Advertisement
ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳು ಶೇ.25ರಷ್ಟು ಸಮೀಕ್ಷಾ ಸಾಧನೆ ತೋರಿಲ್ಲ. ಆದರೆ, ಕೇವಲ ಐದು ಜಿಲ್ಲೆಗಳು ಮಾತ್ರ ಶೇ.50ಕ್ಕಿಂತ ಹೆಚ್ಚಿನ ಸಾಧನೆ ತೋರಿವೆ. ಇದರಲ್ಲಿ ಧಾರವಾಡ ಜಿಲ್ಲೆ ಮಾತ್ರ ಅತ್ಯಧಿಕ ಸಾಧನೆ ತೋರುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಕೋವಿಡ್-19 ಅಬ್ಬರದಲ್ಲಿ ಇತರೆ ವ್ಯಾದಿ, ಆರೋಗ್ಯ ಕಾಳಜಿ ಹಾಗೂ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರದೇ ಆಯಾ ಜಿಲ್ಲೆಗಳಲ್ಲಿ ಈ ಕುರಿತು ಸಮೀಕ್ಷೆ, ಅಗತ್ಯ ಮಾಹಿತಿ ಸಂಗ್ರಹಿಸುವುದಲ್ಲದೇ, ಫಾಲೋಅಪ್ ಮಾಡುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಇನ್ನಿತರ ಇಲಾಖೆ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿದ್ದು, ಈ ತಂಡ ಮನೆ-ಮನೆಗೆ ತೆರಳಿ ಆರೋಗ್ಯ ಕುರಿತು ಮಾಹಿತಿ ಸಂಗ್ರಹಿಸಲಿದೆ.
Related Articles
Advertisement
ಧಾರವಾಡ ಟಾಪ್: ಕೋವಿಡ್-19 ಹೊರತಾದ ಇತರೆ ಆರೋಗ್ಯ ಸಮಸ್ಯೆ-ಸೌಲಭ್ಯಗಳ ಕುರಿತಾಗಿ ಕೈಗೊಂಡ ಸಮೀಕ್ಷೆಯಲ್ಲಿ ರಾಜ್ಯದ ಐದು ಜಿಲ್ಲೆಗಳು ಟಾಪ್ ಐದರ ಸಾಧನೆ ತೋರಿವೆ. ಧಾರವಾಡ ಜಿಲ್ಲೆಯಲ್ಲಿ ಸುಮಾರು 4,71,567 ಕುಟುಂಬಗಳಿದ್ದು, ಇದರಲ್ಲಿ 3,43,682 ಕುಟುಂಬಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಹಿರಿಯ ನಾಗರಿಕರು, ವಿವಿಧ ಆರೋಗ್ಯ ಸಮಸ್ಯೆ ಇದ್ದವರು, ಬಾಣಂತಿಯರು, ಗರ್ಭಿಣಿಯರು, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಕುರಿತಾಗಿ ಮಾಹಿತಿ ಸಂಗ್ರಹ ಹಾಗೂ ಫಾಲೊಅಪ್ ಕೈಗೊಳ್ಳಲಾಗಿದ್ದು, ಒಟ್ಟಾರೆ ಶೇ.72.88ರಷ್ಟು ಸಾಧನೆ ತೋರಲಾಗಿದೆ. ಬಾಗಲಕೋಟೆ ಜಿಲ್ಲೆ ಶೇ.69.88, ತುಮಕೂರು ಶೇ.56.75, ಕೊಪ್ಪಳ ಶೇ.54.31, ಚಿಕ್ಕಮಗಳೂರು ಶೇ.54.20ರಷ್ಟು ಸಾಧನೆ ತೋರಿವೆ. ಹಾಸನ ಜಿಲ್ಲೆ ಶೇ.44.77ರಷ್ಟು ಸಾಧನೆ ತೋರಿದ್ದರೆ ಉಳಿದ ಜಿಲ್ಲೆಗಳು ಶೇ.0.34ರಿಂದ ಶೇ.34.16 ಒಳಗಿನ ಸಮೀಕ್ಷಾ ಸಾಧನೆ ತೋರಿವೆ.
