ದೇವನಹಳ್ಳಿ: ಆಶಾ ಕಾರ್ಯಕರ್ತರ ಮೂಲಕ ಪ್ರತಿ ಮನೆಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸ ಬೇಕು. ಈ ಕಾರ್ಡ್‌ನಿಂದ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಮೇಳದಲ್ಲಿ ಭಾಗವಹಿಸುವುದರಿಂದ ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ಪರಿಹಾರ ಕಂಡುಕೊಳ್ಳಬಹುದಾಗಿದೆ. ಸುಮಾರು 1500 ಸಾವಿರ ಜನರು ಆರೋಗ್ಯ ತಪಾಸಣೆಗೆ ಬಂದಿದ್ದಾರೆ. ಎಲ್ಲರಿಗೂ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕಾಯಿಲೆ ಬಂದಾಗ ವೈದ್ಯರ ಬಳಿ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬಾರದಂತೆ ಮುಂಜಾಗ್ರತೆ ವಹಿಸುವುದು ತುಂಬಾ ಮುಖ್ಯ. ಯೋಗ ಧ್ಯಾನದ ಕಡೆ ಪ್ರತಿಯೊಬ್ಬರೂ ಒತ್ತು ಕೊಡಬೇಕಿದೆ. ನಿತ್ಯವೂ ವಾಯುವಿಹಾರ, ವ್ಯಾಯಾಮದಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ಮೇಳ ಆಯೋಜಿಸಿದರೆ ಗ್ರಾಮೀಣ ಜನರಿಗೆ ಸಹಕಾರಿಯಾಗಲಿದೆ ಎಂದರು. ಈ ವೇಳೆಯಲ್ಲಿ ಪುರಸಭಾಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ, ಜಿಪಂ ಸಿಇಒ ರೇವಣಪ್ಪ, ತಾಪಂ ಇಒ ವಸಂತಕುಮಾರ್, ತಹಶೀಲ್ದಾರ್ ಶಿವರಾಜ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಪ್ಪೇಸ್ವಾಮಿ, ಆಯುಷ್ ಇಲಾಖೆ ಜಿಲ್ಲಾ ನಿರ್ದೇಶಕ ಡಾ.ಮೊಹಮ್ಮದ್ ರಫಿ ಅಕಿಬ್, ಡಾ.ವಿಜಯಲಕ್ಷ್ಮೀ, ತಾಲೂಕು ವೈದ್ಯಾಧಿಕಾರಿ ಡಾ.ಸಂಜಯ್, ವಿಶ್ವನಾಥಪುರ ಪಿಎಚ್‌ಸಿ ವೈದ್ಯ ಮುತಹೀರ್‌ಹಫೀಸ್, ಪುರಸಭಾ ಸಿಒ ನಾಗರಾಜ್ ಇತರರಿದ್ದರು.
ಬಿಸಿಲಿನಲ್ಲಿ ಕಾದ ಜನರು, ಸಚಿವ ಗೈರು : 9 ಗಂಟೆಗೆ ಉದ್ಘಾಟನೆಯಾಗಬೇಕಿದ್ದ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಗೈರಾಗಿದ್ದರು. 12.30ಕ್ಕೆ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅಧ್ಯಕ್ಷತೆ ಯಲ್ಲಿ ಉದ್ಘಾಟನೆ ನೆರವೇರಿಸಲಾಯಿತು. ಬೆಳಗ್ಗೆಯಿಂದಲೇ ಉದ್ಘಾಟನೆಗಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಬಿಸಿಲಿನಲ್ಲಿ ಕುಳಿತಿದ್ದರು. ಸಚಿವರು ಗೈರಾಗಿದ್ದರಿಂದ ಬೇಸರ ವ್ಯಕ್ತಪಡಿಸಿದರು.