Advertisement

Health: ಜ್ವರ- ಮಕ್ಕಳನ್ನು ಕಾಡುವ ಮಾಯಾವಿ…

12:46 AM Dec 06, 2023 | Team Udayavani |

ಡಾಕ್ಟ್ರೆ ಮಗುವಿಗೆ ಜ್ವರ….ತುಂಬಾ ಸುಡ್ತಾ ಇದಾನೆ…
ಇದು ನಾವು ದಿನನಿತ್ಯ ಹಲವಾರು ಬಾರಿ ಕೇಳುವಂತಹ ವಾಕ್ಯ. ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರೂ ಜ್ವರದಿಂದ ಬಳಲಿದವರೇ. ಆದರೆ ಕಾರಣ ಒಬ್ಬೊಬ್ಬರಲ್ಲೂ ಬೇರೆಯೇ. ಜ್ವರ ಎಂಬುದೊಂದು ರೋಗವಲ್ಲ. ಅದೊಂದು ರೋಗ ಲಕ್ಷಣ. ದೇಹದಲ್ಲಿ ಎಲ್ಲವೂ ಸರಿಯಿಲ್ಲ ಎಂದು ನಮಗೆ ತಿಳಿಸುವ ರಕ್ಷಣ ವಿಧಾನ. ಮನುಷ್ಯನ ದೇಹ ಸೋಂಕಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸುವ ಹೋರಾಟದ ಸಂಕೇತ. ಸಾಧಾರಣವಾದ ವೈರಲ್‌ ಜ್ವರದಿಂದ ಹಿಡಿದು, ಯಾವ ಪರೀಕ್ಷೆಗಳಲ್ಲೂ ಸುಳಿವು ಕೊಡದ, ಯಾವ ಚಿಕಿತ್ಸೆಗೂ ಬಗ್ಗದ ಜ್ವರಗಳು ಕೂಡ ಇವೆ.
ಮಕ್ಕಳಲ್ಲಿ ಜ್ವರ ಸರ್ವೇ ಸಾಮಾನ್ಯ. ಕಾರಣಗಳು ಹಲವಾರು. ಕೆಲವು ಮುಖ್ಯ ಕಾರಣಗಳೆಂದರೆ,

Advertisement

1. ವೈರಸ್‌ ಜ್ವರ
2. ಡೆಂಗ್ಯೂ
3. ಟೈಫಾಯ್ಡ
4. ಮಲೇರಿಯಾ
5. ಮೂತ್ರದ ಸೋಂಕು
6. ನ್ಯುಮೋನಿಯ

ಶಾಲೆಗೆ ಹೋಗುವ ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿ ಬರುವಂಥದ್ದು ವೈರಲ್‌ ಫೀವರ್‌. ಶೀತ, ಕೆಮ್ಮು, ವಾಂತಿ, ಭೇದಿಗಳಿಂದ ಪ್ರಾರಂಭ­ವಾಗಿ, ಜ್ವರವಾಗಿ 3-4 ದಿನ ಕಾಡಿ, ದೇಹದ ಪ್ರತಿರಕ್ಷಣ ದಾಳಿಗೆ ತಂತಾನೇ ಕಡಿಮೆಯಾಗು­ವಂತಹ ಸೋಂಕು. ಗಾಳಿಯಿಂದ ಹರಡುವ ವೈರಲ್‌ ಜ್ವರ, ಜನಜಂಗುಳಿಯಿರುವ ಜಾಗಗಳಲ್ಲಿ ( ಶಾಲೆ, ಸಮಾರಂಭ ) ಬೇಗ ಹರಡಿ, ಒಂದು ಮಗುವಿಗೆ ಸೋಂಕಾದರೆ, ಮನೆಯ ಇತರರಿಗೂ ಹಬ್ಬಿ, ಗುಣವಾಗುತ್ತದೆ.

ವರ್ಷದಲ್ಲಿ ಮೂರು ನಾಲ್ಕು ಬಾರಿಯಾದರೂ ಕಾಡುವ ಈ ಜ್ವರ ನಿರುಪದ್ರವಿ. ಜ್ವರ, ಶೀತಗಳನ್ನು ಹತೋಟಿಯಲ್ಲಿಡುವ ಔಷಧ, ಬೆಚ್ಚಗಿನ ನೀರು, ಒಳ್ಳೆಯ ಆಹಾರ, ನಿದ್ರೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಅಷ್ಟೇ ಸಾಕು, ಮಕ್ಕಳಲ್ಲಿ ಬರುವ ಹೆಚ್ಚಿನ ಜ್ವರಗಳು ಈ ವರ್ಗದಲ್ಲಿ ಬರುತ್ತದೆ.

