ಪ್ರಮಾಣದಲ್ಲಿ ನೈಸರ್ಗಿಕ ಔಷಧೀಯ ವಸ್ತುಗಳಿಂದ ತಯಾರಿಸಲಾಗುವ ಈ ಔಷಧಿಯನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬಹುದು. ಅತಿಯಾಗಿ ತಿಂದರೆ ತೀವ್ರತರವಾದ ಯಾವುದೇ ಸಮಸ್ಯೆಗಳು ಬಾಧಿಸುವುದಿಲ್ಲ. ಆದರೆ ಒಂದಷ್ಟು ಖಾರದ ಅಂಶ ಇರುವುದರಿಂದ ಹೊಟ್ಟೆ ಉರಿಯಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ನಿಗದಿತ ಪ್ರಮಾಣದಲ್ಲಿ ತಿನ್ನುವುದರಿಂದ ಆರೋಗ್ಯಪೂರ್ಣವಾದ ಶರೀರವನ್ನು ಹೊಂದಲು ಈ ಔಷಧಿಯು ಬಹಳಷ್ಟು ಉಪಕಾರಿಯಾಗಿ ಇರುತ್ತದೆ.

ಆದರ್ಶ ಕೆ.ಜಿ

 

Advertisement

Udayavani is now on Telegram. Click here to join our channel and stay updated with the latest news.

Next