Advertisement

Health Problem: ಕರುನಾಡ‌ ಜೀವ‌ ಹಿಂಡುತ್ತಿರುವ ಡೆಂಗ್ಯೂ!

01:19 AM Jul 05, 2024 | Team Udayavani |

ಮಳೆಗಾಲ ಆರಂಭವಾಗುತ್ತಿದಂತೆ ಡೆಂಗ್ಯೂ ಹಾವಳಿಯೂ ಶುರುವಾಗುತ್ತದೆ. ಪ್ರಸಕ್ತ ವರ್ಷವೂ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಾವು ಕೂಡ ಸಂಭ ವಿಸಿವೆ. ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಆದರೂ ಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡೆಂಗ್ಯೂ ಒಟ್ಟು ಪರಿಸ್ಥಿತಿ, ನಿಯಂತ್ರಣಕ್ಕೆ ಸರಕಾರ ಏನೆಲ್ಲ ಕ್ರಮಗಳನ್ನು ಕೈಗೊಂಡಿದೆ ಎಂಬ ಕುರಿತು ಉದಯವಾಣಿ “ರಿಯಾಲಿಟಿ ಚೆಕ್‌’ ನಡೆಸಿದ್ದು, ಆ ಮಾಹಿತಿ ಇಲ್ಲಿದೆ…

Advertisement

ಪ್ರಸಕ್ತ ಸಾಲಿನಲ್ಲಿ ರಾಜ್ಯದ ಜನತೆಯನ್ನು ಡೆಂಗ್ಯೂ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ. ಹೆಚ್ಚುತ್ತಿ ರುವ ಮಳೆ ಜತೆಗೆ ಕೆಲವು ಕಡೆ ಸ್ವತ್ಛತೆಯನ್ನು ಕೈಗೊಳ್ಳದೇ ಇರುವುದು ಇದಕ್ಕೆ ಪ್ರಮುಖವಾದ ಕಾರಣ. ಗುರುವಾರವೊಂದೇ ದಿನ (ಜು.4) ರಾಜ್ಯದಲ್ಲಿ 286 ಹೊಸ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಒಟ್ಟು ಪ್ರಕರಣ ಗಳ ಸಂಖ್ಯೆ 6,676ಕ್ಕೆ ಹೆಚ್ಚಳವಾಗಿದೆ. ಹೀಗಾಗಿ ಸಾವಿ ರಾರು ಮಂದಿ ಡೆಂಗ್ಯೂಗೆ ತುತ್ತಾಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ. ಸರಕಾರಿ ಮಾಹಿತಿ ಪ್ರಕಾರ ಇದುವರೆಗೆ 7 ಮಂದಿ ಮೃತಪಟ್ಟಿದ್ದರೂ, ಲೆಕ್ಕಕ್ಕೆ ಸಿಗದೇ ಇರುವ ಸಾವಿನ ಪ್ರಕರಣಗಳು ಎರಡಂಕಿ ದಾಟಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ “ಉದಯವಾಣಿ” ರಾಜ್ಯವ್ಯಾಪಿ ರಿಯಾಲಿಟಿ ಚೆಕ್‌ ನಡೆಸಿದ್ದು, ಹಲವು ಅಂಶಗಳು ಬೆಳಕಿಗೆ ಬಂದಿವೆ.

ಡೆಂಗ್ಯೂ ಪ್ರಕರಣಗಳು ದಿನೇ ದಿನೆ ಹೆಚ್ಚಳವಾಗುತ್ತಾ ಬರುತ್ತಿದ್ದು, ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ತಡೆ ಅನುಷ್ಠಾನ ಪ್ರಕ್ರಿಯೆಯು ಕೆಲವು ಕಡೆ ಸಮರೋ ಪಾದಿಯಲ್ಲಿ ಸಾಗಿದರೆ, ಮತ್ತೆ ಕೆಲವು ಕಡೆ ನಿಧಾನಗತಿ ಅನುಸರಿಸಿರು ವುದು ಕಂಡುಬಂದಿದೆ. ಚಿಕ್ಕಮಗಳೂರಿ ನಲ್ಲಿ ಅತೀ ಹೆಚ್ಚು ಅಂದರೆ, 512 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದರೆ, ಮೈಸೂರಲ್ಲಿ 481, ಹಾವೇರಿ ಯಲ್ಲಿ463, ಶಿವಮೊಗ್ಗದಲ್ಲಿ 283 ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ರೋಗಿಗಳ ಪ್ರಮಾಣ ಉಲ್ಬಣಿಸುತ್ತಿದೆ.

