Advertisement

Shirva: ಆರೋಗ್ಯ ಉಚಿತ ತಪಾಸಣೆ ಕೇಂದ್ರ ಲೋಕಾರ್ಪಣೆ; ವೈದ್ಯಕೀಯ ಉಚಿತ ತಪಾಸಣೆ ಶಿಬಿರ

02:04 PM Dec 17, 2023 | Team Udayavani |

ಶಿರ್ವ: ಶಿರ್ವಕೋಡು ಮಂದಾರ ಮನೋಹರ ಶೆಟ್ಟಿ ಅವರ ನೇತೃತ್ವದಲ್ಲಿ ಸುರತ್ಕಲ್‌ ಮುಕ್ಕ ಶ್ರೀನಿವಾಸ ಹಾಸ್ಪಿಟಲ್‌ನ ಸಹಯೋಗದೊಂದಿಗೆ ಶಿರ್ವ ಕೋಡು ಪೆಜತ್ತ ಕಟ್ಟೆಯ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣಗೊಂಡ ಶಾಂಭವಿ ಆರೋಗ್ಯ ಉಚಿತ ತಪಾಸಣೆ ಕೇಂದ್ರವನ್ನು ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ರವಿವಾರ ಲೋಕಾರ್ಪಣೆಗೊಳಿಸಿದರು.

Advertisement

ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ವೈದ್ಯಕೀಯ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿದ ಸುರತ್ಕಲ್‌ ಮುಕ್ಕ ಎ. ಶಾಮ ರಾವ್‌ ಫೌಂಡೇಶನ್‌ನ ಉಪಾಧ್ಯಕ್ಷ ಡಾ| ಎ. ಶ್ರೀನಿವಾಸ ರಾವ್‌ ಮಾತನಾಡಿ ಶಾಂಭವಿ ಆರೋಗ್ಯ ಉಚಿತ ತಪಾಸಣೆ ಕೇಂದ್ರದ ಮೂಲಕ ಶಿರ್ವ ಪರಿಸರದ ಜನತೆಯ ಮನೆಬಾಗಿಲಿಗೆ ಪ್ರಾಥಮಿಕ ಚಿಕಿತ್ಸೆಯ ಅವಕಾಶ ದೊರೆತಿದ್ದು, ಜನರಿಗೆ ಸರಕಾರದ ವಿವಿಧ ಆರೋಗ್ಯ ಯೋಜನೆಗಳ ಸೇವೆ ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ಹೇಳಿದರು.

ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ|ಡಾ|ಲೆಸ್ಲಿ ಡಿಸೋಜಾ ಆಶೀರ್ವಚನ ನೀಡಿ ಜೀವಕ್ಕೆ ಜಾತಿ,ಮತ,ಧರ್ಮದ ಭೇದವಿಲ್ಲ.ಮಾನವ ಕುಲಕ್ಕೆ ಆರೋಗ್ಯ ನೀಡುವ ಕಾರ್ಯ ಶ್ಲಾಘನೀಯವಾಗಿದ್ದು, ಆರೋಗ್ಯ ಉಚಿತ ಸೇವೆ ಸರ್ವರಿಗೂ ಲಭಿಸಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಮಾತನಾಡಿ ಸಾಮಾಜಿಕ ಕಳಕಳಿಯಿಂದ ಮನೋಹರ ಶೆಟ್ಟಿಯವರು ತನ್ನ ತಾಯಿಯ ಹೆಸರಿನಲ್ಲಿ ಉಚಿತ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ್ದು, ಕ್ಷೇತ್ರದಲ್ಲಿ ಉಚಿತ ಆರೋಗ್ಯಸೇವೆ ನೀಡುವ ಅವರ ಸಂಕಲ್ಪ ಸಮಾಜಕ್ಕೆ ನಾಂದಿಯಾಲಿ ಎಂದು ಹೇಳಿದರು.

Advertisement

ಶಿರ್ವ ಗ್ರಾ.ಪಂ. ಅಧ್ಯಕ್ಷೆ ಸವಿತಾ ರಾಜೇಶ್‌,ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ರಾವ್‌, ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಲೋಹಿತ್‌ ಭಟ್‌ ಮಾತನಾಡಿದರು. ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಸಿರಾಜುದ್ದೀನ್‌ ಝೈನಿ, ಸೋನಿಯಾ ಶೆಟ್ಟಿ, ಸ್ನೇಹಾ ಶೆಟ್ಟಿ ಮತ್ತು ಕಾರ್ತಿಕ್‌ ಶೆಟ್ಟಿ ವೇದಿಕೆಯಲ್ಲಿದ್ದರು.

ಸುರತ್ಕಲ್‌ ಮುಕ್ಕ ಶ್ರೀನಿವಾಸ ಹಾಸ್ಪಿಟಲ್‌ನ ವೈದ್ಯಕೀಯ ಅಧೀಕ್ಷಕ ಡೇವಿಡ್‌ ರೊಜಾರಿಯೋ ಮುಕ್ಕ ಆಸ್ಪತ್ರೆಯಲ್ಲಿ ಸಿಗುವ ಆರೋಗ್ಯ ಸೌಲಭ್ಯಗಳ ಮಾಹಿತಿ ನೀಡಿದರು. ಆಸ್ಪತ್ರೆಯ ಎಲುಬು ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ| ಶಶಿರಾಜ ಶೆಟ್ಟಿ ಪ್ರಸ್ತಾವನೆಗೈದರು.ಪರಿಸರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಸದಸ್ಯರು ಆಶಾ ಕಾರ್ಯಕರ್ತೆಯರು, ಫಲಾನುಭವಿಗಳು ಉಪಸ್ಥಿತರಿದ್ದರು.

ಮಂದಾರ ಮನೋಹರ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ನಿರೂಪಿಸಿ, ಪ್ರವೀಣ್‌ ಕುಮಾರ್‌ ಗುರ್ಮೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next