Advertisement

ಆರೋಗ್ಯ, ಅಂಗವೈಕಲ್ಯ ಮತ್ತು ಪುನರ್ವಸತಿ

11:09 PM Mar 26, 2022 | Team Udayavani |

“ಆರೋಗ್ಯ, ಅಂಗವೈಕಲ್ಯ ಮತ್ತು ಪುನರ್ವಸತಿ’-
ನಿಲ್ಲಿ, ಆಲೋಚಿಸಿ – ಈ ಮೂರು ಪದಗಳಿಂದ ನಿಮಗೇನು ಅರ್ಥವಾಗುತ್ತದೆ?
ಈ ಪ್ರಶ್ನೆಗೆ ಉತ್ತರವು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಈಗ ನಾವು “ಆರೋಗ್ಯ’ ಎಂಬ ಪದದ ಅರ್ಥ ಏನೆಂಬುದನ್ನು ನೋಡೋಣ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವ್ಯಾಖ್ಯಾನಿಸುವಂತೆ, ಆರೋಗ್ಯ ಎಂದರೆ “ಕಾಯಿಲೆ ಅಥವಾ ದೇಹದೌರ್ಬಲ್ಯ ಇಲ್ಲದಿರುವಿಕೆ ಮಾತ್ರವೇ ಅಲ್ಲದೆ ಸಂಪೂರ್ಣವಾದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸೌಖ್ಯ’. ಯಾವುದೇ ನೋವು ಅಥವಾ ದಣಿವು ಇಲ್ಲದೆ ದೈನಿಕ ಚಟುವಟಿಕೆಗಳನ್ನು ನಡೆಸಬಲ್ಲ ಸಾಮರ್ಥ್ಯವು ದೈಹಿಕ ಸೌಖ್ಯ. ಸ್ವಂತ ಸಾಮರ್ಥ್ಯಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಅನುದಿನದ ಒತ್ತಡಗಳನ್ನು ತಾಳಿಕೊಳ್ಳಬಲ್ಲ ಸಾಮರ್ಥ್ಯವೇ ಮಾನಸಿಕ ಸೌಖ್ಯ. ಸಾಮಾಜಿಕ ವರ್ತುಲದಲ್ಲಿ ಅರ್ಥಪೂರ್ಣ ಸಂಬಂಧಗಳನ್ನು ಸ್ಥಾಪಿಸಿ ನಿರ್ವಹಿಸಬಲ್ಲ ಸಾಮರ್ಥ್ಯವು ಸಾಮಾಜಿಕ ಸೌಖ್ಯ. ಈ ಮೂರು ಆಯಾಮಗಳಲ್ಲಿ ಸಮತೋಲನವೇ ಉತ್ತಮ ಆರೋಗ್ಯ.

Advertisement

ಉತ್ತಮ ಆರೋಗ್ಯದಿಂದ ನಮಗೆ ಸಾಮಾಜಿಕ ಚಟುವಟಿಕೆಗಳು ಮತ್ತು ಹೊಣೆಗಾರಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದ ನಾವು ನಮ್ಮ ಕೆಲಸಗಳನ್ನು, ಹವ್ಯಾಸಗಳನ್ನು ಆನಂದಿಸುವುದರ ಜತೆಗೆ ನಮ್ಮ ಆಪೆ¤àಷ್ಟರ ಜತೆಗೆ ಲವಲವಿಕೆಯಿಂದ ಸಮಯ ಕಳೆಯಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ನಾವು ಅನೇಕರು ಉತ್ತಮ ಆರೋಗ್ಯವನ್ನು ಹೊಂದಿರುತ್ತೇವೆ. ಕೆಲವೊಮ್ಮೆ ನಾವು ಉತ್ಸಾಹವನ್ನು ಕಳೆದುಕೊಳ್ಳುತ್ತೇವೆ ಅಥವಾ ದೈಹಿಕವಾಗಿ ಗಾಯಗೊಳ್ಳುತ್ತೇವೆ; ಆದರೆ ಇದು ತಾತ್ಕಾಲಿಕವಾಗಿರುತ್ತದೆ. ಆಗ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ ಅಥವಾ ಕೆಲವೊಮ್ಮೆ ಆಪ್ತ ಸ್ನೇಹಿತರ ಜತೆಗೆ ಒಂದು ಸ್ಕೂಪ್‌ ಐಸ್‌ಕ್ರೀಮ್‌ ಅಥವಾ ಕಾಫಿ ಸೇವಿಸುವುದರಿಂದಲೂ ನಮಗೆ ಉಪಶಮನದ ಅನುಭವ ಪಡೆಯಲು ಸಾಧ್ಯವಾಗುತ್ತದೆ.