ಜಿಲ್ಲಾಧಿಕಾರಿ ವಿಶೇಷ ಮುತುವರ್ಜಿ : ಕೋವಿಡ್-19 ಹೊರತಾದ ಇತರೆ ವ್ಯಾದಿಗಳು, ಆರೋಗ್ಯ ಸೌಲಭ್ಯ ಹಾಗೂ ಸಮಸ್ಯೆಗಳ ಕುರಿತಾಗಿ ಸಮೀಕ್ಷೆ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ವಿಶೇಷ ಮುತುವರ್ಜಿ ವಹಿಸಿದ್ದಲ್ಲದೆ, ಸಮೀಕ್ಷೆಗೆ ನಿಯೋಜಿಸಿದ್ದ ತಂಡಗಳು ಕೆಲವೊಂದು ಅಡ್ಡಿ ಆತಂಕಗಳನ್ನು ಲೆಕ್ಕಿಸದೆ ಚುರುಕಿನ ಕಾರ್ಯ ನಿರ್ವಹಿಸಿದ್ದರಿಂದ ರಾಜ್ಯದಲ್ಲಿಯೇ ಉತ್ತಮ ಸಾಧನೆ ಸಾಧ್ಯವಾಗಿದೆ. ಏಪ್ರಿಲ್ 16ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಜಿಲ್ಲೆಯ ಪ್ರತಿ ಮನೆಗೂ ತೆರಳಿ ಆರೋಗ್ಯ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಿದ್ದರು. ಜಿಲ್ಲೆಯಲ್ಲಿ ಸುಮಾರು 1,025 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯಕ್ಕೆ ಮುಂದಾಗುವಂತೆ ಸೂಚಿಸಲಾಗಿತ್ತು. ಧಾರವಾಡ ಜಿಲ್ಲೆಯಲ್ಲಿ ಸುಮಾರು 196 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆಯ ಪೌಷ್ಟಿಕ ಪುನರ್ವಸತಿ ಕೇಂದ್ರದಲ್ಲಿ ಅವರನ್ನು ದಾಖಲಿಕೊಂಡು ಅವರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಅದೇ ರೀತಿ ಜಿಲ್ಲೆಯಲ್ಲಿ ಸುಮಾರು 171 ಕ್ಷಯ ರೋಗಿಗಳು ಇದ್ದು, ಅವರ ಚಿಕಿತ್ಸೆಗೆ ನಿರಂತರ ಸಂಪರ್ಕಕ್ಕೆ ತಿಳಿಸಲಾಗಿತ್ತು. ಜಿಲ್ಲೆಯಲ್ಲಿ 91 ಕುಷ್ಠರೋಗ ಪೀಡಿತರು ಇದ್ದು ಅವರಿಗೆ ಹಾಗೂ ಎಚ್‌ಐವಿ, ಏಡ್ಸ್ ಪೀಡಿತರಿಗೆ ಅಗತ್ಯ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು. ಮಧುಮೇಹ ಪೀಡಿತರು, ಅಧಿಕರಕ್ತದೊತ್ತಡ, ಕ್ಯಾನ್ಸರ್ ಪೀಡಿತರಿಗೆ ಒಂದು ತಿಂಗಳ ಔಷಧಿ ನೀಡಿಕೆಗೆ ಸೂಚಿಸಲಾಗಿತ್ತು. ಜಿಲ್ಲೆಯಲ್ಲಿ 125 ಜನ ಹಿಮೋಫಿಲಿಯಾ, 56 ಜನರು ತಲಸ್ಸಿಮಿಯಾ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರಿಗೆ ಅಗತ್ಯ ಚಿಕಿತ್ಸೆಗೆ ಸೂಚಿಸಲಾಗಿತ್ತು. ಬಾಣಂತಿಯರು, ಗರ್ಭಿಣಿಯರಿಗೆ, ಮಕ್ಕಳಿಗೆ ಸೌಲಭ್ಯ ಒದಗಿಸಲು ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಗಿತ್ತು.