Advertisement

ಮಳೆಯಿಂದ ರೈತರ ಬೆಳೆ ನಷ್ಟ: ಸಮೀಕ್ಷೆ ಬಳಿಕ ಸಂತ್ರಸ್ತರಿಗೆ ಪರಿಹಾರ ವಿತರಣೆ; ಸಚಿವ ಸುಧಾಕರ್

02:50 PM Aug 30, 2022 | Team Udayavani |

ಚಿಕ್ಕಬಳ್ಳಾಪುರ: ಕಳೆದ ಕೆಲ ದಿನಗಳಿಂದ ಶೇ.200ಕ್ಕೂ ಅಧಿಕ ಪಟ್ಟು ಮಳೆಯಾಗಿದ್ದು ಜಿಲ್ಲೆಯ ಹಲವು ರೈತರ ನಷ್ಟಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

Advertisement

ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಂಗಳವಾರ ರೈತರ ಅಹವಾಲು ಆಲಿಸಿದ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಷ್ಟದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ವರದಿ ಬಂದ ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ  ಹೇಳಿದರು.

ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಬೆಳೆನಷ್ಟವಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗಿದೆ. ಕಳೆದ ನಾಲ್ಕು ದಶಕಗಳ ಹಿಂದೆ ಜಿಲ್ಲೆಯ ಸ್ಥಿತಿಯನ್ನು ಪ್ರಸ್ತುತ ಪರಿಸ್ಥಿತಿ ನೆನಪಿಸುವಂತಿದೆ. ರಸ್ತೆ, ನೆಲ ಎಂಬ ಯಾವುದೇ ವ್ಯತ್ಯಾಸವಿಲ್ಲದೆ ನೀರು ಹರಿಯುತ್ತಿರುವುದು ಒಂದು ಕಡೆ ಸಂತಸ ತಂದರೂ ರೈತರಿಗೆ ಆಗಿರುವ ನಷ್ಟ ಬೇಸರ ತರಿಸಿದೆ ಎಂದರು.

ರೈತರಿಗೆ ಮುಂದಿನ ದಿನಗಳಲ್ಲಿ ಅನಕೂಲ ಆಗಲಿದೆ:  ತಕ್ಷಣಕ್ಕೆ ರೈತರಿಗೆ ನಷ್ಟ ಆಗಿರುವುದು ಬೇಸರ ತರಿಸುತ್ತಿದೆ. ಆದರೆ ಎಚ್ಎನ್ ವ್ಯಾಲಿ ಯೋಜನೆ ಜೊತೆಗೆ ಇತ್ತೀಚಿಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶೇಖರಣೆಯಾಗಿರುವ ನೀರು ದೀರ್ಘ ಕಾಲಕ್ಕೆ ಸಹಕಾರಿಯಾಗಲಿದೆ ಎಂದರು.

ಕಳೆದ ಒಂದು ವರ್ಷದಿಂದ ರೈತರು ಕೊಳವೆ ಬಾವಿ ಕೊರೆಸುವುದು ನಿಂತಿದೆ. ಇದರಿಂದ ರೈತರಿಗೆ ಆರ್ಥಿಕ ಉಳಿತಾಯ ಆಗುತ್ತಿದೆ ಎಂದು ಸಚಿವರು ಹೇಳಿದರು.

Advertisement

ಇದನ್ನೂ ಓದಿ: ಸಿಂಧನೂರು ಬಳಿ ಭೀಕರ ಅಪಘಾತ :ಸ್ಥಳದಲ್ಲೇ ಇಬ್ಬರ ಸಾವು :ಅಂತ್ಯಕ್ರಿಯೆಗೆ ಹೋದವರು ಮಸಣ ಸೇರಿದರು

ಜಿಲ್ಲೆಯಲ್ಲಿ ಪ್ರಗತಿಪರ ರೈತರಿದ್ದಾರೆ, ಇಷ್ಟು ದಿನ ನೀರಿಲ್ಲದೆ ಸಂಕಷ್ಟ ಎದುರಿಸುತ್ತಿದ್ದ ರೈತರಿಗೆ ಈಗ ನೀರು ಲಭಿಸಿದೆ. ಇದರಿಂದ ಅವರು ಕೃಷಿಯಲ್ಲಿ ಉತ್ತಮ ಸಾಧನೆ ಮಾಡುವ ಜೊತೆಗೆ ರಾಜ್ಯಕ್ಕೆ ಕೊಡುಗೆ ನೀಡಲಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಅಧಿಕ ಮಳೆಯಾಗುತ್ತಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆಯಲ್ಲಿ ಅಧಿಕ ಮಳೆಯಾಗುತ್ತಿದೆ. ಈ ಹಿಂದೆ ಮುಖ್ಯಮಂತ್ರಿಗಳು ಬಂದು ರಾಜಕಾಲುವೆಗಳ ಬಗ್ಗೆ ವಿಸ್ತೃತ ವರದಿ ಪಡೆದಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.

