Advertisement

ನಾಳೆಯಿಂದ ಆರೋಗ್ಯ ಸರ್ವೇ

04:43 PM Apr 14, 2020 | Team Udayavani |

ಹಾವೇರಿ: ಜನರ ಆರೋಗ್ಯದ ಸ್ಥಿತಿಗತಿಗಳ ಕುರಿತು ವೈಜ್ಞಾನಿಕ ತಪಾಸಣೆ ಮೂಲಕ ಮಾಹಿತಿ ಸಂಗ್ರಹಿಸಲು ಏ. 15ರಿಂದ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಕಾರ್ಯ ಆರಂಭಿಸಲಾಗುವುದು ಎಂದು ಜಿಪಂ ಸಿಇಒ ರಮೇಶ ದೇಸಾಯಿ ತಿಳಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ತಹಶೀಲ್ದಾರ್‌ಗಳು, ತಾಪಂ ಇಒಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮಗಳಲ್ಲಿ ನಡೆಯುವ ಆರೋಗ್ಯ ಶಿಬಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಮೀಕ್ಷಾ ತಂಡಕ್ಕೆ ಅಗತ್ಯ ತರಬೇತಿ ನೀಡಬೇಕು. ಸೋಮವಾರ ಹಾಗೂ ಮಂಗಳವಾರದೊಳಗೆ ತಾಲೂಕಾವಾರು ಸಭೆ ನಡೆಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವಾರು ತಪಾಸಣೆಯ ಯೋಜನೆ
ಸಿದ್ಧಪಡಿಸಿ ಏ. 15ರಿಂದ ಅಧಿಕೃತವಾಗಿ ಸಮೀಕ್ಷೆ ಕಾರ್ಯವನ್ನು ಕಡ್ಡಾಯವಾಗಿ ಆರಂಭಿಸಬೇಕು ಎಂದು ನಿರ್ದೇಶನ ನೀಡಿದರು.

ಆಶಾ, ಅಂಗನವಾಡಿ, ಕಿರಿಯ ಆರೋಗ್ಯ ಸಹಾಯಕರು ಒಳಗೊಂಡ ಮೂರು ಜನರ ತಂಡ ರಚಿಸಿ ಪ್ರತಿ ತಂಡಕ್ಕೆ 50 ಮನೆಗಳಂತೆ ಹಂಚಿಕೆ ಮಾಡಿ ತಪಾಸಣೆ ಆರಂಭಿಸಬೇಕು. ಪ್ರತಿ ಮನೆಯ ಪ್ರತಿ ವ್ಯಕ್ತಿಯ ಮಾಹಿತಿ ಪಡೆಯಬೇಕು. ದೊಡ್ಡ ಗ್ರಾಮಗಳಾದರೆ ಎರಡು ದಿನ ತಪಾಸಣೆ ನಡೆಸಬೇಕು. ಈ ತಂಡಗಳು ಬೆಳಗ್ಗೆ ಸಂಗ್ರಹಿಸಿದ ಮಾಹಿತಿ ಅನುಸಾರ ಮಧ್ಯಾಹ್ನ ಆಯಾ ಗ್ರಾಮದಲ್ಲೇ ಸರ್ಕಾರಿ ಶಾಲೆ ಅಥವಾ ಕಟ್ಟಡಗಳಲ್ಲಿ ಹೆಲ್ತ್‌ ಕ್ಯಾಂಪ್‌ ನಡೆಸಿ ಅಗತ್ಯವಿರುವ ಜನರಿಗೆ ಚಿಕಿತ್ಸೆ ನೀಡುವಂತಾಗಬೇಕು. ಕೋವಿಡ್‌ ಲಕ್ಷಣಗಳು ಕಂಡುಬಂದರೆ ಮಾದರಿ ಸಂಗ್ರಹಕ್ಕೆ ತಾಲೂಕಾ ಆರೋಗ್ಯ ಕೇಂದ್ರಗಳಿಗೆ ವಾಹನಗಳ ಮೂಲಕ ಕಳುಹಿಸಿಕೊಡಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾ ಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಯಾ ಕೇಂದ್ರ ವ್ಯಾಪ್ತಿಯ ಸಮೀಕ್ಷೆಯ ಮುಖ್ಯಸ್ಥರಾಗಿರುತ್ತಾರೆ. ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿ ಮಧ್ಯಾಹ್ನದ ನಂತರ ಸಮೀಕ್ಷೆಗೆ ಆಯ್ಕೆ ಮಾಡಿಕೊಂಡ ಗ್ರಾಮಕ್ಕೆ ತೆರಳಿ ಆರೋಗ್ಯ ಶಿಬಿರಗಳಲ್ಲಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು. ಮನೆ ಮನೆ ಸಮೀಕ್ಷೆ ನಡೆಸುವ ಕಾರ್ಯಕರ್ತೆಯರಿಗೆ ಸುರಕ್ಷಾ ಸಾಧನ, ವಾಹನ, ಊಟದ ವ್ಯವಸ್ಥೆ, ಆಯಾ ಗ್ರಾಮಗಳಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ನಡೆಸಿ ತಪಾಸಣೆ ನಡೆಸಲು ಅಗತ್ಯವಾದ ಸರ್ಕಾರಿ ಕಟ್ಟಡ ಅಥವಾ ಶಾಲೆಗಳನ್ನು ಗುರುತಿಸಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ತಹಶೀಲ್ದಾರ್‌, ತಾಪಂ ಇಒಗಳು ಉಸ್ತುವಾರಿ ವಹಿಸಲು ಸೂಚನೆ ನೀಡಿದರು.