ಇನ್ನು ಕೆಲವು ಜ್ವರಗಳು (ಡೆಂಗ್ಯೂ, ಚಿಕೂನ್‌ ಗುನ್ಯಾ) ಸೊಳ್ಳೆಗಳಿಂದ ಹರಡುತ್ತವೆ. ಅತಿಯಾದ ಜ್ವರ, ಮೈಕೈ ನೋವು, ತಲೆನೋವುಗಳಿಂದ ಕಾಡಿಸಿ, ಕೆಲವೊಮ್ಮೆ ತಾವಾಗಿಯೇ ಕಡಿಮೆಯಾದರೆ, ಕೆಲವೊಮ್ಮೆ ರಕ್ತದೊತ್ತಡ ತಗ್ಗಿಸಿ, ಬಿಳಿ ರಕ್ತ ಕಣಗಳ ಮೇಲೆ ದಾಳಿ ಮಾಡಿ ಇಲ್ಲದ ತೊಂದರೆ ಕೊಡುತ್ತದೆ.

Advertisement

ಕೆಲವೊಂದು ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಬೇಕಾಗಬಹುದು. ಜ್ವರ 4 ದಿನಕ್ಕಿಂತ ಹೆಚ್ಚು ದಿನ ಇದ್ದರೆ ವೈದ್ಯರಲ್ಲಿ ತೋರಿಸುವುದು ಅತೀ ಮುಖ್ಯ. ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧವಾಗಿಡುವುದು, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆ ಪರದೆಗಳ ಬಳಕೆ ಈ ಕಾಯಿಲೆಗಳು ಬರದಂತೆ ನೋಡಿ­ಕೊಳ್ಳುವ ವಿಧಾನ.

ಮತ್ತೆ ಕೆಲವು ಜ್ವರಗಳಲ್ಲಿ (ಟೈಫಾಯ್ಡ, ಮೂತ್ರ ಸೋಂಕು, ನ್ಯುಮೋನಿಯ, ಮೆದುಳು ಜ್ವರ) ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ ಸರಿಯಾದ ಆ್ಯಂಟಿಬಯೋಟಿಕ್ಸ್‌ ಮತ್ತು ಇತರ ಚಿಕಿತ್ಸೆಗಳನ್ನು ನೀಡುವುದು ಮಹತ್ವದ್ದಾಗಿ­ರುತ್ತದೆ. ವಿಳಂಬವಾದರೆ ಜೀವಕ್ಕೆ ಅಪಾಯ­ವಾಗುವ ಸಾಧ್ಯತೆಯೂ ಇದೆ. ಇಂತಹ ಕಾಯಿಲೆ­ಗಳು ಬರದಂತೆ ತಡೆಯಲು ಪೌಷ್ಟಿಕಾಂಶಯುಕ್ತ ಆಹಾರ, ಲಸಿಕೆಗಳನ್ನು ಕಾಲಕಾಲಕ್ಕೆ ಹಾಕಿಸುವುದು ಸಹಾಯಕವಾಗುತ್ತದೆ.

ಇನ್ನೊಂದು ಮುಖ್ಯ ಪ್ರಶ್ನೆ, ಮಗುವಿಗೆ ಹಾಲೂಡುತ್ತಿರುವ ತಾಯಿಗೆ ಜ್ವರ ಬಂದರೆ ಏನು ಮಾಡಬೇಕೆಂಬುದು. ಎದೆಹಾಲಿನಿಂದ ಜ್ವರ ಮಗು­ವಿಗೆ ಹರಡುವುದಿಲ್ಲ. ಬದಲಾಗಿ ತಾಯಿಯ ಹಾಲಿನಲ್ಲಿರುವ ಪ್ರತಿಕಾಯಗಳು  ಮಗುವಿನಲ್ಲಿ ಕಾಯಿಲೆ ತೀವ್ರ ಸ್ವರೂಪಕ್ಕೆ ಹೋಗದಂತೆ ತಡೆಯುತ್ತವೆ. ಆದರೆ ತಾಯಿ ಮಗುವನ್ನು ಮುಟ್ಟುವ ಮುನ್ನ ಕೈ ತೊಳೆಯುವುದು, ಕೆಮ್ಮು-ಶೀತ ಇದ್ಧಾಗ ಮಾಸ್ಕ್ ಹಾಕಿಕೊಂಡಿರುವುದು ಮುಖ್ಯ. ತಾಯಿ ತೆಗೆದು­ಕೊಳ್ಳುವ ಔಷಧಗಳು ಹಾಲಿನ ಮೂಲಕ ಮಗುವನ್ನು ತಲುಪುವುದರಿಂದ ವೈದ್ಯರ ಸಲಹೆ ಪಡೆದು ಔಷಧ ತೆಗೆದುಕೊಳ್ಳುವುದು ಸೂಕ್ತ.

