Advertisement

ಮದುವೆ ಮನೆಗೆ ಬರುತ್ತಾರೆ ಹೆಲ್ತ್‌ ಇನ್ಸ್‌ಪೆಕ್ಟರ್‌ !

11:16 AM May 24, 2020 | mahesh |

ಮಂಗಳೂರು: ಕೋವಿಡ್ ಮದುವೆಯ ಸಡಗರವನ್ನು ನುಂಗಿದೆ. ಮಾರ್ಗ ಸೂಚಿಯಂತೆ ಸರಳ ಮದುವೆಗೆ ಮಾತ್ರ ಅನುಮತಿ ಇದ್ದು, ಪ್ರತಿ ವಿವಾಹವೂ ಆರೋಗ್ಯ ನಿರೀಕ್ಷಕರು ಮತ್ತು ಪೊಲೀಸರ ಪರಿಶೀಲನೆಯಂತೆ ನಡೆಯುತ್ತದೆ. ವಿವಾಹ ಸಮಾರಂಭಕ್ಕೆ ನಗರ ಸಭೆ, ಪುರಸಭೆ ಮತ್ತು ನ.ಪಂ. ವ್ಯಾಪ್ತಿಯಲ್ಲಿ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ಗ್ರಾ.ಪಂ. ಮಟ್ಟದಲ್ಲಿ ಪಂಚಾಯತ್‌ ಅಧಿಕಾರಿ ಅನುಮತಿ ನೀಡುತ್ತಾರೆ. ಮದುವೆ ನಡೆಯುವ ದಿನ ಆ ಸಭಾಂಗಣಕ್ಕೆ ಒಬ್ಬ ಆರೋಗ್ಯ ನಿರೀಕ್ಷಕ ಮತ್ತು ಪೊಲೀಸ್‌ ಅಧಿಕಾರಿ ತೆರಳಿ ಮಾಹಿತಿ ಕಲೆಹಾಕುತ್ತಾರೆ.

Advertisement

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 60 ವಾರ್ಡ್‌ಗಳಿದ್ದು, ಒಟ್ಟು 10 ಮಂದಿ ಆರೋಗ್ಯ ನಿರೀಕ್ಷಕರಿದ್ದು ಅವರಿಗೆ ವಾರ್ಡ್‌ಗಳನ್ನು ಹಂಚಲಾಗಿದೆ. ಇವರು ವಿವಾಹದಲ್ಲಿ ಪಾಲ್ಗೊಂಡವರ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಪ್ರತೀ ಮದುವೆ ಮನೆಗೆ ತೆರಳಿ ಅಲ್ಲಿನ ಫೋಟೋ ವಾಟ್ಸಾಪ್‌ ಗ್ರೂಪ್‌ಗೆ ಅಪ್‌ಲೋಡ್‌ ಮಾಡುತ್ತಾರೆ. ನಿಯಮ ಪಾಲಿಸದಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡುತ್ತಾರೆ.

ಮಾರ್ಗಸೂಚಿ ಏನೇನಿದೆ ?
ಅತಿಥಿಗಳ ಸಂಖ್ಯೆ 50 ಮೀರಿರಬಾರದು. ಸಾರ್ವಜನಿಕ ಸ್ಥಳದಲ್ಲಿ ಸಮಾರಂಭ ಹಮ್ಮಿಕೊಳ್ಳಬೇಕು. ಹವಾನಿಯಂತ್ರಣ ಬಳಕೆ ಇಲ್ಲ. ಕಂಟೋನ್ಮೆಂಟ್‌ ಪ್ರದೇಶದ ವ್ಯಕ್ತಿಗಳು ಮದುವೆ ಸಮಾರಂಭದಲ್ಲಿ ಭಾಗವಹಿಸುವಂತಿಲ್ಲ. 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳುವ ಹಾಗಿಲ್ಲ. ಸ್ಯಾನಿಟೈಸರ್‌ ವ್ಯವಸ್ಥೆ, ಪ್ರತಿ ಯೊಬ್ಬರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡಬೇಕು. ಉಸಿರಾಟ, ಜ್ವರ ಇತ್ಯಾದಿ ಸಮಸ್ಯೆಯಿದ್ದರೆ ಪಾಲ್ಗೊಳ್ಳಬಾರದು. ಮಾಸ್ಕ್ ಧರಿಸುವುದು ಕಡ್ಡಾಯ ಇತ್ಯಾದಿ ನಿಯಮಗಳಿವೆ. ಸಮಾರಂಭ ಸ್ಥಳದಲ್ಲಿ ಕೈಗೊಂಡಿರುವ ವ್ಯವಸ್ಥೆಗಳ ಬಗ್ಗೆ ಮತ್ತು ಸಹ ಕರಿಸುವ ಬಗ್ಗೆ ಗುರುತಿಸಲ್ಪಟ್ಟ ನೋಡೆಲ್‌ ವ್ಯಕ್ತಿಯು ಮೇಲ್ವಿಚಾರಣೆ ಮಾಡಬೇಕು. ಭಾಗವಹಿಸುವ ಎಲ್ಲರೂ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡ ಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು 3 ಮದುವೆ
ರವಿವಾರ ರಾಜ್ಯಾದ್ಯಂತ ಲಾಕ್‌ಡೌನ್‌ ಇರಲಿದ್ದು, ಹೀಗಿದ್ದರೂ, ಈಗಾಗಲೇ ನಿಗದಿಯಾದ ವಿವಾಹ ಸಮಾರಂಭ ನಡೆಸಲು ಯಾವುದೇ ನಿರ್ಬಂಧ ಇಲ್ಲ. ಮಾರ್ಗಸೂಚಿ ಪಾಲನೆ ಮಾಡಬೇಕು. ಅನುಮತಿ ಪಡೆದ ಒಟ್ಟು 3 ಮದುವೆ ಸಮಾರಂಭಗಳು ಇಂದು ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಲಿವೆ.

ಅನುಮತಿ ಕಡ್ಡಾಯ
ಲಾಕ್‌ಡೌನ್‌ ಇದ್ದರೂ, ಈಗಾಗಲೇ ನಿಗದಿಯಾಗಿರುವ ವಿವಾಹ ಸಮಾರಂಭಗಳು ನಡೆಯುತ್ತವೆ. ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಸಬೇಕು. ಸಂಬಂಧಿಕರು ವಿವಾಹಕ್ಕೆ ತೆರಳುವುದಕ್ಕೆ ಸ್ಥಳೀಯಾಡಳಿತದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ.
-ಸಿಂಧೂ ಬಿ. ರೂಪೇಶ್‌ ದ.ಕ. ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next