ಡಿಎಚ್‌ಒ ಡಾ| ರಾಜೇಂದ್ರ ದೊಡ್ಡಮನಿ, ಆರ್‌ಸಿಎಚ್‌ ಅ ಧಿಕಾರಿ ಡಾ| ಜಯಾನಂದ, ಹಾವೇರಿ ಎಸಿ ಡಾ| ದಿಲೀಷ್‌, ಸವಣೂರು ಎಸಿ ಅನ್ನಪೂರ್ಣಾ ಮುದಕಮ್ಮನವರ ಮೊದಲಾದವರಿದ್ದರು.

Advertisement

ದಿನಕ್ಕೊಂದು ಗ್ರಾಮ
ಜಿಲ್ಲೆಯಲ್ಲಿ 17 ಲಕ್ಷ ಜನಸಂಖ್ಯೆ ಇದೆ, 708 ಗ್ರಾಮಗಳಿವೆ, 67 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಪೈಕಿ 47 ಕೇಂದ್ರಗಳಲ್ಲಿ ಎಂಬಿಬಿಎಸ್‌ ವೈದ್ಯರು, 20 ಕೇಂದ್ರದಲ್ಲಿ ಆಯುಷ್‌ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪ್ರತಿದಿನ ಒಂದೊಂದು ಗ್ರಾಮ ಆಯ್ಕೆ ಮಾಡಿ ತಪಾಸಣೆ ಆರಂಭಿಸಬೇಕು. ಇದರಿಂದ ಪ್ರತಿದಿನ ಜಿಲ್ಲೆಯ 67 ಹಳ್ಳಿಗಳ ಸರ್ವೇ ಕಾರ್ಯ ಪೂರ್ಣಗೊಳ್ಳುತ್ತದೆ. 15 ದಿನದೊಳಗಾಗಿ ಎಲ್ಲ ಗ್ರಾಮಗಳ ಸರ್ವೇ ಪೂರ್ಣಗೊಳಿಸಬಹುದು ಎಂದು ಜಿಪಂ ಸಿಇಒ ಸಲಹೆ ನೀಡಿದರು.

ಸಾಮಾನ್ಯ ಆರೋಗ್ಯ ತಪಾಸಣೆ ವೇಳೆಯಲ್ಲಿ ಜನರಿಗೆ ಇತರ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಆಯಾ ಗ್ರಾಮದಲ್ಲೇ ಹೆಲ್ತ್‌ಕ್ಯಾಂಪ್‌ ನಡೆಸಿ ಚಿಕಿತ್ಸೆ ನೀಡಬೇಕು. ಸರ್ಕಾರಿ ವೈದ್ಯರ ಜೊತೆಗೆ ಖಾಸಗಿ ವೈದ್ಯರ ನೆರವನ್ನು ಪಡೆದುಕೊಳ್ಳಬೇಕು.
ರಮೇಶ ದೇಸಾಯಿ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next