ಇನ್ನು, ಒಂದು ವರ್ಷದ ಕೆಳಗಿನ ಮಕ್ಕಳಿಗೆ ಜ್ವರ ಬಂದರೆ ಹೆಚ್ಚಿನ ಕಾಳಜಿಯ ಆವಶ್ಯಕತೆ ಇರುತ್ತದೆ. ಅದರಲ್ಲೂ ಎರಡು ತಿಂಗಳಿಗಿಂತ ಸಣ್ಣ ಮಕ್ಕಳಲ್ಲಿ ಸಣ್ಣ ಕೆಮ್ಮು, ಶೀತ ಸಹ ಶ್ವಾಸಕೋಶದ ಸೋಂಕಾಗಿ(ನ್ಯುಮೋನಿಯ), ರಕ್ತದ ಸೋಂಕಾಗಿ ಹಬ್ಬುವ ಸಾಧ್ಯತೆ ಜಾಸ್ತಿ. ಇಂತಹ ಮಕ್ಕಳಿಗೆ ರಕ್ತ ಪರೀಕ್ಷೆ, ಆ್ಯಂಟಿ ಬಯೋಟಿಕ್‌ ಇಂಜೆಕ್ಷನ್‌ಗಳ ಆವಶ್ಯಕತೆಯೂ ಜಾಸ್ತಿ. ಹಾಗಾಗಿ ಪುಟ್ಟ ಮಗುವಿಗೆ ಮತ್ತು ಹಾಲೂಡುವ ತಾಯಿಗೆ ಸೋಂಕು ತಗಲದಂತೆ ನೋಡಿಕೊಳ್ಳಬೇಕು.

ಕಳೆದ 3 ವರ್ಷಗಳಿಂದ ಎಲ್ಲರನ್ನೂ ಭಯಭೀತ­ರಾಗಿಸಿದ ಮತ್ತೂಂದು ಜ್ವರ ಕೋವಿಡ್‌-19. ಈಗ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂದಿದ್ದರೂ ಚೀನದಲ್ಲಿ ಎದ್ದಿರುವ ಮತ್ಯಾವುದೋ ಜ್ವರ ಎಲ್ಲರನ್ನು ತಲೆಕೆಡಿಸಿ­ಕೊಳ್ಳುವಂತೆ ಮಾಡಿದೆ.

ಏನೇ ಇರಲಿ, ಹೆಚ್ಚಿನ ಜ್ವರಗಳು ಹಾನಿಕಾರಕವಲ್ಲ. ಸರಿಯಾದ ಸಮಯದಲ್ಲಿ ವೈದ್ಯರ ಭೇಟಿ, ಸರಿಯಾದ ಚಿಕಿತ್ಸೆ, ಉತ್ತಮ ಆಹಾರ, ನೀರು ಹೆಚ್ಚಿನ ಜ್ವರಗಳನ್ನು ಗುಣಪಡಿ­ಸುತ್ತದೆ.

ವೈದ್ಯರ ಪಾತ್ರವೇನು?
-ಜ್ವರದ ಕಾರಣವನ್ನು ಪತ್ತೆ ಹಚ್ಚಿ ಕಾಯಿಲೆಯ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ ನೀಡುವುದು.
-ಆವಶ್ಯಕತೆ ಇದ್ದಲ್ಲಿ ಮಾತ್ರ ಆ್ಯಂಟಿ ಬಯೋಟಿಕ್‌ ನೀಡುವುದು. ಅನವಶ್ಯಕ ಆ್ಯಂಟಿಬಯೋಟಿಕ್‌ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕೊಡುವುದು.
ಕಾಯಿಲೆ ಬರದಿರುವಂತೆ ನೋಡಿ­ಕೊಳ್ಳುವ ಮುನ್ನೆಚ್ಚರಿಕೆಯ ಬಗೆಗೆ ಮಾಹಿತಿ.
-ಸರಕಾರದಿಂದ ಕೊಡುವ ಲಸಿಕೆಗಳ ಜತೆಗೆ ಉಪಲಬ್ಧವಿರುವ ಎಲ್ಲ ಲಸಿಕೆಗಳ ಬಗೆಗೆ ಮಾಹಿತಿ ನೀಡಿ, ಲಸಿಕೆ ತೆಗೆದುಕೊಳ್ಳಲು ಪ್ರೋತ್ಸಾಹಿಸುವುದು.
-ಮಗುವಿನ ಆಹಾರ ಪದ್ಧತಿ, ಕಾಯಿಲೆ­ಗಳನ್ನು ಹತ್ತಿಕ್ಕುವಲ್ಲಿ ಪೋಷಕಾಂಶದ ಪಾತ್ರದ ಬಗೆಗಿನ ಮಾಹಿತಿ.
-ಸುತ್ತಮುತ್ತಲಿನ ಪರಿಸರದ ಬಗೆಗಿನ ಕಾಳಜಿ, ಶುದ್ಧ ನೀರು, ಗಾಳಿ, ಆಹಾರದ ಮಹತ್ವದ ಬಗೆಗೆ ತಿಳಿವಳಿಕೆ ನೀಡುವುದು.
-ಪೋಷಕರ ಆತಂಕ, ಪ್ರಶ್ನೆಗಳನ್ನು ಬಗೆಹರಿಸುವುದು.

ಜ್ವರ ಎಂಬ ಭಯ ಬೇಡ,ಆದರೆ ಕಾಳಜಿ ಖಂಡಿತ ಇರಲಿ.

 ಡಾ| ರಕ್ಷಾ ರಾವ್‌ ಮಕ್ಕಳ ತಜ್ಞೆ

Advertisement

Udayavani is now on Telegram. Click here to join our channel and stay updated with the latest news.

Next