ಈಗ ನಾವು ವೈಕಲ್ಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಇದು ಕೆಲವು ನಿರ್ದಿಷ್ಟ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲದ ಮತ್ತು ಸುತ್ತಲಿನ ಜಗತ್ತಿನ ಜತೆಗೆ ಸಹಜ ಸಂವಹನ ನಡೆಸಲು ಸಾಧ್ಯವಿಲ್ಲದ ದೇಹ ಮತ್ತು ಮನಸ್ಸಿನ ಯಾವುದೇ ಒಂದು ಸ್ಥಿತಿ. ವೈಕಲ್ಯಗಳಲ್ಲಿ ಹಲವು ವಿಧಗಳಿವೆ. ಪ್ರಸ್ತುತ ಕೇಂದ್ರ ಸರಕಾರವು 21 ಬಗೆಯ ವಿಭಿನ್ನ ವೈಕಲ್ಯಗಳನ್ನು ಪಟ್ಟಿ ಮಾಡಿದೆ. ಲೊಕೊಮೋಟರ್‌ ವೈಕಲ್ಯಕ್ಕೆ ಒಂದು ಉದಾಹರಣೆ ಎಂದರೆ, ಬಿದ್ದುದರಿಂದ ಉಂಟಾದ ಕಾಲು ಮೂಳೆ ಮುರಿತದಿಂದಾಗಿ ಈ ಹಿಂದಿನಂತೆ ನಡೆಯಲು ಸಾಧ್ಯವಾಗದೆ ಇರುವಿಕೆ. ಹೀಗಾಗಿ ಮೂಳೆ ಮುರಿತವು ನಡೆಯುವ ಚಟುವಟಿಕೆಗೆ ಮಿತಿಯನ್ನು ಹೇರುತ್ತದೆ (ಚಟುವಟಿಕೆಗೆ ಮಿತಿ). ಈ ಚಟುವಟಿಕೆಯ ಮಿತಿಯು ವ್ಯಕ್ತಿಯ ದಿನಚರಿಯಲ್ಲಿ ಸ್ನಾನಗೃಹಕ್ಕೆ ಹೋಗುವುದು, ಕಾರು ಚಲಾಯಿಸುವುದು, ಒಂದು ಸಮಾರಂಭದಲ್ಲಿ ಭಾಗವಹಿಸುವಂತಹ ಚಟುವಟಿಕೆಗಳಲ್ಲಿ ಅಡಚಣೆಯನ್ನು ಉಂಟು ಮಾಡುತ್ತದೆ. ಇದರರ್ಥವೆಂದರೆ, ಸುತ್ತಲಿನ ಸಮಾಜ, ಜಗತ್ತಿನ ಜತೆಗೆ ಸಂವಹನವು ಬಾಧಿತವಾಗುತ್ತದೆ (ಭಾಗವಹಿಸುವಿಕೆಯಲ್ಲಿ ಅಡಚಣೆ).

