ಅರಸೀಕೆರೆ: ಮನುಷ್ಯನಿಗೆ ಹಣ ಐಶ್ವರ್ಯಕ್ಕಿಂತಲ್ಲೂ ಆರೋಗ್ಯ ಭಾಗ್ಯ ಅತ್ಯಂತ ಮುಖ್ಯವಾಗಿದ್ದು, ಈ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಎಂದು ತಾಲೂಕು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ನಾಗಪ್ಪ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿ ನಗರದ ಪ್ರಿಯದರ್ಶಿನಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮುಂಜಾಗ್ರತಾ ಕ್ರಮ ಅಗತ್ಯ: ಪ್ರತಿಯೊಂದು ಕಾಯಿಲೆಗಳನ್ನು ಮುಂಜಾಗೃತ ಕ್ರಮಗಳಿಂದ ಉಂಟಾಗುವ ಅಪಾಯವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಕಾಯಿಲೆಗಳು ಮನುಷ್ಯನ ದೇಹವನ್ನು ಬಾಧಿಸುವ ಮುನ್ನವೇ ಸೂಕ್ತ ಚಿಕಿತ್ಸೆಯನ್ನು ಕಾಲ ಕಾಲಕ್ಕೆ ಪಡೆಯಲು ಸಾದ್ಯವಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವಲ್ಲಿ ಇಂತಹ ವಿಶೇಷ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಪ್ರಾಮಾಣಿಕ ಸೇವೆ: ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ ಹಗಲು ಇರುಳು ಎನ್ನದೇ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಲೋಪವಿಲ್ಲದೇ ಸೇವೆ ಸಲ್ಲಿಸಿ: ನಗರದ ಜೆ.ಸಿ.ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಹ್ಲಾದ್ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎನ್ನುವಂತೆ ಜನರು ವೈದ್ಯರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ, ನಾವುಗಳು ಅದನ್ನು ಉಳಿಸಿಕೊಂಡು ಸರ್ಕಾರಿ ಆಸ್ಪತ್ರೆಯ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ಬರುವ ಬಡವರು ಹಾಗೂ ಮಧ್ಯಮ ವರ್ಗದ ಆರೋಗ್ಯವನ್ನು ರಕ್ಷಿಸುವ ಕೆಲಸವನ್ನು ಯಾವುದೇ ಲೋಪವಿಲ್ಲದೆ ನಾವುಗಳು ಮಾಡಲು ಕಟ್ಟಿಬದ್ಧರಾಗಬೇಕು ಎಂದರು.
ವೈದ್ಯರು ಕೂಡ ಸಾಮಾನ್ಯ ಮನುಷ್ಯರೇ ಆಗಿದ್ದು, ಅವರಿಗೂ ವೈಯುಕ್ತಿಕ ಬದುಕು ಇದೇ ಎನ್ನುವುದನ್ನು ಸಾರ್ವಜನಿಕರು ಅರ್ಥ ಮಾಡಿಕೊಂಡು ಅವರೊಂದಿಗೆ ಉತ್ತಮವಾಗಿ ನಡೆದುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಈ ವಿಶೇಷ ಶಿಬಿರದಲ್ಲಿ ನಗರಸಭೆ ಸದಸ್ಯೆ ಎಸ್.ಅಭಿರಾಮಿ ಹಾಗೂ ನಾಮನಿರ್ದೇಶಿತ ಮಾಜಿ ಸದಸ್ಯ ಶಿವನ್ ರಾಜ್ ಉಪಸ್ಥಿತರಿದ್ದರು.
ಮಕ್ಕಳ ತಜ್ಞರಾದ ಡಾ.ಸುರೇಶ್, ಕೀಲು ಮತ್ತು ಮೂಳೆ ತಜ್ಞರಾದ ಡಾ.ಪ್ರಹ್ಲಾದ್, ಫಿಜಿಷಿಯನ್ ಡಾ.ಷಡಕ್ಷರಿ, ಚರ್ಮ ರೋಗ ತಜ್ಞರಾದ ಡಾ.ಲಕ್ಷ್ಮೀಕಾಂತ್ ಹಾಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯೋಗೀಶ್ ಭಾಗವಹಿಸಿ ನೂರಾರು ಮಹಿಳೆಯರು ಹಾಗೂ ಮಕ್ಕಳಿಗೆ ಆರೋಗ್ಯ ತಪಾಸಣೆಯನ್ನು ಯಶಸ್ವಿಯಾಗಿ ನೆರವೇರಿಸಿದರು.