 ರಾಜಕಾಲುವೆ ನಿರ್ಮಾಣ ಶೀಘ್ರ :

ಕಂದವಾರ ಕೆರೆಯಿಂದ ಶಿಡ್ಲಘಟ್ಟ ರಸ್ತೆಯವರೆಗೂ ರಾಜಕಾಲುವೆ ನಿರ್ಮಾಣ ಪ್ರಸ್ತಾವನೆಯು ಒಪ್ಪಿಗೆ ಪಡೆಯುವ ಹಂತದಲ್ಲಿದೆ. ಕಳೆದ ಎರಡು ದಿನಗಳಿಂದ ಬಿದ್ದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 7ರ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. 2007ರಲ್ಲಿ ನಿರ್ಮಾಣವಾದ ರಾಷ್ಟ್ರೀಯ ಹೆದ್ದಾರಿ ಮತ್ತು ಅದರ ಪಕ್ಕದ ಸೇವಾರಸ್ತೆಗಳ ನಿರ್ಮಾಣದಲ್ಲಿ ಲೋಪವಿದೆ. ರಸ್ತೆ ಎತ್ತರದಲ್ಲಿದ್ದರೆ, ಜಮೀನು ಕೆಳಗಿದೆ. ಇದರಿಂದ ಪಂಚಗಿರಿಗಳ ಸಾಲಿನ ಮೂಲಕ ಬರುವ ನೀರು ಒಂದೇ ಕಡೆ ಹರಿಯುತ್ತಿದೆ. ಇದರಿಂದ ಸಮಸ್ಯೆ ಉಲ್ಬಣವಾಗುತ್ತಿದೆ. ಇದಕ್ಕೆ ರಾಜಕಾಲುವೆ ನಿರ್ಮಾಣವಾದರೆ ಪರಿಹಾರ ಸಿಗಲಿದೆ ಎಂದರು.

ಮಳೆ ಅಧಿಕವಾಗಿ ಆಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ನಗರಸಭೆಯವರು ನಿರಂತರ ಕಾರ್ಯಾಚರಣೆ ನಡೆಸಿ, ಜನರ ತೊಂದರೆ ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ನಗರದ 8 ಮತ್ತು 9ನೇ ವಾರ್ಡಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಆಗಿದೆ. ಅಧಿಕಾರಿಗಳ ಶ್ರಮದಿಂದ ಈಗ ಪರಿಸ್ಥಿತಿ ಸಹಜತೆಗೆ ಮರಳುತ್ತಿದೆ. ಅಲ್ಲದೆ ಕಳೆದ ವರ್ಷ ರಾಜಕಾಲುವೆಗಳು ತೆರವು ಮಾಡಿರುವುರುವದರಿಂದ ಪ್ರಸ್ತುತ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

 ಪರಿಹಾರದ ಭರವಸೆ :

ಜಿಲ್ಲಾಡಳಿತ, ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಲಿದ್ದು, ಜಿಲ್ಲೆಯಲ್ಲಿ ಮಳೆಯಿಂದ ರೈತರಿಗೆ ಆಗಿರುವ ನಷ್ಟದ ಬಗ್ಗೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಅಧಿಕಾರಿಗಳ ವರದಿ ಬಂದ ನಂತರ ಪರಿಹಾರ ಒದಗಿಸಲಾಗುವುದು. ಕಳೆದ ವರ್ಷವೂ ನಷ್ಟ ಹೊಂದಿದ ರೈತರಿಗೆ ಪರಿಹಾರ ನೀಡಲಾಗಿದೆ. ಈ ವರ್ಷವೂ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಜಾತವಾರ ಹೊಸಹಳ್ಳಿ ಕೆಳ ಸೇತುವೆ ಅಪಘಾತ ವಲಯವಾಗಿ ಪರಿಣಮಿಸಿರುವ ಬಗ್ಗೆ ಸುದ್ದಿಗಾರರ  ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಅಭಿಯಂತರರನ್ನು ಸ್ಥಳಕ್ಕೆ ಕರೆದೊಯ್ದು ಇಲ್ಲಿನ ಸಮಸ್ಯೆಗೆ ಅಗತ್ಯವಿರುವ ಪರಿಹಾರಗಳನ್ನು ಕೈಗೊಳ್ಳುವಂತೆ ಸೂಚಿಸುವುದಾಗಿ ಸಚಿವರು ಹೇಳಿದರು.

ಮಾಸ್ಕ್ ಕಡ್ಡಾಯವಾಗಬೇಕು :

ಪ್ರಸ್ತುತ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದ್ದು, ಜನಸಂಚಾರವೂ ಅಧಿಕವಾಗಲಿದೆ. ಇದರಿಂದ ಕೋವಿಡ್ ತೀವ್ರವಾಗುವ ಆತಂಕ ಎದುರಾಗಿದ್ದು, ಸಾರ್ವಜನಿಕರು ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ವರ್ತಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ ಮೂರನೇ ಡೋಸ್ ಲಸಿಕೆಯನ್ನು ತಪ್ಪದೇ ಪಡೆಯಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಜನರು ಗಮನ ಹರಿಸಬೇಕು. ಇಲ್ಲವಾದರೆ ಸಮಸ್ಯೆ ಜಠಿಲವಾಗಲಿದೆ. ಹಾಗಾಗಿ ಜನರು ತಪ್ಪದೇ ಮಾಸ್ಕ್ ಧರಿಸಬೇಕು ಮತ್ತು ಮೂರನೇ ಡೋಸ್ ಲಸಿಕೆ ತಪ್ಪದೇ ಪಡೆಯಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next