ಈ ವೈಕಲ್ಯವು ತಾತ್ಕಾಲಿಕವಾದುದು; ಮೂಳೆ ಮುರಿತವು ಗುಣವಾಗಿ, ಪ್ಲಾಸ್ಟರ್‌ ತೆಗೆದುಹಾಕಿದ ಬಳಿಕ ವ್ಯಕ್ತಿಯು ತಾನು ಈ ಹಿಂದೆ ನಡೆಸುತ್ತಿದ್ದ ಚಟುವಟಿಕೆಗಳ ಮಟ್ಟಕ್ಕೆ ಮರಳುತ್ತಾನೆ. ಇಂತಹ ತಾತ್ಕಾಲಿಕ ವೈಕಲ್ಯಗಳು ದೀರ್ಘ‌ಕಾಲಿಕ ಆಸ್ಪತ್ರೆ ಅಥವಾ ತೀವ್ರ ನಿಗಾ ಘಟಕ ವಾಸ, ಗಂಭೀರ ಶಸ್ತ್ರಚಿಕಿತ್ಸೆ, ಗರ್ಭಧಾರಣೆ, ಕೋವಿಡ್‌-19ನಂತಹ ಸೋಂಕು ಇತ್ಯಾದಿಗಳಿಂದ ಉಂಟಾಗಬಹುದು. ಇನ್ನು ಕೆಲವು ವೈಕಲ್ಯಗಳಿದ್ದು, ಇವು ದೀರ್ಘ‌ಕಾಲಿಕ ಅಥವಾ ಶಾಶ್ವತವಾಗಿರುತ್ತವೆ. ಉದಾಹರಣೆಗೆ, ಬಾಲ್ಯದ ವೈಕಲ್ಯಗಳು, ತಲೆಗೆ ಗಾಯ ಉಂಟು ಮಾಡಿದ ಅವಘಡಗಳು ಅಥವಾ ಲಕ್ವಾ, ಪಕ್ಷವಾತ, ಕೈಕಾಲುಗಳನ್ನು ಕಳೆದುಕೊಳ್ಳುವುದು ಇತ್ಯಾದಿ. ಇಂತಹ ವೈಕಲ್ಯಗಳು ಅವುಗಳಿಗೆ ಒಳಗಾಗುವ ವ್ಯಕ್ತಿ ಮತ್ತು ಅವರ ಕುಟುಂಬಕ್ಕೆ ದೈಹಿಕ, ಮಾನಸಿಕ, ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳಲ್ಲಿ ಗಮನಾರ್ಹ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತವೆ. ಇವುಗಳು ದೈನಿಕ ಚಟುವಟಿಕೆಗಳಲ್ಲಿ ತೀವ್ರ ತರಹದ ಅಡಚಣೆಯನ್ನು ಉಂಟು ಮಾಡುತ್ತವೆ, ಸಮಾಜದಲ್ಲಿ ಭಾಗಿಯಾಗುವುದಕ್ಕೆ ಅಡ್ಡಿಯಾಗುತ್ತವೆ ಮತ್ತು ವೈಕಲ್ಯಕ್ಕೆ ಈಡಾಗಿರುವ ವ್ಯಕ್ತಿಯು ತನ್ನ ಬದುಕನ್ನು ಸಂಪೂರ್ಣವಾಗಿ ಆನಂದಿಸಲು ಅಡ್ಡಿಯಾಗುತ್ತವೆ.

ಇಂತಹ ತಾತ್ಕಾಲಿಕ ಮತ್ತು ಖಾಯಂ ವೈಕಲ್ಯಗಳ ಚಿಕಿತ್ಸೆಯಲ್ಲಿ ಪುನರ್ವಸತಿಯು ಚಿಕಿತ್ಸೆಯು ಪ್ರಮುಖವಾದ ಒಂದು ಅಂಶವಾಗಿದೆ. ವೈಕಲ್ಯಕ್ಕೆ ಈಡಾಗಿರುವ ವ್ಯಕ್ತಿಗೆ ಸಾಧ್ಯವಿರುವ ಎಲ್ಲ ಮಾರ್ಗಗಳಿಂದ ಅತ್ಯುತ್ತಮ ಚಟುವಟಿಕೆಗಳ ಫ‌ಲಿತಾಂಶ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಸಾಧಿಸುವ ಮೂಲಕ ಇಂತಹ ಆರೋಗ್ಯ ಸ್ಥಿತಿಯ ಪರಿಣಾಮಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪುನರ್ವಸತಿಯು ಸಹಾಯ ಮಾಡುತ್ತದೆ. ವೈಕಲ್ಯವುಳ್ಳ ವ್ಯಕ್ತಿಯು ತನ್ನ ಜೀವನವನ್ನು ಈ ಹಿಂದಿನಂತೆಯೇ ಆನಂದಿಸುವುದಕ್ಕೆ ಯಾವ ಗುರಿಗಳು ಮುಖ್ಯ ಎಂಬುದನ್ನು ಆದ್ಯತೆಯ ಮೇಲೆ ಗುರುತಿಸುವುದು ಪುನರ್ವಸತಿಯ ಗುರಿ. ಅದೇ ಲೊಕೊಮೋಟರ್‌ ಉದಾಹರಣೆಯನ್ನು ಎತ್ತಿಕೊಳ್ಳುವುದಾದರೆ, ಕಾಲು ಮೂಳೆ ಮುರಿತಕ್ಕೆ ಒಳಗಾಗಿರುವ ವ್ಯಕ್ತಿಗೆ ಕ್ರಚಸ್‌ ಉಪಯೋಗಿಸಿ ನಡೆದಾಡುವ ತರಬೇತಿ ನೀಡುವುದು, ಇದೇ ವೇಳೆ ಅವರ ಸುರಕ್ಷೆಯನ್ನು ಖಾತರಿಪಡಿಸುವುದು ಪುನರ್ವಸತಿಯ ಭಾಗವಾಗಿರುತ್ತದೆ. ಇದರಿಂದ ಅವರಿಗೆ ಚಟುವಟಿಕೆಗಳಲ್ಲಿ ಈ ಹಿಂದಿನಂತೆಯೇ ಭಾಗಿಯಾಗುವುದು ಸಾಧ್ಯವಾಗುತ್ತದೆ. ದೀರ್ಘ‌ಕಾಲಿಕ, ಬಹು ಆಯಾಮದ ವೈಕಲ್ಯಗಳನ್ನು ಹೊಂದಿರುವ ವ್ಯಕ್ತಿಗಳ ಪುನರ್ವಸತಿಯು ಹೆಚ್ಚು ಸಂಕೀರ್ಣವಾಗಿರುತ್ತದೆ. ಯಾಕೆಂದರೆ ಹಲವು ವಿಧದ ವೈಕಲ್ಯಗಳನ್ನು ಹೊಂದಿರುವವರ ಆರೈಕೆ ಮತ್ತು ಪುನರ್ವಸತಿಯು ತುಂಬ ಕ್ಲಿಷ್ಟವಾಗಿರುತ್ತದೆ.

