Advertisement
ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮವಾಗಿರುತ್ತದೆ. ಅವರಿಗೆ ಸ್ವಲ್ಪ ವ್ಯತ್ಯಾಸವಾದರೂ ಸಾಕು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೇ, ತಮಗೆ ಏನಾಗುತ್ತಿದೆ ಎಂಬುದನ್ನ ಹೇಳಲು ಅವರಿಗೆ ತಿಳಿಯುವುದಿಲ್ಲ. ಹಾಗಾಗಿ ನಿಮ್ಮ ಮಕ್ಕಳಲ್ಲಿ ಆರೋಗ್ಯದ ವ್ಯತ್ಯಾಸದ ಬಗ್ಗೆ ಗಮನಿಸಿ.
Related Articles
Advertisement
ಶಾಲೆಗೆ ಹೋಗುವ ಅವಸರದಲ್ಲಿ ಆಹಾರವನ್ನು ಸರಿಯಾಗಿ ಸೇವಿಸದೆ ಇರುವುದು. ಇದರಿಂದಾಗಿ ಪೌಷ್ಟಿಕಾಂಶಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಆಗಾಗ ಶೀತ, ಕೆಮ್ಮು, ಜ್ವರದಂತಹ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹವಾಮಾನ ಬದಲಾವಣೆ ಸಂದರ್ಭದಲ್ಲಿ ಕೂಡ ಮಕ್ಕಳು ಅನಾರೋಗ್ಯ ಪೀಡಿತರಾಗುತ್ತಾರೆ. ಕಲುಷಿತ ನೀರು ಕುಡಿಯುವುದು, ಸ್ವಚ್ಛತೆಯ ಕೊರತೆಯಿಂದಾಗಿ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದನ್ನು ತಪ್ಪಿಸಲು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಸ್ವಚ್ಛತೆ ಕಡೆಗೆ ಮಕ್ಕಳು ಹೆಚ್ಚು ಗಮಹರಿಸುವಂತೆ ನೋಡಿಕೊಳ್ಳಬೇಕು. ಮಕ್ಕಳು ಸದಾ ಚಟುವಟಿಕೆಯಿಂದ ಇದ್ದರೆ ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಚಟುವಟಿಕೆ ಇಲ್ಲದಿದ್ದರೆ ಜಡತ್ವದಿಂದ ಅವರ ದೇಹಕ್ಕೂ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಡುತ್ತದೆ.
ಸರಿಯಾದ ನಿದ್ರೆ:
ನಿರ್ಧಿಷ್ಟ ಸಮಯ ಸರಿಯಾಗಿ ನಿದ್ರಿಸುವುದು ಮುಖ್ಯ. ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳೂ ಕೂಡ ಮೊಬೈಲ್, ಟಿವಿಗೆ ಅವಲಂಭಿತರಾಗಿರುತ್ತಾರೆ. ಮಧ್ಯರಾತ್ರಿ ಕಳೆದರೂ ಮೊಬೈಲ್ ನೋಡುವುದು ಹವ್ಯಾಸವಾಗಿಬಿಟ್ಟಿರುತ್ತದೆ. ಇದರಿಂದ ಸರಿಯಾಗಿ ನಿದ್ದೆ ಆಗುವುದಿಲ್ಲ. ಮಕ್ಕಳ ಆರೋಗ್ಯ ಸರಿಯಾಗಿರಬೇಕೆಂದರೆ ದಿನದ 9 ಗಂಟೆಗಳ ಕಾಲ ನಿದ್ದೆ ಅಗತ್ಯವಾಗಿರುತ್ತದೆ. ನಿದ್ದೆ ಕಡಿಮೆಯಾದಂತೆ ಅನಾರೋಗ್ಯ ಸಂಭವಿಸುತ್ತದೆ. ಕಣ್ಣಿನ ಸಮಸ್ಯೆ, ತಲೆನೋವು, ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಖಿನ್ನತೆ ಹೀಗೆ ಹಲವು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ಕಾರಣದಿಂದ ದೇಹದಲ್ಲಿ ಶಕ್ತಿ ಇಲ್ಲದಂತಾಗಿ ಸುಸ್ತು, ಬಳಲಿಕೆ ಕಾಡುತ್ತದೆ.