ಚಿಕ್ಕಮಗಳೂರಲ್ಲಿ ನಿತ್ಯ 40 ಪ್ರಕರಣ
ಚಿಕ್ಕಮಗಳೂರು ಜಿಲ್ಲೆಯಲ್ಲಿ 512 ಡೆಂಗ್ಯೂ ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಲ್ಲಿ 20, ಪ್ರತೀ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್‌ ಕಾಯ್ದಿರಿಸಲಾಗಿದೆ. ಜಿಲ್ಲಾಸ್ಪತ್ರೆಗೆ ನಿತ್ಯ 30- 40 ಪ್ರಕರಣಗಳು ಬರುತ್ತಿದ್ದು, ಡೆಂಗ್ಯೂ ತಪಾಸಣೆ ನಡೆಸ ಲಾಗುತ್ತಿದೆ. ಒಂದು ವೇಳೆ ಡೆಂಗ್ಯೂ ಪತ್ತೆಯಾದಲ್ಲಿ ತತ್‌ಕ್ಷಣ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. 8 ಮಂದಿಗೆ ರಕ್ತದ ಪ್ಲೇಟ್‌ಲೆಟ್‌ ನೀಡಲಾಗುತ್ತಿದೆ.

ಹಾಸನ: 2 ಸಾವು ಅಧಿಕೃತ
ಹಾಸನ ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 205 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದೆ. ಈಗಾಗಲೇ 5 ಮಂದಿ ಸಾವಿಗೀಡಾಗಿರುವರಾದರೂ ದಾಖಲೆ ಪ್ರಕಾರ ಇಬ್ಬರು ಮೃತಪಟ್ಟಿದ್ದಾರೆ! ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆಗೆಂದೇ 50 ಹಾಸಿಗೆಗಳ 2 ಪ್ರತ್ಯೇಕ ವಾರ್ಡ್‌, 1 ಐಸಿಯು ವಾರ್ಡನ್ನೂ ಸಜ್ಜುಗೊಳಿಸಲಾಗಿದೆ. ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲೂ 1 ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ. ಹಿಮ್ಸ್‌ನ ರಕ್ತನಿಧಿ ಕೇಂದ್ರದಲ್ಲಿ ರಕ್ತದ ದಾಸ್ತಾನಿದೆ. ಶಂಕಿತರಿಗೆ ರಕ್ತ ಪರೀಕ್ಷೆ ನಡೆಸಿ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಪ್ರತೀ ಶುಕ್ರವಾರ ಸೊಳ್ಳೆ ಉತ್ಪತ್ತಿ ತಾಣ ನಾಶ ದಿನವನ್ನಾಗಿ ಆರೋಗ್ಯ ಇಲಾಖೆ ಆಚರಿಸುತ್ತಿದೆ.

Advertisement

ಚಿತ್ರದುರ್ಗದ ಆಸ್ಪತ್ರೆಯಲ್ಲೂ ಪ್ರತ್ಯೇಕ ಚಿಕಿತ್ಸೆ
ಚಿತ್ರದುರ್ಗ ಜಿಲ್ಲೆಯಲ್ಲಿ ಜನವರಿಂದ ಜೂನ್‌ ಅಂತ್ಯಕ್ಕೆ 253 ಜನರಲ್ಲಿ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಜೂನ್‌ವೊಂದರಲ್ಲೇ 55 ಕೇಸ್‌ಗಳು ದೃಢಪಟ್ಟಿವೆ. ಇನ್ನು ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದ ಯುವಕ ಡೆಂಗ್ಯೂನಿಂದ ಸಾವನ್ನಪ್ಪಿರುವ ಶಂಕೆ ಇದೆಯಾದರೂ ಆರೋಗ್ಯ ಇಲಾಖೆ ಖಚಿತಪಡಿಸಿಲ್ಲ. ಜಿಲ್ಲಾ ಆರೋಗ್ಯ ಇಲಾಖೆ ಪ್ರತೀ ಮೂರನೇ ಶುಕ್ರವಾರವನ್ನು ಲಾರ್ವಾ ಸಮೀಕ್ಷೆಗಾಗಿಯೇ ನಿಗದಿಪಡಿಸಿದೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಡೆಂಗ್ಯೂ ಬಾಧಿತರಿಗೆ ಪ್ರತ್ಯೇಕ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ.

ಉಡುಪಿ, ಬೆಳಗಾವಿಯಲ್ಲಿ ಅವ್ಯವಸ್ಥೆ
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 182 ಪ್ರಕರಣ ಸಕ್ರಿಯವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಮೀಸಲಿಟ್ಟಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ 177 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಒಬ್ಬರು ಮೃತಪಟ್ಟಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ಸೋಂಕಿತರಿಗಾಗಿ ಪ್ರತ್ಯೇಕ ವ್ಯವಸ್ಥೆ ಇಲ್ಲ. ಇನ್ನು ಮಂಡ್ಯದಲ್ಲಿ 189 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಪ್ಲೇಟ್‌ಲೆಟ್ಸ್‌ ಸಂಗ್ರಹವಿದೆ ಎಂದು ಆರೋಗ್ಯಾ ಧಿಕಾರಿಗಳು ತಿಳಿಸಿದ್ದಾರೆ.