Advertisement

ಈ ಪುನರ್ವಸತಿಯನ್ನು ಪುನರ್ವಸತಿ ವೈದ್ಯೋಪಚಾರ (ದೈಹಿಕ ಔಷಧೋಪಚಾರ ಮತ್ತು ಪುನರ್ವಸತಿ) ದಲ್ಲಿ ವಿಶೇಷ ತರಬೇತಿ ಪಡೆದಿರುವ ವೈದ್ಯರು, ಅವರ ಜತೆಗೆ ಪುನರ್ವಸತಿ ನರ್ಸ್‌ಗಳು, ಫಿಸಿಕಲ್‌ ಮತ್ತು ಆಕ್ಯುಪೇಶನಲ್‌ ಥೆರಪಿಸ್ಟ್‌ ಗಳು, ಸ್ಪೀಚ್‌ ಮತ್ತು ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ ಗಳು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ ತಂಡದಿಂದ ನಡೆಸಲಾಗುತ್ತದೆ.

ಈ ತಂಡವು ಬಾಧಿತ ವ್ಯಕ್ತಿಯು ತನ್ನ ಪೂರ್ಣ ಸಾಮರ್ಥ್ಯಕ್ಕೆ ಮರಳುವ ನಿಟ್ಟಿನಲ್ಲಿ ಆರೋಗ್ಯ ಪುನರ್‌ಸ್ಥಾಪನೆ, ಚಟುವಟಿಕೆಗಳ ಗುಣಮಟ್ಟ ವೃದ್ಧಿ, ಜೀವನ ಗುಣಮಟ್ಟ ವೃದ್ಧಿಗಳನ್ನು ಪುನರ್‌ಸ್ಥಾಪಿಸುವತ್ತ ಸಂಯೋಜಿತವಾಗಿ ಕೆಲಸ ಮಾಡುತ್ತದೆ. ಪುನರ್ವಸತಿಯು ಜನರಿಗೆ ದೈನಿಕ ಜೀವನ ಚಟುವಟಿಕೆಗಳಲ್ಲಿ ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ, ಶೈಕ್ಷಣಿಕ ಕೆಲಸಕಾರ್ಯಗಳು, ಮನೋಲ್ಲಾಸದಾಯಕ ಚಟುವಟಿಕೆಗಳು ಮತ್ತು ಜೀವನದ ಅರ್ಥಪೂರ್ಣ ಪಾತ್ರಗಳನ್ನು ನಿರ್ವಹಿಸಲು ನೆರವಾಗುತ್ತದೆ.

ನರಶಾಸ್ತ್ರೀಯ ಮತ್ತು ಇತರ ವೈಕಲ್ಯಗಳಿಗೆ ಪುನರ್ವಸತಿ ಸೇವೆಗಳನ್ನು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಫಿಸಿಕಲ್‌ ಮೆಡಿಸಿನ್‌ ಮತ್ತು ರಿಹ್ಯಾಬಿಲಿಟೇಶನ್‌ ವಿಭಾಗದಲ್ಲಿ ಪಡೆದುಕೊಳ್ಳಬಹುದು. ನಮ್ಮ ತಂಡವು ಸಮಗ್ರ, ಸಂಪೂರ್ಣ ಮತ್ತು ವ್ಯಕ್ತಿ ನಿರ್ದಿಷ್ಟ ಪುನರ್ವಸತಿ ಯೋಜನೆಗಳನ್ನು ಒದಗಿಸುತ್ತದೆ.

