ಬೆಂಗಳೂರು : ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಮತ್ತು ನಾನು ಪದೇ ಪದೇ ಮನವಿ ಮಾಡಿಕೊಂಡಿದ್ದೇವೆ. ಮನವಿ ಮಾಡ್ಕೊಂಡ್ರೂ ಬಹಳಷ್ಟು ಖಾಸಗಿ ಆಸ್ಪತ್ರೆಗಳು ಶೇ.15, ಶೇ.20 ರಷ್ಟು ಮಾತ್ರ ಹಾಸಿಗೆ ಬಿಟ್ಟು ಕೊಟ್ಟಿದ್ದಾರೆ. ಕೂಡಲೇ ನಿಗದಿ ಪಡಿಸಿದ ಬೆಡ್ ಗಳನ್ನು ನೀಡಲೇಬೇಕು. ಇಲ್ಲದಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ನೇರ ಎಚ್ಚರಿಕೆ ನೀಡಿರುವ ಸುಧಾಕರ್, ಖಾಸಗಿ ಆ್ಯಂಬುಲೆನ್ಸ್ ದುಡ್ಡು ವಸೂಲಿ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹೆಣದ ಮೇಲೆ ಶೋಷಣೆ ಸರಿಯಲ್ಲ. ಖಂಡಿತವಾಗಿ ಅಂತಹವರ ವಿರುದ್ಧ ಕ್ರಮ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದರು.
ಯಾರು ಕೂಡ ಇಂತಹ ಕೆಲಸ ಮಾಡಬಾರದು ಕೋವಿಡ್ ನಂತ ಕೆಟ್ಟ ಸಂದರ್ಭ ಇದು. ಈ ಸಮಯದಲ್ಲಿ ಅಮಾನವೀಯ ನಡವಳಿಕೆ ಸರಿಯಲ್ಲ. ಖಾಸಗಿ ಆಸ್ಪತ್ರೆಗಳು ತಕ್ಷಣ ಕೋವಿಡ್ ರೋಗಿಗಳ ದಾಖಲಾತಿ ಮಾಡಿಕೊಳ್ಳಲಿ. ಕೋವಿಡೇತರ ರೋಗಿಗಳನ್ನು ಶೀಘ್ರವೇ ಡಿಸ್ಚಾರ್ಜ್ ಮಾಡಿ. ಆ ಹಾಸಿಗೆಗಳನ್ನು ಗಂಭೀರವಾಗಿ ಕೋವಿಡ್ ಎದುರಿಸುತ್ತಿರುವವರಿಗೆ ನೀಡಿ ಎಂದಿದ್ದಾರೆ.
ಇನ್ನೆರಡು ದಿನಗಳಲ್ಲಿ ವಿಕ್ಟೋರಿಯಾದಲ್ಲಿ 500 ಹಾಸಿಗೆಗಳನ್ನು ಕೋವಿಡ್ ಗೆ ಹೆಚ್ಚುವರಿಯಾಗಿ ಮೀಸಲಿರಿಸಲಾಗುದು. ಬೌರಿಂಗ್ ಆಸ್ಪತ್ರೆಯಲ್ಲಿ 300, ಹೊಸ ಆಸ್ಪತ್ರೆ ಚರಕದಲ್ಲಿ 150, ಘೋಶಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳನ್ನು ಕೋವಿಡ್ ಗೆ ಮೀಸಲಿರಿಸ್ತೇವೆ. ಕೆ ಸಿ ಜನರಲ್ ಆಸ್ಪತ್ರೆಗಳಲ್ಲಿ 100 ಐಸಿಯು ಹಾಸಿಗೆಗಳು, ಸಿ ವಿ ರಾಮನ್ ಆಸ್ಪತ್ರೆ, ಜಯನಗರ ಆಸ್ಪತ್ರೆಗಳಲ್ಲೂ ಕೋವಿಡ್ ಗೆ ಹಾಸಿಗೆಗಳನ್ನು ಹೆಚ್ಚಿಸ್ತಿದ್ದೇವೆ ಎಂದರು.