ಹಾವೇರಿಯಲ್ಲಿ “ಖಾಸಗಿ’ ಲೆಕ್ಕಕ್ಕಿಲ್ಲ
ಹಾವೇರಿ ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ 150ರಷ್ಟಿದ್ದ ಡೆಂಗ್ಯೂ ಪ್ರಕರಣ ಜೂನ್‌ ತಿಂಗಳಲ್ಲಿ 313 ಕೇಸ್‌ ದಾಖಲಾಗಿದ್ದು, 463ಕ್ಕೆ ಏರಿಕೆಯಾಗಿದೆ. ಬ್ಯಾಡಗಿ ತಾಲೂಕಿನ ತಡಸದಲ್ಲಿ ಯಶವಂತ (7) ಮೃತಪಟ್ಟಿ ದ್ದಾನೆ. ಆದರೆ “ಅಧಿ ಕಾರಿಗಳು ಡೆಂಗ್ಯೂ ಕೇಸ್‌ ಮುಚ್ಚಿಡುತ್ತಿದ್ದಾರೆ, ಖಾಸಗಿ ಆಸ್ಪತ್ರೆಗಳ ಪ್ರಕರಣಗಳನ್ನು ಲೆಕ್ಕಕ್ಕೆ ಸೇರಿಸು ತ್ತಿಲ್ಲ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿ ದ್ದಾರೆ. ಫಾಗಿಂಗ್‌ ಮಾಡಿಸಲಾಗುತ್ತಿದೆ. ಔಷಧದ ಕೊರತೆ ಯೂ ಇಲ್ಲ ಎಂದು ಜಿಲ್ಲಾ ಡಳಿತ ತಿಳಿಸಿದೆ.

ಮೈಸೂರಲ್ಲಿ 481 ಕೇಸ್‌
ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂ ತೀವ್ರ ತೆಗೆ ಕಳೆದ 6 ತಿಂಗ ಳಲ್ಲಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿ ದ್ದಾರೆ. ಆದರೂ ಇಲಾಖೆ ಮಾಹಿತಿ ಪ್ರಕಾರ ಈವ ರೆಗೆ ಸಾವಿನ ಪ್ರಕರಣ  1 ಮಾತ್ರ! ತೀವ್ರ ಜ್ವರ ಮತ್ತು ಮೈಕೈ ನೋವಿ ನಿಂದ ಬಳ ಲು ತ್ತಿ ರು ವ ವರು ಜಿಲ್ಲೆಯ ತಾಲೂಕು ಮತ್ತು ನಗ ರದ ಆಸ್ಪ ತ್ರೆ ಗ ಳಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಆಸ್ಪ ತ್ರೆ ಗೆ ದಾಖ ಲಾ ಗಿದ್ದಾರೆ. ಇವರಲ್ಲಿ 481 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 380ಕ್ಕೂ ಹೆಚ್ಚು ಹಾಸಿ ಗೆ ಯನ್ನು ಮೀಸ ಲಿ ಡ ಲಾ ಗಿದೆ. ಆಸ್ಪ ತ್ರೆಗೆ ದಾಖ ಲಾದ ರೋಗಿ ಗ ಳಿಗೆ ಪ್ಯಾರಾಸಿ ಟ ಮಲ್‌ ಮಾತ್ರೆ ಮತ್ತು ಆ್ಯಂಟಿ ಎಸ್ಟಿಮಿನಿಕ್ಸ್‌ ಇಂಜೆಕ್ಷ ನ್‌ ಸೇರಿ  ಚಿಕಿತ್ಸೆಗೆ ಬೇಕಾದ ಔಷ ಧ ವನ್ನು ನೀಡ ಲಾ ಗಿ ದೆ. ಜಿಲ್ಲಾದ್ಯಂತ ಆಶಾ ಕಾರ್ಯ ಕ ರ್ತೆ ಯರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿ ಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಆಸ್ಪತ್ರೆಗಳು ಹೌಸ್‌ಫುಲ್‌
ಶಿವಮೊಗ್ಗ ಜಿಲ್ಲೆಯಲ್ಲಿ ದಿನೇ ದಿನೆ ಡೆಂಗ್ಯೂ ಕೇಸ್‌ಗಳು ಹೆಚ್ಚುತ್ತಿದ್ದು, ಆಸ್ಪತ್ರೆ ಬೆಡ್‌ಗಳು ಭರ್ತಿಯಾಗುತ್ತಿವೆ. ಜನವರಿಯಿಂದ ಇಲ್ಲಿವರೆಗೆ ಒಟ್ಟು 283 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ನಗರ ಪ್ರದೇಶದಲ್ಲಿ 56, ಗ್ರಾಮೀಣ ಭಾಗದಲ್ಲಿ 227 ಪ್ರಕರಣ ದಾಖಲಾಗಿದ್ದು ಆತಂಕ ಮೂಡಿಸಿದೆ. ಸರಕಾರಿ, ಖಾಸಗಿ ಆಸ್ಪತ್ರೆಗಳು ಭರ್ತಿಯಾಗಿವೆ. ಶುಚಿತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ನಿಗದಿತ ಔಷಧ ಸಂಗ್ರಹ ಮಾಡಿಕೊಳ್ಳಲಾಗಿದೆ. ಪ್ಲೇಟ್‌ಲೆಟ್ಸ್‌ ಸಂಗ್ರಹಿಸಿಡುವಂತೆ ಬ್ಲಿಡ್‌ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ.