ಈ ಕೆಳಕಂಡ ವೈಕಲ್ಯಗಳನ್ನು ಹೊಂದಿದ್ದಲ್ಲಿ ನಮ್ಮ ಸೇವೆಗಳು ನಿಮಗೆ ಅಥವಾ
ನಿಮಗೆ ಗೊತ್ತಿದ್ದವರಿಗೆ ಉಪಯೋಗಿಯಾಗಬಲ್ಲವು:
– ಲಕ್ವಾ, ಪಕ್ಷವಾತ, ಮಿದುಳಿನ ಗಾಯ, ಯಾವುದೇ ವಿಧವಾದ ನರ ಹಾನಿಯಿಂದ ಚೇತರಿಸಿಕೊಳ್ಳುತ್ತಿರುವವರು.
– ಮೂತ್ರಕೋಶ, ಮಲ ಚಲನೆ ಅಥವಾ ಲೈಂಗಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನರಶಾಸ್ತ್ರೀಯ ಹಾನಿಗೆ ಒಳಗಾಗಿರುವವರು.
– ದೀರ್ಘ‌ಕಾಲಿಕ ನೋವು, ಪುನರಾವರ್ತಿತ ಒತ್ತಡ ಗಾಯ, ಬೆನ್ನಿನ ಸಮಸ್ಯೆಗಳು, ಸಂಧಿವಾತ ಮತ್ತು ಇತರ ಕಾರಣಗಳಿಂದ ಚಟುವಟಿಕೆಗಳಲ್ಲಿ ಅಡಚಣೆ ಹೊಂದಿರುವವರು.
– ಶಸ್ತ್ರಚಿಕಿತ್ಸೆಗೆ ಒಳಗಾಗಲು ಯೋಜನೆ ಹಾಕಿಕೊಂಡಿರುವವರು ಅಥವಾ ಸಂಧಿ ಬದಲಾವಣೆ, ಹೃದಯ ಶಸ್ತ್ರಚಿಕಿತ್ಸೆ, ಮಿದುಳು- ಬೆನ್ನುಹುರಿ ಶಸ್ತ್ರಚಿಕಿತ್ಸೆ ಅಥವಾ ಸಿಸೇರಿಯನ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು.
– ದೀರ್ಘ‌ಕಾಲಿಕ ತೀವ್ರ ನಿಗಾ ಘಟಕ ವಾಸದಿಂದಾಗಿ ನಿಶ್ಶಕ್ತಿಯನ್ನು ಹೊಂದಿರುವವರು, ದೈನಿಕ ಚಟುವಟಿಕೆಗಳನ್ನು ನಡೆಸಲು ಕಷ್ಟವಾಗುತ್ತಿರುವವರು ಅಥವಾ ಜೀವನೋತ್ಸಾಹ, ಶಕ್ತಿಗುಂದಿರುವವರು.
– ಶಿಶುವಿಗೆ ಜನ್ಮ ನೀಡಿರುವುದು, ಋತುಚಕ್ರ ಬಂಧ ಅಥವಾ ಮುಪ್ಪು ಇತ್ಯಾದಿ ಜೀವನ ಸಂಬಂಧಿ ಬದಲಾವಣೆಗಳಿಂದಾಗಿ ದೈಹಿಕ ಚಟುವಟಿಕೆಗಳಿಗೆ ಹೊಸ ಸವಾಲುಗಳನ್ನು ಎದುರಿಸುತ್ತಿರುವವರು.
– ಕೋವಿಡ್‌-19 ಸೋಂಕಿಗೆ ಒಳಗಾಗಿ ಹಿಂದಿನ ರೂಢಿಗತ ಜೀವನಕ್ಕೆ ಮರಳುವಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿರುವವರು.
– ಕೈಕಾಲುಗಳ ವೈಕಲ್ಯ, ಸೆರಬ್ರಲ್‌ ಪಾಲ್ಸಿ ಅಥವಾ ವಯಸ್ಸಿಗೆ ತಕ್ಕಂತೆ ಬೆಳವಣಿಗೆಯ ಕೊರತೆಯಂತಹ ಬಾಲ್ಯದ ವೈಕಲ್ಯಗಳನ್ನು ಅನುಭವಿಸುತ್ತಿರುವವರು.

ಡಾ| ಮೈತ್ರೇಯಿ ಸಿ. ಪಾಟೀಲ್‌
ಅಸಿಸ್ಟೆಂಟ್‌ ಪ್ರೊಫೆಸರ್‌, ಫಿಸಿಕಲ್‌ ಮೆಡಿಸಿನ್‌ ಮತ್ತು ರಿಹ್ಯಾಬಿಲಿಟೇಶನ್‌ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next