ಸೇವಿಸುವ ಆಹಾರ:
ಇಂದಿನ ಯುವ ಪೀಳಿಗೆಯ ಮಕ್ಕಳಿಗೆ ಹಣ್ಣು ತರಕಾರಿಗಳಿಗಿಂತ ಪಿಜ್ಜಾ, ಬರ್ಗರ್‌ಗಳಂತಹ ಜಂಕ್‌ಫುಡ್‌ಗಳೇ ಇಷ್ಟವಾಗುತ್ತವೆ. ಇದರ ಪರಿಣಾಮ ಅನಾರೋಗ್ಯ ಕಾಡುತ್ತದೆ. ಶಾಲೆಗೆ ತೆರಳುವಾಗಲೂ ಸರಿಯಾದ ಆಹಾರ ಪದ್ಧತಿ ಪಾಲಿಸದಿದ್ದರೆ ಹುಷಾರಿಲ್ಲದಂತೆ ಆಗುವುದು ಸಾಮಾನ್ಯ. ಮಧ್ಯಾಹ್ನ ಹೊತ್ತಲ್ಲಿ ಶಾಲೆಗೆ ಬಾಕ್ಸ್ ತೆಗೆದುಕೊಂಡು ಹೋಗುವಾಗ ಕರಿದ ಪದಾರ್ಥಗಳನ್ನು ಕೊಡಬಾರದು. ಮಧ್ಯಾಹ್ನ ಸಮಯ ಕರಿದ ಪದಾರ್ಥಗಳು ತಿನ್ನುವುದು ಹಸಿದ ಹೊಟ್ಟೆಗೆ ವಿಷ ನೀಡಿದಂತೆ ಎನ್ನುತ್ತಾರೆ ಆಹಾರ ತಜ್ಞರು. ಅದಕ್ಕಾಗಿ ಆಹಾರದಲ್ಲಿ ತರಕಾರಿಗಳನ್ನು ಹೆಚ್ಚಾಗಿ ಬಳಸಬೇಕು. ಶುಚಿ, ರುಚಿಯಾದ ಆಹಾರ ಮಾಡಿಕೊಟ್ಟರೆ ಮಕ್ಕಳಿಗೆ ರುಚಿಗೂ ಆರೋಗ್ಯಕ್ಕೂ ಒಳ್ಳೆಯದು.
ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಪೋಷಕರ ಪಾತ್ರ ಮಹತ್ವದ್ದು. ಮಕ್ಕಳಿಗೆ ಶುಚಿತ್ವ, ಆರೋಗ್ಯದ ಬಗೆಗಿನ ಸೂಕ್ಷ್ಮ ವಿಚಾರಗಳನ್ನು ಮಕ್ಕಳಿಗೆ ತಿಳಿಸಿ ಕೊಡುವುದು ಮುಖ್ಯ. ಸಾಮಾನ್ಯವಾಗಿ ಶಾಲೆಗೆ ಹೋಗುವ ಚಿಕ್ಕ ಮಕ್ಕಳು ವರ್ಷದಲ್ಲಿ ಹಲವಾರು ಬಾರಿ ಶೀತಕ್ಕೆ ಒಳಗಾಗುತ್ತಾರೆ. ಅದಕ್ಕೆ ಹೆದರುವ ಅಗತ್ಯವಿಲ್ಲ. ಸರಿಯಾದ ಚಿಕಿತ್ಸೆ ಮತ್ತು ಆರೈಕೆ ಮೊದಲ ಆದ್ಯತೆಯಾಗಿರಲಿ. ಹವಾಮಾನ ಬದಲಾವಣೆಗಳಿಂದಾಗಿ ಮಕ್ಕಳು ಕೆಲವೊಮ್ಮೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
– ಕಾವ್ಯಶ್ರೀ