ಧಾರವಾಡ: ಡೆಂಗ್ಯೂ ಜತೆ ಚಿಕೂನ್‌ಗುನ್ಯಾ!
ಧಾರವಾಡ ಜಿಲ್ಲೆಯಲ್ಲಿ 6 ತಿಂಗಳಲ್ಲಿ 254 ಜನರಿಗೆ ಡೆಂಗ್ಯೂ ಕಾಣಿಸಿಕೊಂಡಿದ್ದು, ಬಾಲಕಿ ಮೃತಪಟ್ಟಿದ್ದಾಳೆ. 16 ಜನರಲ್ಲಿ ಚಿಕೂನ್‌ಗುನ್ಯಾ ಪತ್ತೆಯಾಗಿದೆ. ಎಲ್ಲ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ತಲಾ 5 ಹಾಸಿಗೆ, ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಔಷಧ ದಾಸ್ತಾನಿದೆ. ಫಾಗಿಂಗ್‌ ಮಾಡಲಾಗುತ್ತಿದೆ. ಆದರೆ
ಚರಂಡಿ ಸ್ವತ್ಛತೆ, ಕೊಳಚೆ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ.

ದ.ಕ. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 263 ಮಂದಿಗೆ ದೃಢಪಟ್ಟಿತ್ತು. ಶೇ.50ರಷ್ಟು (113) ಪ್ರಕರಣ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲೇ ಇದೆ. ವೆನಾÉಕ್‌ ಆಸ್ಪತ್ರೆಯಲ್ಲಿ 15 ಹಾಸಿಗೆಯ ಸಾಮಾನ್ಯ ವಾರ್ಡ್‌, ಮತ್ತು 8 ಹಾಸಿಗೆಯ ವೆಂಟಿಲೇಟರ್‌ ವಾರ್ಡ್‌ ಮೀಸಲಿಡಲಾಗಿದೆ. ಜಿಲ್ಲಾದ್ಯಂತ ಪ್ರತೀ ದಿನ ಲಾರ್ವಾ ಸರ್ವೇ ನಡೆಸಲಾಗುತ್ತಿದೆ. ಪ್ಲೇಟ್‌ಲೆಟ್‌ ಲಭ್ಯವಿದೆ.

ವಿಜಯಪುರದಲ್ಲಿ ಒಂದೂ ಕೇಸ್‌ ಇಲ್ಲ!
ವಿಜಯಪುರ ಜಿಲ್ಲೆಯಲ್ಲಿ ಈವರೆಗೆ ಒಂದೂ ಪ್ರಕರಣ ಇಲ್ಲ. ಆದರೆ ಚಿಕಿತ್ಸೆಗೆ ಜಿಲ್ಲಾಡಳಿತ ಸಜ್ಜಾಗಿದೆ. 6 ತಿಂಗಳಲ್ಲಿ ಚಿಕ್ಕಬಳ್ಳಾಪುರ   89, ಕಲ ಬುರಗಿ 180, ತುಮಕೂರು 170, ದಾವ ಣಗೆರೆ 155, ಉ.ಕನ್ನಡ 115, ಕೊಪ್ಪಳ 92, ಬಳ್ಳಾರಿ 83, ಕೋಲಾರ 58, ರಾಮನಗರ 53, ಬಾಗಲಕೋಟೆ 53, ಗದಗ 49, ಬೀದರ್‌-44, ರಾಯಚೂರು 36, ಬೆಂಗಳೂರು ಗ್ರಾ. 28, ಯಾದಗಿರಿ-5 ಡೆಂಗ್ಯೂ ಕೇಸ್‌ ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.